ಮುಖಪುಟ /ಸುದ್ದಿ ಸಮಾಚಾರ 

 ಮೊದಲ ದಿನವೇ 4.4 ಸಾವಿರ ಕೋಟಿ ರೂ. ಕೊಡುಗೆ ಘೋಷಣೆ

ಬಡವರಿಗೆ ಕೆ.ಜಿಗೆ 1ರೂ.ನಂತೆ ತಿಂಗಳಿಗೆ 30 ಕೆ.ಜಿ. ಅಕ್ಕಿ. ಜೂನ್ ನಿಂದ ಜಾರಿ

Siddaramaiahಬೆಂಗಳೂರು, ಮೇ 13:  ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ೧.೩ ಕೋಟಿ ಜನತೆಗೆ ಅನುಕೂಲ ಆಗುವಂತೆ ೪೪೦೯.೮೧ ಕೋಟಿ ರೂಪಾಯಿಗಳ ನೇರ ಹಾಗೂ ಪರೋಕ್ಷ ಯೋಜನೆ ಪ್ರಕಟಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ವಿಧಾನಸೌಧಕ್ಕೆ ತೆರಳಿ ಸುಮಾರು ೯೦ ನಿಮಿಷಗಳ ಕಾಲ ರಾಜ್ಯದ ಮುಖ್ಯಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವಂತೆ ಬಡವರಿಗೆ ಕೆ.ಜಿ.ಗೆ ೧ ರೂಪಾಯಿಯಂತೆ ಕುಟುಂಬವೊಂದಕ್ಕೆ ೩೦ ಕೆ.ಜಿ. ಅಕ್ಕಿ ವಿತರಿಸುವ ಯೋಜನೆಯನ್ನು ಬರುವ ಜೂನ್ ತಿಂಗಳಿಂದಲೇ ಜಾರಿಗೆ ತರುವುದಾಗಿ ಪ್ರಕಟಿಸಿದರು.

 ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಬಡ ಜನತೆ ಮತ್ತು ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಪ್ರಕಟಿಸಿದ ಸಿದ್ದರಾಮಯ್ಯ, ಈ ಯೋಜನೆಯ ಮೂಲಕ ರಾಜ್ಯಾದ್ಯಂತ ಇರುವ ಸುಮಾರು ೯೮ ಲಕ್ಷದ ೧೭ ಸಾವಿರ ಬಡ ಕುಟುಂಬಗಳಿಗೆ ಅನುಕೂಲಕರವಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ ಸುಮಾರು ೪೬೦ ಕೋಟಿ ರುಪಾಯಿ ಹೊರೆಯಾಗಲಿದೆ ಎಂದರು.

ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ: ಹಾಲು ಉತ್ಪಾದಕರಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನವನ್ನು ೨ ರೂ. ನಿಂದ ೪ರೂಪಾಯಿಗಳಿಗೆ ಏರಿಸಲಾಗಿದ್ದು, ರಾಜ್ಯಾದ್ಯಂತ ಸುಮಾರು ೭.೫ ಲಕ್ಷ ಹಾಲು ಉತ್ಪಾದಕರಿಗೆ ಇದರ ಲಾಭ ದೊರೆಯಲಿದೆ. ಇದು ಇಂದಿನಿಂದಲೇ ಜಾರಿಗೆ ಬರಲಿದೆ, ಈ ಯೋಜನೆಯಿಂದಾಗಿ ಸರ್ಕಾರಕ್ಕೆ ಪ್ರತಿ ವರ್ಷ ೪೯೬ ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ ಎಂದು ತಿಳಿಸಿದರು.

ಭರವಸೆಗಳ ಹೊತ್ತಿಗೆಯಲ : ಚುನಾವಣಾ ಪ್ರಣಾಳಿಕೆ ಎಂಬುದು ಭರವಸೆಗಳ ಮೂಟೆಯಲ್ಲ.  ಅದು ಪಕ್ಷದ ಆಶ್ವಾಸನೆ ಹಾಗೂ ಸರ್ಕಾರದ ಬದ್ಧತೆ.  ಚುನಾವಣಾ ಸಂದರ್ಭದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿಯೇ ನೂರಕ್ಕೆ ನೂರರಷ್ಟು ಈಡೇರಿಸುತ್ತೇನೆ ಎಂದು ತಿಳಿಸಿದರು.

