ಮುಖಪುಟ /ಸುದ್ದಿ ಸಮಾಚಾರ 

ಹೋರಾಟಗಾರನ ಮತ್ತೊಂದು ಹೋರಾಟ
ಯಡಿಯೂರಪ್ಪ ದುರಂತ ನಾಯಕ

B.S.Yadiyurappa

*ಟಿ.ಎಂ.ಸತೀಶ್

ಬೆಂಗಳೂರು:- ಮಂಡ್ಯ ಜಿಲ್ಲೆಯ ಪುಟ್ಟಗ್ರಾಮ ಬೂಕನಕೆರೆಯಿಂದ ಬೆಂಗಳೂರು ವಿಧಾನಸೌಧದ ಮುಖ್ಯಮಂತ್ರಿ ಗದ್ದುಗೆವರೆಗೆ ಬೃಹದಾಕಾರವಾಗಿ ಬೆಳೆದುಬಂದ ಬಿ.ಎಸ್. ಯಡಿಯೂರಪ್ಪ ಇಂದು ದುರಂತ ನಾಯಕ.

ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ವರದಿಯಲ್ಲಿ ತಪ್ಪಿತಸ್ಥರ ಸಾಲಿನಲ್ಲಿ ನಿಂತ ಯಡಿಯೂರಪ್ಪ ತಮ್ಮ ಸುಮಾರು ೩ ದಶಕಗಳ ಹೋರಾಟದ ಫಲವಾಗಿ ಸಿಕ್ಕಿದ್ದ ಮುಖ್ಯಮಂತ್ರಿ ಕುರ್ಚಿಯನ್ನು ತೊರೆಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ತಲುಪಿದರು. ನಂತರ ನಡೆಸಿದ ಕಾನೂನು ಹೋರಾಟದಲ್ಲಿ ಹೈಕೋರ್ಟ್‌ನಿಂದ ಪಾರಾಗಿದ್ದ ಅವರ ಕೊರಳಿಗೀಗ ಸುಪ್ರೀಂಕೋರ್ಟ್ ಆದೇಶದಿಂದ ಸಿಬಿಐ ಉರುಳು ಬಿದ್ದಿದೆ.

ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಬಿಜೆಪಿಗೆ ರೈತ ಹೋರಾಟದ ಸ್ಪರ್ಶ ನೀಡಿ, ರಾಜ್ಯದ ಉದ್ದಗಲ, ಮೂಲೆ ಮೂಲೆಯಲ್ಲೂ ಬಿಜೆಪಿ ಬೇರು ಬಿಡುವಂತೆ ಮಾಡಿದ ಯಡಿಯೂರಪ್ಪ ಅವರ ರಾಜಕೀಯ ಬದುಕಿನ ದುರಂತ  ಅಧ್ಯಾಯ ಇಂದಿನಿಂದ ಆರಂಭವಾಗಿದೆ.

ಯಡಿಯೂರಪ್ಪ ಅವರೇನೂ ಈಗಲೂ ತಾವು ಸಿಬಿಐ ತನಿಖೆಯಲ್ಲಿ ನಿರ್ದೋಷಿಯಾಗಿ ಹೊರ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವು ಬಿಜೆಪಿ ಶಾಸಕರು ಯಡಿಯೂರಪ್ಪ ಅವರ ಬೆಂಬಲಕ್ಕೆ ಇದ್ದಾರೆ. ಆದರೂ ಬಿಎಸ್‌ವೈ ರಾಜಕೀಯ ಭವಿಷ್ಯ ಏನಾಗಬಹುದು ಎಂಬುದನ್ನು ಆಗಸ್ಟ್ ೩ರಂದು ಸಿಬಿಐ ಸುಪ್ರೀಂಕೋರ್ಟ್‌ಗೆ ನೀಡಬಹುದಾದ ವರದಿ ಹಾಗೂ ನಂತರ ಸರ್ವೋನ್ನತ ನ್ಯಾಯಾಲಯ ನೀಡಬಹುದಾದ ತೀರ್ಪನ್ನು ಅವಲಂಬಿಸಿದೆ.

