ಮುಖಪುಟ /ಸುದ್ದಿ ಸಮಾಚಾರ 

ಮೇಜು ಅಲುಗಾಡಿಸಿ ಮತ ಹಾಕಿದ ರೇವಣ್ಣ

HDKಬೆಂಗಳೂರು, ಮೇ ೫: ಜೆಡಿಎಸ್ ಮುಖಂಡ ಹಾಗೂ ಮಾಜಿ  ಸಚಿವ ಎಚ್.ಡಿ. ರೇವಣ್ಣ ಮತದಾನದ ಸಂದರ್ಭದಲ್ಲಿ ಮತಯಂತ್ರವಿಟ್ಟಿದ್ದ ಮೇಜನ್ನು ಮೂರು ಬಾರಿ ಅತ್ತಿಂದಿತ್ತ, ಇತ್ತಿಂದತ್ತ ತಿರುಗಿಸಿ ಮತದಾನ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ರಾಜ್ಯ ಚುನಾವಣಾ ಆಯೋಗ ಮತಯಂತ್ರಗಳಿಗೆ ಪೂಜೆ ಮಾಡುವುದನ್ನು ನಿಷೇಧಿಸಿತ್ತು. ಆದರೆ ಹಾಸನ ಜಿಲ್ಲೆ, ಹೊಳೆ ನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ತಮ್ಮ ಮತ ಚಲಾಯಿಸಲು ತಮ್ಮ ತಂದೆ ದೇವೇಗೌಡರೊಂದಿಗೆ ಆಗಮಿಸಿದ ರೇವಣ್ಣ ಮತ ಹಾಕುವ ಸಂದರ್ಭದಲ್ಲಿ ಮತ ಯಂತ್ರವಿದ್ದ ಟೇಬಲ್ಲನ್ನು ೩ ಬಾರಿ ತಿರುಗಿಸಿ ಮತ ಹಾಕಿದರು.

ರೇವಣ್ಣ ಅವರು ಮೇಜು ತಿರುಗಿಸುತ್ತಿದ್ದುದನ್ನು ಕಂಡು ಚುನಾವಣಾ ಸಿಬ್ಬಂದಿ ಕಕ್ಕಾಬಿಕ್ಕಿಯಾದರು.

ವಾಸ್ತು ದೋಷ ಸರಿಪಡಿಸಲು ರೇವಣ್ಣ ಮೇಜು ತಿರುಗಿಸಿದರು ಎಂದು ಹೇಳಲಾಗಿದೆ.

ಮಾಜಿ ಪ್ರಧಾನಿ ಪಠಣ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಹ ತಮ್ಮ ಪುತ್ರನಿಗೆ ತಾವೇನೂ ಕಡಿಮೆ ಇಲ್ಲ ಎಂಬಂತೆ, ಮತಗಟ್ಟೆಯ ಬಳಿಗೆ ಕಾರಿನಲ್ಲಿ ಬಂದರೂ ಕಾರಿನಿಂದ ಇಳಿಯದೇ ಸ್ತೋತ್ರ ಪಠಣ ಮಾಡುತ್ತಾ ಕುಳಿತರು.

ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಕಾರಿನಲ್ಲೇ ಸ್ತೋತ್ರಪಠಣ ಮಾಡಿದ ಬಳಿಕ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

ಗೋಪೂಜೆ: ಅತ್ತ ಹಾಸನದಲ್ಲಿ ರೇವಣ್ಣ ಟೇಬಲ್ ಅಲ್ಲಾಡಿಸಿದರೆ, ದೇವೇಗೌಡರು ಸ್ತೋತ್ರ ಪಠಣ ಮಾಡಿದರೆ ಇತ್ತ ರಾಮನಗರ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ ಅವರೊಂದಿಗೆ ಗೋಪೂಜೆ ಮಾಡಿ ಮತ ಚಲಾಯಿಸಿದರು.

ಮುಖಪುಟ /ಸುದ್ದಿ ಸಮಾಚಾರ