ಮುಖಪುಟ /ಸುದ್ದಿ ಸಮಾಚಾರ 

ರಾಜ್ಯದಲ್ಲಿ ಶೇ.70ರಷ್ಟು ಮತದಾನ

EVMಬೆಂಗಳೂರು, ಏ.೫: ೨೨೩ ಶಾಸಕರನ್ನು ಆಯ್ಕೆ ಮಾಡಲು ರಾಜ್ಯದ ೪.೩೬ ಕೋಟಿ ಅರ್ಹ ಮತದಾರರ ಪೈಕಿ ಶೇ.70  ಮತದಾರರು ತಮ್ಮ ಆದೇಶ ನೀಡಿದ್ದು, ,೯೪೦ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಈಗ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ.

ಇಂದು ಬೆಳಗ್ಗೆ ೭ ಗಂಟೆಗೆ ಆರಂಭವಾದ ಮತದಾನ ಸಂಜೆ ೬ಗಂಟೆವರೆಗೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಕೆಲವೆಡೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಚಿಕ್ಕಪುಟ್ಟ ಘರ್ಷಣೆ ನಡೆದಿದೆ.

ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ವರ್ತೂರು ಪ್ರಕಾಶ್ ಬೆಂಬಲಿಗರ ನಡುವೆ ಮಾತಿಗೆ ಮಾತು ಬೆಳೆದು, ಮಚ್ಚು ಲಾಂಗು ಹೊರಬಂದವೆಂದು ಹೇಳಲಾಗಿದೆ. ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರು ಮಚ್ಚು ಲಾಂಗು ಹಿಡಿದು ಓಡಾಡಿದ ಘಟನೆ ಕರ್ನಾಟಕ ಚುನಾವಣಾ ಇತಿಹಾಸದಲ್ಲಿಯೇ ಮೊದಲು ಎನ್ನಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಆ ವ್ಯಕ್ತಿಯನ್ನು ಬಂಧಿಸಿ, ಪರಿಸ್ಥಿತಿ ಸಹಜಸ್ಥಿತಿಗೆ ಮರಳುವಂತೆ ಮಾಡಿದರು. ನಂತರ ಮತದಾನ ಮುಂದುವರಿಯಿತು.

ಚಿಂತಾಮಣಿ ತಾಲೂಕಿನ ಕೋನಂಪಲ್ಲಿಯಲ್ಲಿ ಕೆಲವರು ಮತಗಟ್ಟೆಗೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಲು ಪ್ರಯತ್ನಿಸಿದ ಘಟನೆಯೂ ನಡೆಯಿತು. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದರು.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅನಂತಪುರದಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಮತದಾರರ ನಡುವೆ ಮಾತಿನ ಚಕಮಕಿ ನಡೆದು. ಕಲ್ಲು ತೂರಾಟ ನಡೆದು ಪೊಲೀಸರು ಸೇರಿ ೮ ಜನ ಗಾಯಗೊಂಡ ಘಟನೆ ನಡೆದಿದೆ. ೨ ಬಸ್‌ಗಳೂ ಜಖಂಗೊಂಡಿವೆ. ಇಲ್ಲಿ  ೨ಗಂಟೆಗಳ ಕಾಲ ಮತದಾನ ಸ್ಥಗಿತಗೊಳಿಸಲಾಗಿತ್ತು. ನಂತರ ಮತದಾನ ಆರಂಭವಾಯಿತು.

ಹಲವು ಕಡೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಹೊಡೆದಾಟಗಳು ನಡೆದಿವೆ.

ಈ ಪ್ರಕರಣಗಳನ್ನು ನೋಡಿದರೆ ಶಾಂತಿಪ್ರಿಯ ರಾಜ್ಯ ಎಂದೇ ಹೆಸರಾದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತ ಸಾಗಿದೆ ಎಂಬ ಅನುಮಾನ ಮೂಡಿಸಿದೆ.

೨೦೧೪ರ ಲೋಕಸಭೆ ಚುನಾವಣೆಗೆ ಮುನ್ನುಡಿ ಎಂದೇ ಹೇಳಲಾಗಿರುವ ಕರ್ನಾಟಕದ ವಿಧಾನಸಭೆ ಚುನಾವಣೆ ದೇಶಾದ್ಯಂತ ಕುತೂಹಲ ಕೆರಳಿಸಿದೆ.  ಘಟಾನುಘಟಿ ನಾಯಕರ ಸ್ಪರ್ಧೆ ಹಾಗೂ ರಾಷ್ಟ್ರೀಯ ನಾಯಕರ  ಪ್ರಚಾರದಿಂದ ಇಡೀ ದೇಶದ ಗಮನ ಸೆಳೆದಿದೆ.

ಈ ಬಾರಿ ಎಲ್ಲರೂ ಮತ ಚಲಾಯಿಸುವಂತೆ ಸಾಕಷ್ಟು ಜನ ಜಾಗೃತಿ ಕಾರ್ಯಕ್ರಮ, ಅಭಿಯಾನಗಳು ನಡೆದ ಹಿನ್ನೆಲೆಯಲ್ಲೂ ನಿರೀಕ್ಷಿತ ಮಟ್ಟದ ಮತದಾನ ಆಗಿಲ್ಲವಾದರೂ ಸರಾಸರಿ ಶೇ೬೦ ದಾಟಿರುವುದು ಸಮಾಧಾನದ ಸಂಗತಿ, ಮಧ್ಯಾಹ್ನ ೧ ಗಂಟೆಯ ವೇಳೆಗೆ ರಾಜ್ಯಾದ್ಯಂತ ಶೇ.೩೬.೮೦ರಷ್ಟು ಮತದಾನವಾದ ವರದಿಯಾಗಿತ್ತು. ಮಧ್ಯಾಹ್ನ ೩ ಗಂಟೆಯ ವೇಳೆಗೆ ಸರಾಸರಿ ಶೇ.೫೦.೮೦ ರಷ್ಟು ಮತದಾನವಾದ ವರದಿ ಬಂತು. ಎಂದಿನಂತೆ ಬೆಂಗಳೂರು ಮತದಾರರು ಕೇವಲ 50ರಷ್ಟು ಮತದಾನ ಮಾಡಿ ಎಂದಿನಂತೆ ನಿರಾಸಕ್ತಿಯ ಪ್ರದರ್ಶನ ಮಾಡಿದರು.