ಆದರೂ ಯಡಿಯೂರಪ್ಪ ಹೊರ ಜಗತ್ತಿಗೆ ಧೈರ್ಯ ಕಳೆದುಕೊಂಡಂತೆ ಕಾಣುತ್ತಿಲ್ಲ. ಇಂದು ಸುಪ್ರೀಂಕೋರ್ಟ್ ತೀರ್ಪು ಬಂದ ಸಂದರ್ಭದಲ್ಲಿ ನಂಜನಗೂಡಿನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಅವರು ಮಾಡಿದ ಭಾಷಣ ನಿಜಕ್ಕೂ ಅವರು ಮೇಲ್ನೋಟಕ್ಕೆ ವಿಚಲಿತರಾಗಿಲ್ಲ ಎಂಬುದನ್ನು ತೋರಿಸುತ್ತಿತ್ತು.  ಆದರೂ ಆತಂಕ, ಆಂತರಿಕ ಬೇಗುದಿ ಸಹಜ. ಯಡಿಯೂರಪ್ಪ ಅವರಿಗೂ ಮುಂದೇನೋ ಎಂಬ ಭೀತಿ ಕಾಡದಿರದು. ಈಗ ತಮ್ಮ ಜೊತೆಗಿರುವ ಶಾಸಕರು ಎಷ್ಟು ದಿನ ಇದ್ದಾರು ಎಂಬ ಅನುಮಾನವೂ ಕಾಡುತ್ತಿರುತ್ತದೆ ಎಂಬುದು ನಿರ್ವಿವಾದ.

ಇದೆಲ್ಲದರ ನಡುವೆಯೂ ಯಡಿಯೂರಪ್ಪ ಒಂದು ರೀತಿಯಲ್ಲಿ ನಾಯಕರಾಗಿಯೇ, ಹೋರಾಟಗಾರರಾಗಿಯೇ ಗೋಚರಿಸುತ್ತಾರೆ. ಅದು ೨೦೦೬ರ ಫೆಬ್ರವರಿ ೩. ರಾಜ್ಯ ರಾಜಕೀಯದಲ್ಲಿ ದಿಢೀರ್ ಬದಲಾವಣೆ ಆದ ದಿನ. ಅಂದು ಅನಿರೀಕ್ಷಿತವಾಗಿ ಯಡಿಯೂರಪ್ಪ ಜೆಡಿಎಸ್ - ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಜೆಡಿಎಸ್ - ಬಿಜೆಪಿ ನಡುವೆ ಆಗಿದ್ದ ಒಡಂಬಡಿಕೆಯಂತೆ ಮೊದಲ ೨೦ ತಿಂಗಳು ಜೆಡಿಎಸ್ ಅಧಿಕಾರ, ನಂತರ ಬಿಜೆಪಿ ಸರ್ಕಾರ. ಆದರೆ ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಕುಮಾರಸ್ವಾಮಿ ಮಾತು ತಪ್ಪಿದರು. ಅದುವೇ ಬಿಜೆಪಿಗೆ ವರವಾಯ್ತು. ೨೦೦೮ರಲ್ಲಿ ನಡೆದ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ರಾಜ್ಯ ವಿಧಾನಸಭೆಯಲ್ಲಿ ೧೧೦ ಸ್ಥಾನ ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಯಡಿಯೂರಪ್ಪ ಅದೃಷ್ಟಕ್ಕೆ ೬ ಮಂದಿ ಪಕ್ಷೇತರರೂ ಗೆದ್ದಿದ್ದರು. ಇವರ ನೆರವಿನಿಂದ ಸರ್ಕಾರವೂ ರಚನೆಯಾಯ್ತು. ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರ ಉದಯವಾಯ್ತು.

ಅಂದು ನಾಡಿನ ಜನತೆ ಖುಷಿ ಪಟ್ಟರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಾವೇ ಮುಖ್ಯಮಂತ್ರಿ ಆದಷ್ಟು ಹಿರಿಹಿರಿ ಹಿಗ್ಗಿದರು. ರಾಜ್ಯದಲ್ಲಿ ಉಳಿದೆರಡು ಪಕ್ಷಗಳ ಅಧಿಕಾರವನ್ನು ನೋಡಿದ್ದ ಜನತೆ ಶಿಸ್ತಿಗೆ ಹೆಸರಾಗಿದ್ದ ಬಿಜೆಪಿ ಪಕ್ಷಕ್ಕೆ ಚೊಚ್ಚಲ ಅಧಿಕಾರ ನೀಡಿ ಬಹುದೊಡ್ಡ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದರು. ಆದರೆ ಬಿಜೆಪಿ ಸರ್ಕಾರದ ಒಂದೊಂದು ಹಗರಣ ಹೊರ ಬೀಳುತ್ತಿದ್ದಂತೆ ಜನ ಖಿನ್ನರಾದರು. ಅಧಿಕಾರದ ಆಸೆಗಾಗಿ ಹಲವು ಶಾಸಕರು ರೆಸಾರ್ಟ್ ರಾಜಕೀಯ ಮಾಡಿದಾಗಲಂತೂ ಜನ ಬೇಸರಗೊಂಡರು, ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ, ತಮ್ಮ ಹಿಂದಿನ ಹೋರಾಟದ ಪರಂಪರೆಯನ್ನೇ ಮರೆತು ಯಡಿಯೂರಪ್ಪ ಹಣದ ಹಿಂದೆ ಓಡಿದಾಗ ಅವರ ಅತಿಯಾಸೆಯನ್ನು ಕಂಡು ರೋಸತ್ತು ಹೋದರು. ಬಿಜೆಪಿ ಆಂತರಿಕ ಕಚ್ಚಾಟ ಭುಗಿಲೆದ್ದ ಬಳಿಕವಂತೂ ಪದೇ ಪದೇ ರೇಸಾರ್ಟ್ ರಾಜಕೀಯ ನೋಡಿ ಅಸಹ್ಯಪಟ್ಟರು. ಒಬ್ಬಬ್ಬರೇ ಬಿಜೆಪಿ ಸಚಿವರು ವಿವಿಧ ರೀತಿಯ ಆರೋಪ ಹೊತ್ತು ಸೆರೆಮನೆ ಸೇರಿದಾಗ ನಾವಿಂತವರನ್ನು ಆರಿಸಿದೆವಲ್ಲ ಎಂದು ಕೈಕೈ ಹಿಸುಕಿಕೊಂಡರು. ಇತ್ತೀಚೆಗೆ ಸಜ್ಜನ ರಾಜಕಾರಣಿ ವಿ.ಎಸ್. ಆಚಾರ್ಯ ಅವರಿಗೆ ಸದನದಲ್ಲಿ ಸಂತಾಪ ಸೂಚಿಸುವ ಸಮಯದಲ್ಲಿ ಸದನಕ್ಕೆ ಹಾಜರಾಗದೆ ರೆಸಾರ್ಟ್ ಬಣ ರಾಜಕೀಯಕ್ಕೆ ಶರಣಾದಾಗ ಸಿಟ್ಟಿಗೆದ್ದರು. ಸೆರೆಮನೆಗೆ ಹೋಗಿ ಬಂದರೂ ಯಡಿಯೂರಪ್ಪ ಅವರ ಅಧಿಕಾರ ದಾಹ ನೋಡಿ ಬಿಜೆಪಿಗೆ ವೋಟು ಹಾಕಿದ್ದಕ್ಕಾಗಿ ತಮ್ಮನ್ನು ತಾವೇ ಶಪಿಸಿಕೊಂಡರು.

ಇಷ್ಟೆಲ್ಲಾ ಆದರೂ ನಾಡಿನ ಜನರಿಗೆ ಯಡಿಯೂರಪ್ಪ ವಿಚಾರದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಮಮಕಾರ ಇದೆ. ಯಡಿಯೂರಪ್ಪ ಅವರಿಗೆ ನೋವಾದರೆ ಕೆಲವರ ಕರುಳು ಚುರುಕ್ಕೆನ್ನುತ್ತದೆ. ಯಡಿಯೂರಪ್ಪ ಸೆರೆಮನೆಗೆ ಹೋದ ದಿನ ಸಾಕಷ್ಟು ಜನರು ಅತ್ತರು, ನೊಂದರು, ಒಳಗೊಳಗೇ ದುಃಖ ನುಂಗಿದರು. ಯಡಿಯೂರಪ್ಪ ಬಿಡುಗಡೆಗೆ ದೇವಾಲಯಗಳಲ್ಲಿ ಪೂಜೆ ಮಾಡಿಸಿದರು. ಇಂದು ಕೂಡ ಯಡಿಯೂರಪ್ಪ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದಾಗ ಜನಾರ್ದನ ರೆಡ್ಡಿ ಅವರಿಗೆ ಬಂದ ಸ್ಥಿತಿ ಯಡಿಯೂರಪ್ಪ ಅವರಿಗೂ ಬಂದುಬಿಡುತ್ತದೇನೋ ಎಂದು ಹಲವರು ಹಲುಬಿದ್ದಾರೆ. ಅದು ಜನರ ಮಾತಿನಲ್ಲಿ ವೇದ್ಯವಾಗುತ್ತಿದೆ.

ಕಾನೂನು ದೃಷ್ಟಿಯಲ್ಲಿ ಯಡಿಯೂರಪ್ಪ ಅವರೊಬ್ಬ ಆರೋಪಿ. ಅವರ ವಿರುದ್ಧ ದೇಶದ ಸರ್ವೋನ್ನತ ಸ್ವತಂತ್ರ, ಸ್ವಾಯತ್ತ ತನಿಖಾ ಸಂಸ್ಥೆ ಸಿಬಿಐ ತನಿಖೆ ನಡೆಸಲಿದೆ. ಅದೂ ಲಂಚ ಪ್ರಕರಣದ ಬಗ್ಗೆ. ಯಡಿಯೂರಪ್ಪ ಅವರ ಮೇಲಿರುವ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವ  ಹಿನ್ನೆಲೆಯಲ್ಲಿಯೇ ದೇಶದ ಸರ್ವೋನ್ನತ ನ್ಯಾಯಾಲಯ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದೆ. 

