ಮುಖಪುಟ /ಸುದ್ದಿ ಸಮಾಚಾರ 

ಕಾಂಗ್ರೆಸ್ ಅಧಿಕಾರಕ್ಕೆ ಮತಗಟ್ಟೆ ಸಮೀಕ್ಷೆ

Congressಬೆಂಗಳೂರು, ಮೇ ೫- ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬ ಅಂಶವನ್ನು ವಿವಿಧ ಸಮೀಕ್ಷೆಗಳು ಸ್ಪಷ್ಟಪಡಿಸಿವೆ. ಸಿಓಪಿಎಸ್(ಕಾಪ್ಸ್) ನಡೆಸಿರುವ ಸಮೀಕ್ಷೆಯ ರೀತ್ಯ ಕಾಂಗ್ರೆಸ್ ಪಕ್ಷ ೧೧೦, ಬಿಜೆಪಿ ೪೭, ಜೆಡಿಎಸ್ ೩೨, ಕೆಜೆಪಿ ೨೩ ಹಾಗೂ ಇತರರು ೧೧ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದೆ.

ಕ್ರಿಯೇಟಿವ್ ಸೆಂಟರ್ ಫಾರ್ ಪೊಲಿಟಿಕಲ್ ಸ್ಟಡೀಸ್ (ಕಾಪ್ಸ್) ಇಂದು ಬೆಳಗ್ಗೆ ೭ರಿಂದ ಸಂಜೆ ೬ಗಂಟೆವರೆಗೆ ರಾಜ್ಯದ ೨೨೩ ವಿಧಾನಸಭಾ ಕ್ಷೇತ್ರಗಳಲ್ಲಿ ಆಯ್ದ ಮತದಾರರ ಅಭಿಪ್ರಾಯ ಸಂಗ್ರಹಿಸಿದೆ.

ರಾಜ್ಯದ ಎಲ್ಲ ೩೦ ಜಿಲ್ಲೆಗಳ ೮,೯೬೦ ಬೂತ್‌ಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಪ್ರತಿ ಕ್ಷೇತ್ರದ ೪೦ ಮತಗಟ್ಟೆಗಳಲ್ಲಿ ತಾನು ಸಮೀಕ್ಷೆ ನಡೆಸಿರುವುದಾಗಿ ಸಂಸ್ಥೆ ತಿಳಿಸಿದ್ದು, ಈ ಪ್ರಕ್ರಿಯೆಯಲ್ಲಿ ೮,೯೬,೦೦೦ ಮತದಾರರ ಅಭಿಪ್ರಾಯ ಪಡೆದಿರುವುದಾಗಿ ತಿಳಿಸಿದೆ.

ಕಾಪ್ಸ್ ಜಿಲ್ಲಾವಾರು ಸಮೀಕ್ಷೆ ನಡೆಸಿದ್ದು ವರುಣಾದಲ್ಲಿ ಸಿದ್ಧರಾಮಯ್ಯ, ಶಿಕಾರಿಪುರದಲ್ಲಿ ಯಡಿಯೂರಪ್ಪ, ರಾಮನಗರದಲ್ಲಿ ಎಚ್.ಡಿ.ಕುಮಾರಸ್ವಾಮಿ, ಕೊರಟಗೆರೆಯಲ್ಲಿ ಡಾ.ಜಿ. ಪರಮೇಶ್ವರ್ ಗೆಲುವು ಸಾಧಿಸುತ್ತಾರೆ ಎಂದೂ ತಿಳಿಸಿದೆ.

ಕರಾವಳಿ ಕರ್ನಾಟಕ, ಕೇಂದ್ರ ಕರ್ನಾಟಕ, ಹಳೆ ಮೈಸೂರು, ಮಲೆನಾಡು ಕರ್ನಾಟಕ, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಯಾವ ಯಾವ ಪಕ್ಷದ ಯಾವ ಯಾವ ಅಭ್ಯರ್ಥಿ ಗೆಲ್ಲಬಹುದು ಎಂಬುದನ್ನೂ ಅದು ತನ್ನ ಸಮೀಕ್ಷೆಯ ಹಿನ್ನೆಲೆಯಲ್ಲಿ ಪ್ರಕಟಿಸಿದೆ.

ರಾಯಚೂರು ಗ್ರಾಮಾಂತರ, ದೇವದುರ್ಗದಲ್ಲಿ ಬಿಜೆಪಿ, ರಾಯಚೂರು ನಗರ, ಮಾನ್ವಿ, ಮಸ್ಕಿಯಲ್ಲಿ ಕಾಂಗ್ರೆಸ್, ಲಿಂಗಸುಗೂರು, ಸಿಂಧನೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

ಬಳ್ಳಾರಿ ಜಿಲ್ಲೆಯ ಹಡಗಲಿ, ಬಳ್ಳಾರಿ ನಗರ, ಸಂಡೂರಿನಲ್ಲಿ ಕಾಂಗ್ರೆಸ್, ಹಗರಿ ಬೊಮ್ಮನಹಳ್ಳಿಯಲ್ಲಿ ಜೆಡಿಎಸ್, ವಿಜಯನಗರ, ಸಿರಗುಪ್ಪದಲ್ಲಿ ಬಿಜೆಪಿ, ಕಂಪ್ಲಿ, ಬಳ್ಳಾರಿ ಗ್ರಾಮಾಂತರದಲ್ಲಿ ಬಿ.ಎಸ್.ಆರ್. ಕಾಂಗ್ರೆಸ್ ಹಾಗೂ ಕೂಡ್ಲಿಗಿಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸುವ ನಿರೀಕ್ಷೆ ಇದೆ ಎಂದು ಸಮೀಕ್ಷೆ ತಿಳಿಸಿದೆ.

ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಕುಷ್ಟಗಿ, ಕನಕಗಿರಿ, ಯಲಬುರ್ಗದಲ್ಲಿ ಕಾಂಗ್ರೆಸ್, ಕೊಪ್ಪಳದಲ್ಲಿ ಬಿಜೆಪಿ, ಗಂಗಾವತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಜೆಡಿಎಸ್, ಶರಾಪುರ, ಯಾದಗಿರಿಯಲ್ಲಿ ಕೆಜೆಪಿ, ಗುರುಮಿಟ್ಕಲ್‌ನಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ ಎಂದು ಅದು ತಿಳಿಸಿದೆ.

ಬೀದರ್ ಜಿಲ್ಲೆಯಲ್ಲಿ ಬಸವಕಲ್ಯಾಣ, ಹುಮನಾಬಾದ್, ಬೀದರ್ ಉತ್ತರ, ಬಾಲ್ಕಿ ಕಾಂಗ್ರೆಸ್ ಪಾಲಾಗಲಿದ್ದರೆ, ಬೀದರ್ ದಕ್ಷಿಣ ಜೆಡಿಎಸ್, ಔರಾದ್ ಕೆಜೆಪಿ ಪಾಲಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಗುಲ್ಬರ್ಗಾ ಜಿಲ್ಲೆಯಲ್ಲಿ ಅಫ್ಜಲ್‌ಪುರ, ಸೇಡಂ, ಚಿಂಚೋಳಿ, ಗುಲ್ಬರ್ಗಾ ಉತ್ತರ, ಆಳಂದ ಕೆಜೆಪಿ ಪಾಲಾಗಲಿದ್ದರೆ, ಜೇವರ್ಗಿ ಕಾಂಗ್ರೆಸ್, ಚಿತ್ತಾಪುರ ಮತ್ತು ಗುಲ್ಬರ್ಗಾ ದಕ್ಷಿಣ ಬಿಜೆಪಿ ಪಾಲಾಗಲಿದೆ ಎಂದು ಹೇಳಿದೆ.

ಸಿವೋಟರ್- ಇನ್ನು ಸಿವೋಟರ್ ಸಂಸ್ಥೆ ರಾಜ್ಯದ ೨೨೩ ಮತಕ್ಷೇತ್ರಗಳಲ್ಲಿ ಮಧ್ಯಾಹ್ನ ೩ಗಂಟೆವರೆಗೆ ನಡೆಸಿದ ಸಮೀಕ್ಷೆಯಲ್ಲಿ ೧೦ ಸಾವಿರಕ್ಕೂ ಹೆಚ್ಚು ಜನರನ್ನು ಮತಗಟ್ಟೆಯ ಬಳಿ ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿದ್ದು ಅದರ ರೀತ್ಯ ಕಾಂಗ್ರೆಸ್ ೧೧೦ರಿಂದ ೧೧೮ ಸ್ಥಾನ ಪಡೆಯಲಿದ್ದರೆ, ಆಡಳಿತಾರೂಢ ಬಿಜೆಪಿ ೫೧ರಿಂದ ೫೯ ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಲಿದೆ ಎಂದು ಹೇಳಿದೆ.

ಪ್ರಸ್ತುತ ೨೮ ಸ್ಥಾನ ಹೊಂದಿದ್ದ ಜೆಡಿಎಸ್ ಮೂರರಿಂದ ೯ ಸ್ಥಾನ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದ್ದು ೩೧ರಿಂದ ೩೯ ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ.

ಇನ್ನು ಬಿಜೆಪಿಯಿಂದ ಹೊರಬಂದು ನೂತನ ಪಕ್ಷ ಕಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ೯ರಿಂದ ೧೩ ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಸಿವೋಟರ್ ಸಮೀಕ್ಷೆ ತಿಳಿಸಿದೆ.

ಬಿಎಸ್‌ಆರ್ ಹಾಗೂ ಪಕ್ಷೇತರರು ೭ರಿಂದ ೧೧ ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಸಿವೋಟರ್ ಸಂಸ್ಥೆ ತನ್ನ ಮತಗಟ್ಟೆ ಸಮೀಕ್ಷೆ ಆಧರಿಸಿ ತಿಳಿಸಿದೆ. ೨೦೦೧ರ ಜನಗಣತಿ ಆಧಾರದ ಮೇಲೆ ಈ ಸಮೀಕ್ಷೆ ನಡೆಸಲಾಗಿದೆ. 

ಮುಖಪುಟ /ಸುದ್ದಿ ಸಮಾಚಾರ