ಮುಖಪುಟ /ಸುದ್ದಿ ಸಮಾಚಾರ 

 ಸಾಧಕ ಸಿದ್ದರಾಮಯ್ಯಪ್ರಮಾಣ

೨೮ನೇ ಸಿಎಂಗೆ ರಾಜ್ಯಪಾಲರಿಂದ  ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧನೆ

Siddaramaiah sworninಬೆಂಗಳೂರು, ಮೇ 13: ಸಾಮಾಜಿಕ, ಧಾರ್ಮಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವೇಶ್ವರ ಜಯಂತಿ ದಿನವೂ ಆದ ಅಕ್ಷಯ ತೃತೀಯದ ಶುಭ ಅಭಿಜಿನ್ (೧೧-೪೫) ಮುಹೂರ್ತದಲ್ಲಿ ರಾಜ್ಯದ ೨೮ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯದಲ್ಲಿ ಹೊಸ ರಾಜಕೀಯ ಶಕೆ ಆರಂಭವಾಯಿತು.

ನವ ವಧುವಿನಂತೆ ಸಿಂಗಾರಗೊಂಡಿದ್ದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಗೌಪ್ಯತೆ ಮತ್ತು ಅಧಿಕಾರದ ಪ್ರಮಾಣ ವಚನ ಬೋಧಿಸಿದಾಗ ಇಡೀ ಕ್ರೀಡಾಂಗಣದಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಇದೇ ಮೊದಲ ಬಾರಿಗೆ ವಿಧಾನಸೌಧದ ಆವರಣದಿಂದ ಹೊರಗೆ ನಡೆದ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ  ಸಿದ್ದರಾಮಯ್ಯ ಅವರು ಸತ್ಯದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು. ಬೆಳಗ್ಗೆ ೮ಗಂಟೆಯಿಂದಲೇ ಜನಸಾಗರ ಕ್ರಿಡಾಂಗಣದತ್ತ ಹರಿದುಬಂತು. ಗ್ಯಾಲರಿಯ ಎಲ್ಲ ಆಸನಗಳು, ೨೫ ಸಾವಿರಕ್ಕೂ ಹೆಚ್ಚು ಕುರ್ಚಿಯಲ್ಲಿ ಕುಳಿತ ಜನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗವ ಕ್ಷಣ ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದರು.

ಎಂ.ವಿ.ರಾಜಶೇಖರನ್, ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು, ಕೇಂದ್ರ ಸಚಿವರು, ಶಾಸಕರು, ಆಪ್ತ ಸ್ನೇಹಿತರು, ಸಾಹಿತಿಗಳು ಮತ್ತು ವಿಪಕ್ಷ ನಾಯಕರು ಸಮಾರಂಭದಲ್ಲಿ ಹಾಜರಿದ್ದರು.

ಕೇಂದ್ರ ಸಚಿವ ಮುನಿಯಪ್ಪ, ನಾಯಕರಾದ ಎಸ್.ಎಂ.ಕೃಷ್ಣ ಸಿಎಂ ಇಬ್ರಾಹಿಂ, ಆಸ್ಕರ್ ಫರ್ನಾಂಡಿಸ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೋಯ್ಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂಧನ್ ಮಿಸ್ತ್ರಿ, ಕೇಂದ್ರದ ಮಾಜಿ ಸಚಿವ ಜಾಫರ್ ಶರೀಫ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ನಟ  ಶಾಸಕ ಅಂಬರೀಶ್, ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌವ್ಹಾಣ್, ಗೋವಾದ ಮಾಜಿ ಮುಖ್ಯಮಂತ್ರಿ ಲೂಸಿನೋ ಫೆಲೇರೋ ಮೊದಲಾದವರು ಹಾಜರಿದ್ದು ಸಿದ್ದರಾಮಯ್ಯ ಅವರಿಗೆ ಶುಭ ಕೋರಿದರು.

ಶತಾಯುಷಿ  ನಿಘಂಟು ತಜ್ಞ ವೆಂಕಟಸುಬ್ಬಯ್ಯ, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ: ಗಿರೀಶ್ ಕಾರ್ನಾಡ್  ಅವರೂ ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾದರು. ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ಶ್ರೀರಾಮುಲು ಹಾಗೂ ಇತರ ನಾಯಕರೂ ಪಾಲ್ಗೊಂಡು ಶುಭ ಕೋರಿದರು.

ಪಂಚೆಧಾರಿ ಸಿಎಂ: ಎಂದಿನಂತೆ ಪಂಚೆ ಧರಿಸಿದ್ದ ಸಿದ್ದರಾಮಯ್ಯ ಮಿರುಗುವ ರೇಷ್ಮೆ ಅಂಗಿ ತೊಟ್ಟು, ಹೆಗಲ ಮೇಲೆ ಶಲ್ಯ ಹೊದ್ದು, ಹಣೆಯಲ್ಲಿ ಕುಂಕುಮ ಧರಿಸಿ ಪ್ರಮಾಣ ವಚನ ಸ್ವೀಕರಿಸಿದರು.

ಇದಕ್ಕೂ ಮುನ್ನ ವೇದಿಕೆಗೆ ಆಗಮಿಸುತ್ತಿದ್ದಂತೆ ಕೇಂದ್ರ ಸಚಿವರಾದ ಕೆ.ಎಚ್. ಮುನಿಯಪ್ಪ, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆಕಾಂಗ್ರೆಸ್ ಮುಖಂಡರು, ಶಾಸಕರನ್ನು ವೈಯಕ್ತಿಕವಾಗಿ ಮಾತನಾಡಿಸಿದರು. ಆಸ್ಕರ್ ಫರ್ನಾಂಡಿಸ್, ಬಿ.ಕೆ. ಹರಿಪ್ರಸಾದ್, ಎಂ.ಎಚ್. ಅಂಬರೀಶ್ ಸೇರಿದಂತೆ ಹಲವು ನಾಯಕರನ್ನು ಆಲಂಗಿಸಿಕೊಂಡು ಕೃತಜ್ಞತೆ ಮೆರೆದರು.

ರಾಜ್ಯಪಾಲರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.  ಆರ್.ವಿ. ದೇವರಾಜ್ ಬೃಹತ್ ಗಾತ್ರದ ಮಾಲೆ ಹಾಕಿ ಅಭಿನಂದಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಸಿದ್ದರಾಮಯ್ಯ ಅಭಿಮಾನಿಗಳತ್ತ ಕೈಬೀಸಿ ಕೃತಜ್ಞತೆ ಸಲ್ಲಿಸಿದರು.

 ಮುಖಪುಟ /ಸುದ್ದಿ ಸಮಾಚಾರ