ಮುಖಪುಟ /ಸುದ್ದಿ ಸಮಾಚಾರ 

 ೨೦ ಸಂಪುಟ ದರ್ಜೆ, ೮ ರಾಜ್ಯ ಸಚಿವರ ಸಂಪುಟ ರಚನೆ

Ministersಬೆಂಗಳೂರು, ಮೇ ೧೮:- ಸಿದ್ದರಾಮಯ್ಯ ಅವರು ಮೊದಲ ಹಂತದಲ್ಲಿ ಇಂದು ತಮ್ಮ ಸಂಪುಟಕ್ಕೆ ೨೮ ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದು, 20 ಮಂದಿ ಸಂಪುಟ ದರ್ಜೆ ಸಚಿವರಾಗಿ ಹಾಗೂ 8 ಮಂದಿ ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಥಮ ತಂಡದಲ್ಲಿ ಆರ್.ವಿ. ದೇಶಪಾಂಡೆ, ಪ್ರಕಾಶ್ ಹುಕ್ಕೇರಿ, ರಾಮಲಿಂಗಾರೆಡ್ಡಿ, ಟಿ.ಬಿ. ಜಯಚಂದ್ರ, ಕಮರುಲ್ಲಾ ಇಸ್ಲಾಂ ಅವರು ಮೊದಲಿಗರಾಗಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಎರಡನೇ ತಂಡದಲ್ಲಿ ಬಿ.ರಮಾನಾಥ ರೈ, ಎಚ್.ಕೆ. ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ, ಡಾ.ಎಚ್.ಸಿ.ಮಹದೇವಪ್ಪ, ಶ್ರೀನಿವಾಸಪ್ರಸಾದ್, ಮೂರನೇ ತಂಡದಲ್ಲಿ ಕೆ.ಜೆ. ಜಾರ್ಜ್, ಎಚ್.ಎಸ್.ಮಹದೇವ ಪ್ರಸಾದ್, ಬಾಬೂರಾವ್ ಚಿಂಚನಸೂರ್, ವಿನಯಕುಮಾರ್ ಸೊರಕೆ, ಅಂಬರೀಷ್ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನಾಲ್ಕನೇ ತಂಡದಲ್ಲಿ ಯು.ಟಿ. ಖಾದರ್, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಎಚ್. ಆಂಜನೇಯ, ಶಿವರಾಜ ತಂಗಡಗಿ ಸಹ ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರೆ, ಐದನೇ ತಂಡದಲ್ಲಿ ಕೆ. ಅಭಯಚಂದ್ರ, ದಿನೇಶ್ ಗಂಡೂರಾವ್, ಕೃಷ್ಣ ಬೈರೇಗೌಡ, ಡಾ.ಶರಣ ಪ್ರಕಾಶ್ ಪಾಟೀಲ್  ರಾಜ್ಯ ಸಚಿವರಾಗಿ ಪ್ರಮಾಣ ವಚನ ಪಡೆದರು. ಕೊನೆಯ ಹಾಗೂ ಆರನೇ ತಂಡದಲ್ಲಿ ಸಂತೋಷ್ ಲಾಡ್, ಕಿಮ್ಮನೆ ರತ್ನಾಕರ್, ಉಮಾಶ್ರೀ, ಟಿ.ಪಿ. ಪರಮೇಶ್ವರ ನಾಯಕ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಎಲ್ಲ ಸಚಿವರಿಗೂ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಧಿಕಾರದ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಸಿದ್ದರಾಮಯ್ಯ ಎಲ್ಲ ನೂತನ ಸಚಿವರಿಗೂ ಬೆನ್ನುತಟ್ಟಿ ಅಭಿನಂದಿಸಿದರೆ, ವಿನಯಕುಮಾರ್ ಸೊರಕೆ ಹಾಗೂ ಚಿಂಚನಸೂರ್, ಆಂಜನೇಯ, ಎಂ.ಬಿ. ಪಾಟೀಲ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಪಾದ ಮುಟ್ಟಿ ನಮಸ್ಕಾರ ಮಾಡಿದರು. ಯು.ಟಿ. ಖಾದರ್ ಸರ್ವಧರ್ಮದ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. 

 

 ಮುಖಪುಟ /ಸುದ್ದಿ ಸಮಾಚಾರ