ಮುಖಪುಟ /ಸುದ್ದಿ ಸಮಾಚಾರ 

ನನ್ನ ರಾಯಕೀಯ ಬದುಕಿನ ನೋವಿನ ದಿನ- ಯಡಿಯೂರಪ್ಪ

B.S.Y.

ಬೆಂಗಳೂರು, ಮೇ ೧೬:- ಇಂದು ನನ್ನ ರಾಜಕೀಯ ಬದುಕಿನ ಅತ್ಯಂತ ನೋವಿನ ದಿನ ಹೀಗೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಬೆಂಗಳೂರು ಹಾಗೂ ಶಿವಮೊಗ್ಗದ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ  ಅವರು, ಇಂದು ಬೆಂಗಳೂರು ಹಾಗೂ  ಶಿವಮೊಗ್ಗದ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ, ಮನೆ, ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ನಾನು ಜವಾಬ್ದಾರಿಯುತ ವ್ಯಕ್ತಿಯಾಗಿ ಸಿಬಿಐ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದು ಹೇಳಿದರು.

ಸಿಬಿಐ ತಂಡ ನನ್ನ ಮನೆ ಮೇಲೆ ದಾಳಿ ಮಾಡಿದೆ. ಸಾಕಷ್ಟು ಹೊತ್ತು ಪರಿಶೀಲನೆ ನಡೆಸಿದೆ. ಇದು ನನ್ನ ರಾಜಕೀಯ ಬದುಕಿನ ಅತ್ಯಂತ ನೋವಿನ ದಿನ ಎಂದು ಹೇಳಿದರು. ಸಿಬಿಐ ಅಧಿಕಾರಿಗಳು ಕೆಲವು ದಾಖಲೆ ಕೇಳಿದರು, ಕೊಟ್ಟಿದ್ದೇವೆ. ಅವರು ಅದನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರು.

ನನಗೆ ಸಿಬಿಐ ಬಗ್ಗೆ, ನ್ಯಾಯಾಂಗದ ಬಗ್ಗೆ ಅಪಾರ ಗೌರವ ಇದೆ. ನಾನು ಹಾಗೂ ನನ್ನ ಕುಟುಂಬದ ಸದಸ್ಯರು ಸಿಬಿಐ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು. ಸಿಬಿಐ ತನಿಖೆಯಿಂದ ಸತ್ಯ ಹೊರಬರುತ್ತದೆ. ನಾನು ನಿರ್ದೋಷಿಯಾಗಿ ಹೊರಬರುವ ವಿಶ್ವಾಸ ನನಗಿದೆ ಎಂದರು.

ನಾನು ಮತ್ತು ನನ್ನ ಕುಟುಂಬದವರು ಮುಕ್ತವಾಗಿ ಸಿಬಿಐಗೆ ಸಹಕಾರ ಕೊಟ್ಟಿದ್ದೇವೆ. ಮುಂದೆಯೂ ಅವರು ಕೇಳುವ ಎಲ್ಲ ದಾಖಲೆ ಒದಗಿಸಲು ಬದ್ಧ. ಅವರ ಎಲ್ಲ ತನಿಖೆಗೂ ಸಹಕಾರ ನೀಡುತ್ತೇವೆ. ಈ ತನಿಖೆಯಲ್ಲಿ ದೋಷ ಮುಕ್ತರಾಗಿ ಹೊರಬರುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.

ಕಳೆದ ಮೂರೂವರೆ ವರ್ಷ ಮುಖ್ಯಮಂತ್ರಿ ಆಗಿದ್ದಾಗ, ನಾನು ಅನೇಕ ಅಗ್ನಿಪರೀಕ್ಷೆ ಎದುರಿಸಿದ್ದೇನೆ.  ಕನ್ನಡ ನಾಡಿನ ಜನರಿಗೆ ಅನ್ಯಾಯ ಮಾಡದೆ ಒಂದಲ್ಲ ಒಂದು ರೀತಿಯ ಸವಲತ್ತು ಎಲ್ಲರಿಗೂ ಸಿಗುವಂತೆ ಮಾಡಿದ್ದೇನೆ. ಕನ್ನಡ ನಾಡಿನ ಜನರ ಸೇವೆ ಮಾಡಿದ ತೃಪ್ತಿ ನನಗಿದೆ ಎಂದರು.

ಈಗಲೂ ನಾನು ಎಲ್ಲ ತನಿಖೆಯಿಂದ, ಆರೋಪದಿಂ ಹೊರಬಂದು, ರಾಜ್ಯವನ್ನು ಮಾದರಿ ರಾಜ್ಯ ಮಾಡಲು ಜನತಾ ಜನಾರ್ದನ ಮುಂದೆ ಹೋಗುತ್ತೇನೆ. ಮತ್ತೆ ಜನ ನನಗೆ ಜನಸೇವೆ ಮಾಡುವ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಖಪುಟ /ಸುದ್ದಿ ಸಮಾಚಾರ