ಮುಖಪುಟ /ಸುದ್ದಿ ಸಮಾಚಾರ 

ಏನಿದು ಸಮೀಕ್ಷೆ?

ಬೆಂಗಳೂರು: ಸಾಮಾನ್ಯವಾಗಿ ಮತದಾರರ ನಾಡಿ ಮಿಡಿತ ಅಳೆಯಲು ಮೂರು ರೀತಿಯ ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಮೊದಲನೆಯದು ಪ್ರೀಪೋಲ್ ಸರ್ವೇ ಅರ್ಥಾತ್ ಮತದಾನಪೂರ್ವ ಸಮೀಕ್ಷೆ. ಈ ಸಮೀಕ್ಷೆಯನ್ನು ಮತದಾನಕ್ಕೆ ೮-೧೦ ದಿನ ಇರುವಾಗ ನಡೆಸಲಾಗುತ್ತದೆ.

ಈ ಸಮೀಕ್ಷೆಯಲ್ಲಿ ಸಮೀಕ್ಷೆ ನಡೆಸುವ ಸಂಸ್ಥೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಕ್ಷೇತ್ರಗಳ, ವೃತ್ತಿಯ ಆಯ್ದ ಮತದಾರರಿಗೆ ಪ್ರಶ್ನಾವಳಿಯನ್ನು ನೀಡಿ ಅವರಿಂದ ಉತ್ತರ ಪಡೆದು ಅದರ ಆಧಾರದ ಮೇಲೆ ಇಂಥ ಪಕ್ಷ ಶೇಕಡಾವಾರು ಇಷ್ಟು ಮತ ಪಡೆಯಲಿದೆ. ಇಂತಿಷ್ಟು ಸೀಟು ಪಡೆಯಲಿದೆ ಎಂದು ಹೇಳುತ್ತದೆ.

ಮತ್ತೊಂದು ರೀತಿಯ ಸಮೀಕ್ಷೆ ಎಂಟರೆನ್ಸ್ ಪೋಲ್ ಅರ್ಥಾತ್ ಮತಗಟ್ಟೆ ಪ್ರವೇಶಿಸುವ ಸಂದರ್ಭದಲ್ಲಿನ ಸಮೀಕ್ಷೆ. ಈ ಸರ್ವೆಯಲ್ಲಿ ಮತದಾರರು ಮತಗಟ್ಟೆ ಪ್ರವೇಶಿಸುವಾಗ ಅವರ ಅಭಿಪ್ರಾಯ ಸಂಗ್ರಹಿಸಿ ಲೆಕ್ಕ ಹಾಕಲಾಗುತ್ತದೆ. ಆದರೆ, ರಾಜ್ಯದಲ್ಲಿ ಈ ಸಮೀಕ್ಷೆ ಮತದಾರರ ಮೇಲೆ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದೆ.

ಮೂರನೆಯದು ಎಕ್ಸಿಟ್ ಪೋಲ್ ಅರ್ಥಾತ್ ಮತದಾನೋತ್ತರ ಸಮೀಕ್ಷೆ ಅಥವಾ ಮತಗಟ್ಟೆ ಸಮೀಕ್ಷೆ. ಇಲ್ಲಿ ಮತದಾರರು ಮತ ಚಲಾಯಿಸಿ ಹೊರಬಂದ ಬಳಿಕ ಅವರ ಅಭಿಪ್ರಾಯ ಸಂಗ್ರಹಿಸಿ ಯಾವ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರಬಹುದು ಎಂದು ಅಂದಾಜು ಮಾಡಲಾಗುತ್ತದೆ. ಬಹುತೇಕ ಎಕ್ಸಿಟ್ ಪೋಲ್ ನಿಖರವಾಗಿರುತ್ತದೆ ಎಂದು ಹೇಳಲಾಗುತ್ತದಾದರೂ ಹಲವು ಸಂದರ್ಭಗಳಲ್ಲಿ ಸಮೀಕ್ಷೆಗಳ ಲೆಕ್ಕಾಚಾರ ತಲೆಕೆಳಕಾಗಿರುವುದೂ ಉಂಟು.

ಮುಖಪುಟ /ಸುದ್ದಿ ಸಮಾಚಾರ