ಮತದಾನದ ಅಂತ್ಯದ ವೇಳೆಗೆ ದೊರೆತಿರುವ ವರದಿಗಳ ರೀತ್ಯ ರಾಜ್ಯಾದ್ಯಂತ ಸರಾಸರಿ ಶೇ.70ರಷ್ಟು ಮತದಾನವಾದ ವರದಿಯಾಗಿದೆ.

ಬೆಳಗ್ಗೆ ಬಿರುಸಿನಿಂದಲೇ ಆರಂಭವಾದ ಮತದಾನ ಬಿಸಿಲು ಏರುತ್ತಿದ್ದಂತೆ ಮಂದಗತಿಯಲ್ಲಿ ಸಾಗಿತಾದರೂ ಸಂಜೆಯ ಹೊತ್ತಿಗೆ ಮತ್ತೆ ಬಿರುಸಿಗೊಂಡಿತು.

ರಾಜ್ಯಾದ್ಯಂತ ಹೆಚ್ಚು ಉತ್ಸಾಹದಿಂದಲೇ ಮತಗಟ್ಟೆಗೆ ಆಗಮಿಸಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಯುವ ಮತದಾರರೂ ಉತ್ಸಾಹದಿಂದ ಮತ ಚಲಾಯಿಸಿದ ದೃಶ್ಯ ಸಾಮಾನ್ಯವಾಗಿತ್ತು.

೨೮ರಂದು ಮರು ಚುನಾವಣೆ: ಪಿರಿಯಾಪಟ್ಟಣದ ಬಿಜೆಪಿ ಅಭ್ಯರ್ಥಿ ನಿಧನದ ಹಿನ್ನೆಲೆಯಲ್ಲಿ ಇಂದು ರಾಜ್ಯದ ೨೨೩ ಕ್ಷೇತ್ರಗಳಿಗೆ ಏಕಕಾಲದಲ್ಲಿ ಹಾಗೂ ಬಿಗಿ ಭದ್ರತೆಯಲ್ಲಿ ಮತದಾನ ನಡೆಯಿತು. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಮೇ ೨೮ರಂದು ಮರು ಚುನಾವಣೆ ನಡೆಯಲಿದೆ

ಪಟ್ಟಿಯಲ್ಲಿ ಹೆಸರಿಲ್ಲದ ಗೊಂದಲ: ರಾಜ್ಯದ ಬಹುತೇಕ ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಗೊಂದಲ ಉಂಟಾಯಿತು. ಮತದಾನ ಮಾಡಿ ಎಂದು ಪ್ರಚಾರ ಮಾಡುವ ಚುನಾವಣಾ ಆಯೋಗ ನಮ್ಮ ಬಳಿ ಭಾವಚಿತ್ರ ಸಹಿತ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂದು ಹೇಳುವುದು ಎಷ್ಟು ಸರಿ ಎಂದು ಹಲವು ಮತದಾರರು ಪ್ರಶ್ನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮತದಾನ ಬಹಿಷ್ಕಾರ: ವಿವಿಧ ಗ್ರಾಮಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಮೂಲಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸಿದ ಘಟನೆ ನಡೆಯಿತು.

ಮತಯಂತ್ರಗಳ ದೋಷ: ಕೆಲವು ಮತಗಟ್ಟೆಗಳಲ್ಲಿ ಮತಯಂತ್ರದಲ್ಲಿನ ತಾಂತ್ರಿಕ ದೋಷದಿಂದ ಮತದಾನ ಕೆಲವು ನಿಮಿಷ ತಡವಾದ ವರದಿಗಳು ಬಂದಿವೆ.

ಕಟ್ಟೆಚ್ಚರ: ಮತದಾನದ ವೇಳೆ ಯಾವುದೇ ಹಂತದಲ್ಲಿ ಅಕ್ರಮಗಳು ನಡೆಯದಂತೆ ಚುನಾವಣಾ ಆಯೋಗವು ಕಟ್ಟೆಚ್ಚರ ವಹಿಸಿತ್ತು. ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳ ಮೂಲಕ ಹದ್ದಿನ ಕಣ್ಣಿಡಲಾಗಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಸುಮಾರು ೧ ಲಕ್ಷ ೬೪ಸಾವಿರ ಮಂದಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ಗ್ರಾಮೀಣ ಪ್ರದೇಶದಲ್ಲಿ ಉತ್ಸಾಹ: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜನ  ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಕೇಂದ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರ ಹಗರಣಗಳ ಆರೋಪದ ನಡುವೆ ನಡೆದಿರುವ ಈ ಚುನಾವಣೆಯಲ್ಲಿ ಮತದಾರರ ಒಲವು ಯಾರ ಕಡೆಗೆ ಎಂಬುದು ಮಾತ್ರ ಮೇ ೮ರಂದು ತಿಳಿಯಲಿದೆ.

ಮುಖಪುಟ /ಸುದ್ದಿ ಸಮಾಚಾರ