ಮುಖಪುಟ /ಸುದ್ದಿ ಸಮಾಚಾರ   
 

ಇಂದಿನ ಪೀಳಿಗೆಗೆ ನಾಡು ನುಡಿ ಅಸ್ಮಿತೆ ಇಲ್ಲ- ಕಂಬಾರ
ಡಾ. ಬೈರಮಂಗಲ ರಾಮೇಗೌಡ ದಂಪತಿಗೆ ಸನ್ಮಾನ

ಡಾ. ಬೈರಮಂಗಲ ರಾಮೇಗೌಡ ದಂಪತಿಗೆ ಡಾ. ಚಂದ್ರಶೇಖರ ಕಂಬಾರರಿಂದ ಸನ್ಮಾನಬೆಂಗಳೂರು, ಮೇ 24:  ಇಂದಿನ ಪೀಳಿಗೆಯ ಮಕ್ಕಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಯ ಅಸ್ಮಿತೆಯೇ ಇಲ್ಲವಾಗಿದ್ದು, ಇದು ಅಪಾಯಕಾರಿ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿಂದು ಡಾ. ಬೈರಮಂಗಲ ರಾಮೇಗೌಡರ ಸಿಂಧೂರಿ ಕಥಾ ಸಂಕಲನ ಸೇರಿದಂತೆ ವಿವಿಧ ಲೇಖಕರ ನಾಲ್ಕು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಮ್ಮ ಪೀಳಿಗೆಯ ಜನರಲ್ಲಿ ಭಾಷೆ, ಸಂಸ್ಕೃತಿ, ನೆಲದೊಂದಿಗೆ ಕರುಳುಬಳ್ಳಿ ಸಂಬಂಧ ಇತ್ತು. ಆದರೆ, ಇಂದಿನ ಮಕ್ಕಳಲ್ಲಿ ಇದು ಮರೆಯಾಗಿದೆ ಎಂದು ವಿಷಾದಿಸಿದರು.

Sindhoori cover pageಬೈರಮಂಗಲ ರಾಮೇಗೌಡರು ತಮ್ಮ ಸಿಂಧೂರಿ ಕಥಾ ಸಂಕಲನದಲ್ಲಿ ಸಂಬಂಧಗಳ ತಾಕಲಾಟವನ್ನು ನವಿರಾಗಿ ವಿವರಿಸಿದ್ದಾರೆ, ವಾಸ್ತವತೆಗೆ ಆ ಕಥೆಗಳು ಹತ್ತಿರವಾಗಿದೆ ಎಂದರು.

ಇದೇ ಸಂದರ್ಭದಲ್ಲಿ 60ರ ಹೊಸ್ತಿಲಲ್ಲಿರುವ ಬೈರಮಂಗಲ ರಾಮೇಗೌಡರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಅಂಕಿತ ಪ್ರಕಾಶನ ಹೊರತಂದಿರುವ ಮರೆತು ಹೋದ ಮಹಾ ಸಾಮ್ರಾಜ್ಯ ವಿಜಯನಗರ, ಚಂದ್ರವಂಶದ ಕಥೆ ಹಾಗೂ ಪಂಜೆ ಮಂಗೇಶರಾಯರ ಅಪ್ರಕಟಿತ ಬರಹಗಳು ಕೃತಿಗಳನ್ನೂ ಕಂಬಾರರು ಬಿಡುಗಡೆ ಮಾಡಿದರು.

ಆನಂದ ಮಾದಲಗೆರೆಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಪ್ರಕಾಶ್ ಕಂಬತ್ತಹಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

ಮುಖಪುಟ /ಸುದ್ದಿ ಸಮಾಚಾರ