ಮುಖಪುಟ /ಸುದ್ದಿ ಸಮಾಚಾರ 

ಯಡಿಯೂರಪ್ಪಗೆ ಬಂಧನದ ಭೀತಿ

yadiyurappaಬೆಂಗಳೂರು,ಮೇ,೧೬: ಮಹತ್ವದ ಬೆಳವಣಿಗೆಯಲ್ಲಿ ಜಿಂದಾಲ್ ಸಮೂಹದ ಸೌತ್ ವೆಸ್ಟ್ ಮೈನಿಂಗ್ ಕಂಪನಿಯಿಂದ ಸಂಶಯಾಸ್ಪದ ರೀತಿಯಲ್ಲಿ ಹಮ ಪಡೆದ ಹಾಗೂ ರಾಚೇನಹಳ್ಳಿ ಜಮೀನಿನ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮತ್ತವರ ಬಂಧುಮಿತ್ರರ ನಿವಾಸ ಹಾಗೂ ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು, ಶಿವಮೊಗ್ಗ, ಶಿಕಾರಿಪುರ ಹಾಗೂ ಬಳ್ಳಾರಿ ಸೇರಿದಂತೆ ರಾಜ್ಯದ 10ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, ಮಹತ್ದ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಸಿಬಿಐ ತಿಳಿಸಿದೆ.

ಗಣಿ ಕಂಪೆನಿಗಳಿಂದ ತಮ್ಮ ಕುಟುಂಬ ಒಡೆತನದ ಸಂಸ್ಧೆಗಳಿಗೆ ಕಾನೂನುಬಾಹಿರವಾಗಿ ಪಡೆದ ದೇಣಿಗೆ, ಕಾನೂನು ಉಲ್ಲಂಘಿಸಿ ನಡೆಸಲಾಗಿರುವ ಡಿನೋಟಿಫಿಕೇಶನ್ ಪ್ರಕರಣ ಕುರಿತಂತೆ ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ಸಿಬಿಐ ಅಧಿಕಾರಿಗಳು ಯಡಿಯೂರಪ್ಪ ಮತ್ತಿತರರ ವಿರುದ್ಧ ಎಫ್.ಐ.ಆರ್. ದಾಖಲಿಸಿಕೊಂಡು ದಾಳಿ ನಡೆಸಿದರು.

ಈ ಬೆಳವಣಿಗೆ ಯಡಿಯೂರಪ್ಪ ಪಾಳೆಯಕ್ಕೆ ಮರ್ಮಾಘಾತ ನೀಡಿದ್ದು, ಅವರ ಇಡೀ ಕುಟುಂಬದ ಪರಿವಾರ ಕಮಕ್ - ