ಮುಖಪುಟ /ಸುದ್ದಿ ಸಮಾಚಾರ 

ಯಡಿಯೂರಪ್ಪಗೆ ಶಾಸಕರು ಕೈಕೊಟ್ಟರೇ?

B.S.Y.ಬೆಂಗಳೂರು, ಮೇ ೧೫:- ಸದಾನಂದಗೌಡರ ನಾಯಕತ್ವ ಬದಲಾವಣೆ ಆಗಲೇಬೇಕು ಇಲ್ಲವಾದರೆ ಸರ್ಕಾರ ಉಳಿಸಲ್ಲ ಎಂದು ನಿನ್ನೆ ಬೆಳಗ್ಗೆಯಿಂದಲೇ ಹಠ ಹಿಡಿದಿದ್ದ ಯಡಿಯೂರಪ್ಪ ನಿನ್ನೆ ಸಂಜೆ ಏಕಾ ಏಕಿ ತಮ್ಮ ನಿರ್ಧಾರ ಬದಲಿಸಿದ್ದು ಏಕೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

ಯಡಿಯೂರಪ್ಪ ಆಪ್ತರ ಪ್ರಕಾರ ಶಾಸಕತ್ವಕ್ಕೆ ರಾಜೀನಾಮೆ ನೀಡಲು ಯಡಿಯೂರಪ್ಪ ಬೆಂಬಲಿಗ ಶಾಸಕರು ಸುತಾರಾಂ ಒಪ್ಪದಿದ್ದ ಹಿನ್ನೆಲೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ ಬಿ.ಎಸ್.ವೈ. ತಮ್ಮ ನಿರ್ಧಾರ ಬದಲಿಸಿ, ತಮ್ಮೊಂದಿಗೆ ೭೦ ಶಾಸಕರಿದ್ದಾರೆ ಎಂದು ಹೇಳಿಕೊಂಡರು ಎಂದು ಅವರ ಆಪ್ತರಿಂದಲೇ ತಿಳಿದುಬಂದಿದೆ.

ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿರುವ ೭ ಸಚಿವರು  ಮಂತ್ರಿಗಿರಿ ತ್ಯಾಗಕ್ಕೆ ಸಿದ್ದರಾಗಿದ್ದಾರಾದರೂ, ಯಾರೊಬ್ಬರೂ  ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿರಲಿಲ್ಲ. ನಾವು ನಿಮ್ಮ ದಯದಿಂದ ಮಂತ್ರಿ ಆದೆವು, ಅದಕ್ಕೆ ರಾಜೀನಾಮೆ ಕೊಡುತ್ತೇವೆ. ಆದರೆ ನಮ್ಮನ್ನು ವಿಧಾನಸಬೆಗೆ ಆಯ್ಕೆ ಮಾಡಿದ್ದು ಜನತೆ, ಹೀಗಾಗಿ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಾರೆವು ಎಂದು ಎಲ್ಲರೂ ನವಿರಾಗಿ ಜಾರಿಕೊಂಡ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ  ಮಾನ ಉಳಿಸಿಕೊಳ್ಳಲು ಹೊಸ ರಾಗ ಹಾಡಿದರು ಎಂದು ಹೇಳಲಾಗಿದೆ.

ಈ ಮಧ್ಯೆ ಕಳೆದ ವಾರ ಒತ್ತಡ ತಂತ್ರಗಾರಿಕೆಗಾಗಿ ಯಡಿಯೂರಪ್ಪ ಅವರ ಕೈಗೆ ತಮ್ಮ ರಾಜೀನಾಮೆ ಪತ್ರ ನೀಡಿದ್ದ ಕೆಲವು ಶಾಸಕರು, ವಿಧಾನಸಭಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಇರುವ ಸಚಿವ ಜಗದೀಶ ಶೆಟ್ಟರ್ ನಿವಾಸಕ್ಕೆ ತೆರಳಿ, ಮುಂದಿನ ಪರಿಣಾಮಗಳು ಏನಾಗುತ್ತವೆ. ನಾವು ಕೊಟ್ಟಿರುವ ರಾಜೀನಾಮೆ ಹಿಂಪಡೆಯುವುದು ಹೇಗೆ ಇತರ ಕಾನೂನು ಪರಿಣಾಮ ಏನಾಗಬಹುದು ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಿದರು ಎಂದೂ ಹೇಳಲಾಗಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ಯಾರು?

ಪಕ್ಷ ತೊರೆಯುವುದಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಸದಾನಂದಗೌಡ ಮುಖ್ಯಮಂತ್ರಿಯಾಗಿ ಮುಂದುವರಿಯುವುದಕ್ಕೆ ವಿರೋಧ ವ್ಯಕ್ತಪಡಿಸುರುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಗದೀಶ ಶೆಟ್ಟರ್ ಅವರನ್ನು ಆ ಹುದ್ದೆಗೆ ಹೆಸರಿಸಲೂ ಹಿಂದು ಮುಂದು ನೋಡುತ್ತಿದ್ದಾರೆ.