ಅಂದರೆ ಈಗ ಯಡಿಯೂರಪ್ಪ ಆರೋಪಿ ಪಟ್ಟ ಹೊತ್ತು ಕಟಕಟೆಯಲ್ಲಿ ನಿಂತಿದ್ದಾರೆ. ಮೂರು ದಶಕಗಳ ಸತತ ಪರಿಶ್ರಮದ ಫಲವಾಗಿ ಜನ ಸೇವೆ ಮಾಡಲು ಸಿಕ್ಕ ಪರಮೋಚ್ಚ ಅಧಿಕಾರದ ಕುರ್ಚಿಯನ್ನು ದುರುಪಯೋಗ ಮಾಡಿಕೊಂಡು ಹಣದಾಸೆಗೆ ಶರಣಾಗಿ, ಸ್ವಜನ ಪಕ್ಷಪಾತ, ಸ್ವಜಾತಿ ಪಕ್ಷಪಾತ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ. ಈಗ ಮತ್ತೊಮ್ಮೆ ಬಂಧನದ ಭೀತಿ ಎದುರಿಸುತ್ತಿದ್ದಾರೆ. ತಮ್ಮ ಉಜ್ವಲವಾದ ರಾಜಕೀಯ ಭವಿಷ್ಯಕ್ಕೆ ತಾವೇ ಕೈಯಾರೆ ತಿಲಾಂಜಲಿ ಎರೆದುಕೊಳ್ಳುವ ಹಂತಕ್ಕೂ ಬಂದಿದ್ದಾರೆ. ಅಂದರೆ ಹಣದಾಸೆ, ಸ್ವಜನ ಪಕ್ಷಪಾತ ಮಾಡುವ ರಾಜಕಾರಣಿಗಳಿಗೆ ಯಡಿಯೂರಪ್ಪ ಅವರ ರಾಜಕೀಯ ಜೀವನ ಒಂದು ಉದಾಹರಣೆಯಾಗಿ ನಿಲ್ಲುವಂತಾಗಿರುವುದು ನಿಜಕ್ಕೂ ದುರ್ದೈವ.

ಯಡಿಯೂರಪ್ಪ ಯಾವುದೇ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರಲ್ಲ. ರೈತನ ಮಗನಾಗಿ ರೈತರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು ರಾಜಕೀಯ ಜೀವನ ಆರಂಭಿಸಿದ್ದು, ಮಾವನ ಊರು ಶಿಕಾರಿಪುರದಲ್ಲಿ. ಶಿಕಾರಿಪುರ ಪುರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಯಡಿಯೂರಪ್ಪ ತಮ್ಮಜನಪರ ಕಾಳಜಿಯಿಂದಲೇ ವಿಧಾನಸಭೆಗೂ ಆಯ್ಕೆಯಾದರು.

ಅಲ್ಲಿಂದ ಮುಂದೆ ಪ್ರತಿಪಕ್ಷದಲ್ಲಿಯೇ ಹೆಚ್ಚುವ ಕಾಲ ಕಳೆದ ಯಡಿಯೂರಪ್ಪ ಅವರಿಗೆ ಅಧಿಕಾರ ದೊರೆತಿದ್ದು ಆಕಸ್ಮಿಕವೇ. ಹೀಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೂ, ಜನಮನ್ನಣೆ ಪಡೆಯುವಂಥ ಕೆಲಸ ಮಾಡಿದರೂ ಯಡಿಯೂರಪ್ಪ ತಮ್ಮ ಹಣದ ಲಾಲಸೆಗೆ ಬಲಿಯಾದರೇನೋ ಎಂಬ ಗುಮಾನಿ ಕಾಡುತ್ತದೆ. ಒಟ್ಟಿನಲ್ಲಿ ಮೇರು ನಾಯಕ ಇಂದು ದುರಂತ ನಾಯಕನಾಗಿ ನಿಂತಿರುವುದು ಹಲವರಲ್ಲಿ ಬೇಸರ ಮೂಡಿಸಿದ್ದರೆ, ಮತ್ತೆ ಕೆಲವರಿಗೆ ಹರ್ಷ ತಂದಿದೆ. ಇದೆಲ್ಲದರ ನಡುವೆ ಯಡಿಯೂರಪ್ಪ ಈಗ ಮತ್ತೊಂದು ಸುತ್ತಿನ ಹೋರಾಟದ ಬದುಕಿಗೆ ಅಣಿಯಾಗುತ್ತಿದ್ದಾರೆ. ಇದುವೇ ಜೀವನ ಚಕ್ರ ಅಲ್ಲವೇ.  

ಮುಖಪುಟ /ಸುದ್ದಿ ಸಮಾಚಾರ