ಮುಖಪುಟ /ಸುದ್ದಿ ಸಮಾಚಾರ 

 ಸಿ.ಎಲ್.ಪಿ. ನಾಯಕರಾಗಿ ಸಿದ್ದರಾಮಯ್ಯ

ಆರ್.ವಿ. ದೇಶಪಾಂಡೆ ಪ್ರಕಟಣೆ

Siddaramaiahಬೆಂಗಳೂರು, ಮೇ ೧೦:-  ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಪ್ರಕಟಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರಿಗೆ ವಿವರ ನೀಡಿದ ಅವರು, ಪಾರದರ್ಶಕವಾಗಿ ಎಲ್ಲ ಶಾಸಕರ ಅಭಿಪ್ರಾಯ ಪಡೆದು ಸಿದ್ಧರಾಮಯ್ಯ ಅವರೇ ಸೂಕ್ತ ವ್ಯಕ್ತಿ ಎಂದು ಆಯ್ಕೆ ಮಾಡಲಾಯಿತು. ಆಂಟನಿ ಅವರು ಅಧಿಕೃತವಾಗಿ ಆಯ್ಕೆ ಪ್ರಕಟಿಸಿದರು ಎಂದರು.

ಪಕ್ಷದಲ್ಲಿ ಯಾವುದೇ ಒಡಕಿಲ್ಲ, ಇಲ್ಲರೂ ಒಟ್ಟಿಗೆ ಇದ್ದೇವೆ. ವರಿಷ್ಠರ, ವೀಕ್ಷಕರ ತೀರ್ಮಾನವನ್ನು ಎಲ್ಲರೂ ಸ್ವಾಗತಿಸಿದ್ದೇವೆ. ಬಡವರ, ರೈತರ ಪರವಾದ ಮತ್ತು ಭ್ರಷ್ಟಾಚಾರು ಮುಕ್ತ ಶುದ್ಧ ಸರ್ಕಾರ ನೀಡುವುದಾಗಿ ಹೇಳಿದರು.

ಪ್ರಮಾಣ ವಚನ ಯಾವಾಗ ಎಂಬುದನ್ನು ಸಿದ್ದರಾಮಯ್ಯ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ತಿಳಿಸುತ್ತಾರೆ. ಮಂತ್ರಿ ಮಂಡಲದಲ್ಲಿ ಯಾರು ಇರುತ್ತಾರೆ ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.

ಪರಮೇಶ್ವರ್ ಪ್ರದೇಶ ಕಾಂಗ್ರೆಸ್  ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರಿಗೂ ಸೋನಿಯಾಗಾಂಧಿ ಅವರು ಒಂದು ಉತ್ತಮ ಸ್ಥಾನ ಕೊಡುತ್ತಾರೆ ಎಂಬ ಆಶಯ ವ್ಯಕ್ತಪಡಿಸಿದರು.

ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ಬಗ್ಗೆ ವಿವರಿಸಿದ ಅವರು, ಯಾರಿಗೆ ಎಷ್ಟು ಮತ ಎಂಬ ಮಾತೇ ಇಲ್ಲ. ವೀಕ್ಷಕರು ಮೊದಲಿಗೆ ಎಲ್ಲ ಶಾಸಕರೊಂದಿಗೆ ಚರ್ಚೆ ನಡೆಸಿದರು, ನಂತರ ಶಾಸಕರ ಅಭಿಪ್ರಾಯ ಕೇಳಿದರು. ಲಿಖಿತ ಅಭಿಪ್ರಾಯ ಪಡೆದು, ಅವಿರೋಧ ಆಯ್ಕೆ ಮಾಡಿದರು ಎಂದರು.

ಎಲ್ಲ ಶಾಸಕರೂ ಒಮ್ಮತದಿಂದ ಹಾಗೂ ಒಂದೇ ಮನಸ್ಸಿನಿಂದ ನಾಯಕನ ಆಯ್ಕೆ ಮಾಡಿದ್ದೇವೆ ಎಂದು ಸ್ಪಷ್ಟ ಪಡಿಸಿದರು.

ಇದಕ್ಕೂ ಮುನ್ನ ಸಭೆ ನಡೆಯುತ್ತಿದ್ದಾಗಲೇ ಮಲ್ಲಿಕಾರ್ಜುನ ಖರ್ಗೆ ಹೊರಬಂದು ಕಾರಿನಲ್ಲಿ ತೆರಳಿದರು. ನಂತರ ಹೊರಬಂದ ಡಿ.ಕೆ. ಶಿವಕುಮಾರ್ ಮಾತನಾಡಿ, ಎಲ್ಲ ಶಾಸಕರೂ ಪಕ್ಷದ ಹೈಕಮಾಂಡ್ ಆದೇಶದಂತೆ ತಮ್ಮ ಅಭಿಪ್ರಾಯವನ್ನು ಗೌಪ್ಯವಾಗಿ ಲಿಖಿತ ಮೂಲಕ ಬರೆದು ತಿಳಿಸಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ವೀಕ್ಷಕರು ಹೈಕಮಾಂಡ್ ಜತೆ ಚರ್ಚಿಸಿ ನಾಯಕನ ಆಯ್ಕೆ ಪ್ರಕಟಿಸುತ್ತಾರೆ ಎಂದರು.

ಈ ಮಧ್ಯೆ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಅಧಿಕಾರವನ್ನು ಪಕ್ಷದ ನಾಯಕಿ ಸೋನಿಯಾ ಅವರಿಗೆ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯವನ್ನು ಸಿದ್ದರಾಮಯ್ಯ ಅವರು ಮಂಡಿಸಿದ್ದು, ತಾವು, ರೋಶನ್ ಬೇಗ್, ಜಯಚಂದ್ರ, ಶ್ಯಾಮನೂರು ಶಿವಶಂಕರಪ್ಪ ಅನುಮೋದಿಸಿದ್ದಾಗಿ ಹೇಳಿದರು.

ನಾಯಕನ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ೧೨೧ ಶಾಸಕರಲ್ಲೂ ಒಗ್ಗಟ್ಟಿದೆ ಎಂದರು.

ಮುಖಪುಟ /ಸುದ್ದಿ ಸಮಾಚಾರ