ವಸತಿ ಸಹಾಯ ಧನದಲ್ಲಿ ಹೆಚ್ಚಳ : ಕಟ್ಟಡ ಸಾಮಗ್ರಿಗಳ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ವಸತಿ ಯೋಜನೆಗಳಿಗೆ ಸರ್ಕಾರ ನೀಡುವ ಸಹಾಯಧನದ ಮೊತ್ತವನ್ನು ಪ್ರತಿ ಘಟಕಕ್ಕೆ ೭೫,೦೦೦ ರೂಪಾಯಿಯಿಂದ ೧.೨೦ ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಅಲ್ಲದೆ ಘಟಕ ವೆಚ್ಚವನ್ನು ೧.೦೦ ಲಕ್ಷ ರೂಪಾಯಿಯಿಂದ ೧.೫೦ ಲಕ್ಷ ರೂ. ಗೆ ನಿಗಧಿಪಡಿಸಲಾಗಿದೆ. ಪ್ರತಿ ಫಲಾನುಭವಿ ೩೦,೦೦೦ ರೂ. ತೊಡಗಿಸಿ ೪೫,೦೦೦ ರೂಪಾಯಿಗೂ ಹೆಚ್ಚು ಮೊತ್ತದ ಸಹಾಯಧನವನ್ನು ಪಡೆದು ಗುಣಮಟ್ಟದ ಮನೆಯನ್ನು ನಿರ್ಮಿಸಿ ಕೊಳ್ಳಬಹುದಾಗಿದೆ.  ಇದರ ಲಾಭ ೨.೨ ಲಕ್ಷ ಫಲಾನುಭವಿಗಳಿಗೆ ದೊರೆಯಲಿದೆ.  ರಾಜ್ಯ ಬೊಕ್ಕಸಕ್ಕೆ ಇದರಿಂದ ೧೯೦೬ ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ತಿಳಿಸಿದರು.  

ಈ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಸುಮಾರು ೧ ಲಕ್ಷ ಫಲಾನುಭವಿಗಳಿಗೆ ೧೨೦೦ ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ದೊರೆಯಲಿದೆ.  ಅಂತೆಯೇ ನಗರ ಪ್ರದೇಶದ ೨೦,೦೦೦ ಫಲಾನುಭವಿಗಳು ೨೪೦ ಕೋಟಿ ರೂ. ವೆಚ್ಚದಲ್ಲಿ ಸೂರು ನಿರ್ಮಿಸಿಕೊಳ್ಳಬಹುದಾಗಿದೆ.  ಇದಲ್ಲದೆ ಇಂದಿರಾ ಆವಾಜ್ ವಸತಿ ಯೋಜನೆಯ ಸುಮಾರು ೧ ಲಕ್ಷ ಫಲಾನುಭವಿಗಳು ೫೦೦ ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ದೊರೆಯಲಿದೆ ಎಂದರು.

ರಾಜ್ಯದಲ್ಲಿನ ಬಡವರು ಹಾಗೂ ಕಡು ಬಡವರಿಗೆ ೧೨ ಲಕ್ಷ ಮನೆಗಳ ಅವಶ್ಯಕತೆ ಇದ್ದು, ಮುಂದಿನ ೫ ವರ್ಷಗಳಲ್ಲಿ ಎಲ್ಲಾ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಗುಡಿಸಲು ರಹಿತ ರಾಜ್ಯ ನಿರ್ಮಿಸುವ ಇಚ್ಛೆ ಮತ್ತು ಬದ್ಧ್ದತೆ ತಮ್ಮ ಸರ್ಕಾರಕ್ಕಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. 