ನಿನ್ನೆ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ, ಕೆಲವರು ಸದಾನಂದಗೌಡರ ಬದಲಿಗೆ ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನಾದರೂ ವರಿಷ್ಠರಿಗೆ ತಿಳಿಸಿ ಎಂದಾಗ, ಮತ್ತೆ ಕೆಲವರು ಜಗದೀಶ ಶೆಟ್ಟರ್ ಹೆಸರು ಹೇಳಿದರಾದರೂ, ಯಡಿಯೂರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಶೆಟ್ಟರ್ ಹೆಸರನ್ನು ಹೇಳಲು ಹಿಂದು ಮುಂದು ನೋಡಿ, ಮೌನಕ್ಕೆ ಶರಣಾದರು.

ನಿನ್ನೆ ಯಡಿಯೂರಪ್ಪ ನಿವಾಸದಲ್ಲಿ ಸಭೆ ಸೇರಿದ್ದ ಬೆಂಬಲಿಗ ಶಾಸಕರು, ಸಚಿವರು ನಿಮಗೆ ಸದಾನಂದಗೌಡರ ಬಗ್ಗೆ ವಿಶ್ವಾಸವಿಲ್ಲದಿದ್ದರೆ ಬೇರೆ ಹೆಸರನ್ನು ಸೂಚಿಸಿ ಅವರನ್ನೇ ಮುಖ್ಯಮಂತ್ರಿ ಮಾಡುವಂತೆ ಪಟ್ಟು ಹಿಡಿಯೋಣ ಆದರೆ, ಯಾವುದೇ ಕಾರಣಕ್ಕೂ ನೀವು ಪಕ್ಷ ಬಿಡಬೇಡಿ ಎಂದು ಮನವಿ ಮಾಡಿದರು. ಆದರೆ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಪಟ್ಟು ಹಿಡಿದಿರುವ ಯಡಿಯೂರಪ್ಪ ಯಾವುದೇ ಉತ್ತರ ನೀಡದೆ ಎಲ್ಲರ ಬಾಯಿಗೆ ಬೀಗ ಹಾಕಿಸಿದರು ಎಂದು ಆಪ್ತ ಮೂಲಗಳು ಹೇಳಿವೆ.

ತಾವು ಅಧಿಕೃತವಾಗಿ ಪಕ್ಷ ತೊರೆಯುವ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುವುದಾಗಿ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರ ಮನವೊಲಿಸಲು ಅರುಣ್ ಜೈಟ್ಲಿ ಅವರಿಗೆ ಕೇವಲ ಎರಡು ನಿಮಿಷ ಸಾಕಾಯಿತು.  ಯಾವೊಬ್ಬ ಶಾಸಕರೂ ರಾಜೀನಾಮೆ ನೀಡಲು ಸಿದ್ಧರಿಲ್ಲದ ಹಿನ್ನೆಲೆಯಲ್ಲಿ ಜೈಟ್ಲಿ ಹೇಳಿದ ಕೂಡಲೇ ಯಡಿಯೂರಪ್ಪ ಒಪ್ಪಿಕೊಂಡರು ಎಂದು ಹೇಳಲಾಗಿದೆ.

ಇಷ್ಟೆಲ್ಲಾ ಆದರೂ ಯಡಿಯೂರಪ್ಪ ತಮ್ಮ ವಿಶ್ವಾಸ ಕಳೆದುಕೊಂಡಿಲ್ಲ. ಎದೆ ಗುಂದಿಲ್ಲ. ಇಂದು ವರಿಷ್ಠರೊಂದಿಗೆ ಮಾತುಕತೆ ನಡೆಸಲು ದೆಹಲಿಗೆ ಹೊರಟಿದ್ದ ಅವರು, ತಮ್ಮ ಪ್ರವಾಸ ರದ್ದು ಮಾಡಿದರಾದರೂ, ತಮ್ಮ ಬೆಂಬಲಿಗರಾದ ಬಸವರಾಜ ಬೊಮ್ಮಾಯಿ ಮತ್ತು ವಿ.ಸೋಮಣ್ಣ ಅವರನ್ನು ದೆಹಲಿಗೆ ಕಳುಹಿಸಿ ತಮ್ಮ ಕೆಲವು ಬೇಡಿಕೆಗಳನ್ನಾದರೂ ಈಡೇರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ಈ ಮಧ್ಯೆ ನಿನ್ನೆ ಬಹಿರಂಗವಾಗಿ ಸುದ್ದಿಗೋಷ್ಠಿಯಲ್ಲಿ ಸದಾನಂದಗೌಡ, ಈಶ್ವರಪ್ಪ, ಸಂತೋಷ್ ಹಾಗೂ ಅನಂತಕುಮಾರ್ ವಿರುದ್ಧ ಹರಿಹಾಯ್ದ ಯಡಿಯೂರಪ್ಪ ಅವರ ವಿರುದ್ಧ ರಾಜ್ಯ ಬಿಜೆಪಿ ತಿರುಗಿ ಬಿದ್ದಿದ್ದು, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ವರಿಷ್ಠರನ್ನು ಒತ್ತಾಯಿಸಲು ನಿರ್ಧರಿಸಿದೆ..

ಮುಖಪುಟ /ಸುದ್ದಿ ಸಮಾಚಾರ