ಮುಖಪುಟ /ಸುದ್ದಿ ಸಮಾಚಾರ 

 ಸೋತ ಪರಮೇಶ್ವರ್ ಗೂ ಸಚಿವ ಸ್ಥಾನ

ರಾಜ್ಯದಲ್ಲಿ ಪಕ್ಷ ಗೆಲ್ಲಿಸಿದರೂ, ವೈಯಕ್ತಿಕವಾಗಿ ಸೋತ ಕೆಪಿಸಿಸಿ ಅಧ್ಯಕ್ಷರಿಗೆ ವರಿಷ್ಠರ ಸಾಂತ್ವನ

parameswarಬೆಂಗಳೂರು, ಮೇ ೧೦:-   ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರೂ, ವೈಯಕ್ತಿಕವಾಗಿ ಸೋತ ಜಿ.ಪರಮೇಶ್ವರ್ ಬಗ್ಗೆ ಅಭಿಮಾನ ಇಟ್ಟಿರುವ ಕಾಂಗ್ರೆಸ್ ಪಕ್ಷ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಪರಮೇಶ್ವರ್ ಅವರನ್ನು ವಿಧಾನ ಪರಿಷತ್‌ಗೆ ನಾಮಕರಣ ಅಥವಾ ಆಯ್ಕೆ ಮಾಡುವ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದ ಪರಮೇಶ್ವರ್ ಅವರಿಗೆ ಸಾಂತ್ವನ ಹೇಳಿರುವ ಎ.ಕೆ. ಆಂಟನಿ ನೇತೃತ್ವದ ಕೇಂದ್ರ ವೀಕ್ಷಕರು ಸಚಿವ ಸ್ಥಾನ ದೊರಕಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಪರಮೇಶ್ವರ್ ಅವರೊಂದಿಗೆ ಪೋನ್‌ನಲ್ಲಿ ಮಾತುಕತೆ ನಡೆಸಿದ್ದು, ಪಕ್ಷದ ಗೆಲುವಿಗೆ ಶ್ರಮಿಸಿದ್ದಕ್ಕೆ ಅಭಿನಂದಿಸಿದ್ದಲ್ಲದೆ, ಅವರ ವೈಯಕ್ತಿಕ ಸೋಲಿಗೆ ಸಾಂತ್ವನ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಪರಮೇಶ್ವರ್ ಮಿತ್ರರೊಂದಿಗೆ ಹಂಚಿಕೊಂಡಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