ಸಾಲ ಮನ್ನಾ: ಡಾ: ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಕಸುಬು-ಉಪಕಸುಬುಗಳಿಗಾಗಿ ಪಡೆದಿರುವ ವಿವಿಧ ಯೋಜನೆಗಳ ಸಾಲವನ್ನು ಮನ್ನಾ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.  ಇದರಿಂದ ೨.೨೭ ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ.  ಇದರ ಒಟ್ಟಾರೆ ವೆಚ್ಚ ೩೪೯.೫೫ ಕೋಟಿ ರೂ. ಆಗಲಿದೆ ಎಂದರು.

ಅಂತೆಯೇ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ದಲ್ಲಿ ಆರ್ಥಿಕವಾಗಿ ಹಿಂದುಳಿದವರು ವಿವಿಧ ಕಸುಬುಗಳಿಗಾಗಿ ಪಡೆದಿರುವ ಒಟ್ಟಾರೆ         ೫೧೪.೨೬ ಕೋಟಿ ರೂ. ಸಾಲ ಮನ್ನಾ ಮಾಡಲು ತೀರ್ಮಾನಿಸಲಾಗಿದೆ.  ಇದರ ಲಾಭ ೪.೯೮ ಲಕ್ಷ ಫಲಾನುಭವಿಗಳಿಗೆ ದೊರೆಯಲಿದೆ. 

ಅಲ್ಲದೆ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಸಾಲ ಪಡೆದಿರುವ ಸುಮಾರು ೩ ಲಕ್ಷ ಫಲಾನುಭವಿಗಳ ಒಟ್ಟಾರೆ ೩೬೨ ಕೋಟಿ ರೂ. ಸಾಲವನ್ನೂ ಮನ್ನಾ ಮಾಡಲಾಗಿದೆ ಎಂದು ಘೋಷಿಸಿದರು.

ಭಾಗ್ಯಜ್ಯೋತಿ : ಕತ್ತಲಿನಿಂದ ಬೆಳಕಿನೆಡೆಗೆ 

ಭಾಗ್ಯಜ್ಯೋತಿ ಯೋಜನೆಯಲ್ಲಿ ಹೆಚ್ಚುವರಿ ವಿದ್ಯುತ್ ಬಳಸಿ ಹಣ ಪಾವತಿಸದೆ ವಿದ್ಯುತ್ ಸಂಪರ್ಕ ಕಡಿತಕ್ಕೊಳಗಾಗಿದ್ದ ರಾಜ್ಯದ ಸುಮಾರು ೨೦ ಲಕ್ಷ ಫಲಾನುಭವಿಗಳ ಬಾಕಿ ಶುಲ್ಕ ೨೬೮ ಕೋಟಿ ರೂ. ಮನ್ನಾ ಮಾಡಿ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ಕೂಡಲೆ ಮರು ಸಂಪರ್ಕ ಒದಗಿಸುವಂತೆ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಸೂಚಿಸಲಾಗಿದೆ.  ಇದರಿಂದ ವಿದ್ಯುತ್ ಸಂಪರ್ಕ ಕಡಿತಕ್ಕೊಳಗಾಗಿದ್ದ ಭಾಗ್ಯಜ್ಯೋತಿ ಫಲಾನುಭವಿಗಳು  ಕತ್ತಲಿನಿಂದ ಬೆಳಕಿನೆಡೆಗೆ ಪಯಣಿಸಿದಂತಾಗಿದೆ ಎಂದು ತಿಳಿಸಿದ ಅವರು ಅಕ್ಷಯ ತೃತೀಯದ ಕೊಡುಗೆ ನೀಡಿದರು.

ಮನೆ ಕಂದಾಯ ಪಾವತಿಗೆ ವಿನಾಯಿತಿ :  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಮನೆ ಕಂದಾಯ ಪಾವತಿಗೆ ಏಪ್ರಿಲ್ ೩೦ ರವರೆಗೆ ನೀಡಲಾಗಿದ್ದ ಶೇಕಡ ೫ ರ ವಿನಾಯಿತಿಯನ್ನು ಜೂನ್ ೩೦ ರವರೆಗೆ ವಿಸ್ತರಿಸಲಾಗಿದೆ ಎಂದು ಅವರು ವಿವರಿಸಿದರು.

 ಮುಖಪುಟ /ಸುದ್ದಿ ಸಮಾಚಾರ