ಮುಖಪುಟ /ಸುದ್ದಿ ಸಮಾಚಾರ 

 ಸಾಧಕ ಸಿದ್ದರಾಮಯ್ಯಗೆ ಗದ್ದುಗೆ

೨೮ನೇ ಸಿಎಂ ಸೋಮವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕಾರ

Siddaramaiahಬೆಂಗಳೂರು, ಮೇ ೧೦: ರಾಜ್ಯದ ೨೮ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅಕ್ಷಯ ತದಿಗೆಯ ದಿನವಾದ ಸೋಮವಾರ ಇಲ್ಲವೇ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ೧೨೧ ಸ್ಥಾನಗಳೊಂದಿಗೆ ಬಹುಮತ ಪಡೆದ ಹಿನ್ನೆಲೆಯಲ್ಲಿ ಇಂದು ನಗರಕ್ಕೆ ಆಗಮಿಸಿದ್ದ ಎ.ಕೆ. ಆಂಟನಿ ನೇತೃತ್ವದ ಎ.ಐ.ಸಿಸಿ. ವೀಕ್ಷಕರ ನಿಯೋಗ ಶಾಸಕಾಂಗ ಪಕ್ಷದ ಸಭೆ ನಡೆಸಿ, ಗೌಪ್ಯ ಮತದಾನದ ಮೂಲಕ ನೂತನ ಶಾಸಕರ ಅಭಿಪ್ರಾಯ ಸಂಗ್ರಹಿಸಿಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತು.

ಮೊದಲಿಗೆ ಶಾಸಕರೊಂದಿಗೆ ಚರ್ಚೆ ನಡೆಸಿದ ವೀಕ್ಷಕರು, ನಂತರ ಅವರ ಅಭಿಪ್ರಾಯವನ್ನು ಲಿಖಿತ ಮೂಲಕ ತಿಳಿಸುವಂತೆ ಸೂಚಿಸಿದರು. ಬಹುತೇಕ ಶಾಸಕರು ಸಿದ್ದರಾಮಯ್ಯ ಪರ ಒಲವು ತೋರಿದ ಹಿನ್ನೆಲೆಯಲ್ಲಿ ಸಂಜೆಯ ವೇಳೆಗೆ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಡಿರುವುದಾಗಿ ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ತಿಳಿಸಿದರು.

ಇದಕ್ಕೂ ಮುನ್ನ ಸಭೆಯ ನಿರ್ಧಾರವನ್ನು ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ವೀಕ್ಷಕರ ತಂಡ  ದೂರವಾಣಿ ಮೂಲಕ ತಿಳಿಸಿತು. ೭೦ಕ್ಕಿಂತ ಹೆಚ್ಚು ಶಾಸಕರ ಬೆಂಬಲ ಇದ್ದರೆ ನೀವೇ ನಾಯಕನ ಆಯ್ಕೆ ಪ್ರಕಟಿಸಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಆಂಟನಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ನಾಯಕರಾಗಿ ಆಯ್ಕೆ ಮಾಡಿರುವುದಾಗಿ ಅಧಿಕೃತ ಪ್ರಕಟಣೆ ಮಾಡಿದರು.

ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹಾಗೂ ಮಧುಸೂದನ ಮಿಸ್ತ್ರಿ ಅವರು ರಾಜಭವನಕ್ಕೆ ತೆರಳಿ, ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ ನೂತನ ಸರ್ಕಾರ ರಚನೆಯ ಹಕ್ಕು ಪ್ರತಿಪಾದಿಸಿದರು.

ಈಗಾಗಲೇ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಹಾಗೂ ನೂತನ ಸರ್ಕಾರ ರಚನೆಗೆ ಕಾಂಗ್ರೆಸ್ ಹಕ್ಕು ಪ್ರತಿಪಾದಿಸಿರುವ ಕಾರಣ, ರಾಜ್ಯಪಾಲರು ಚುನಾವಣಾ ಆಯೋಗದಿಂದ ಅಧಿಕೃತ ಅಧಿಸೂಚನೆ ತರಿಸಿಕೊಂಡು ನೂತನ ಸರ್ಕಾರದ ರಚನೆಗೆ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆಯಷ್ಟೇ ಬಾಕಿ ಇದೆ.

ಈ ಪ್ರಕ್ರಿಯೆ ತಡವಾದರೆ ಪ್ರಮಾಣ ವಚನ ಬುಧವಾರಕ್ಕೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ. 

ಸೋಮವಾರ ಬೆಳಗ್ಗೆ ಪ್ರಮಾಣ: ಮೇ ೧೩ರಂದು ಅಕ್ಷಯ ತೃತೀಯ ಇರುವ ಹಿನ್ನೆಲೆಯಲ್ಲಿ ಅತ್ಯಂತ ಪ್ರಶಸ್ತ ದಿನವಾಗಿದ್ದು ಅಂದು ನೂತನ ಸರ್ಕಾರದ ರಚನೆ ಮಾಡುವಂತೆ ಹಾಗೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಸಿದ್ದರಾಮಯ್ಯ ನಿರ್ಧರಿಸಿದ್ದು, ಸೋಮವಾರದಂದು ಬೆಳಗ್ಗೆ ೧೧.೧೫ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ತಿಳಿದುಬಂದಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ: ವಿಧಾನಸೌಧದ ಮುಂಭಾಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ಕಂಠೀರವ ಕ್ರೀಡಾಂಗಣದಲ್ಲಿ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈ ಕುರಿತಂತೆ ಇಂದು ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲೇ ಭೇಟಿ ಮಾಡಿದ ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್  ಈ ಕುರಿತು ಚರ್ಚಿಸಿದರು.

ಮುಖಪುಟ /ಸುದ್ದಿ ಸಮಾಚಾರ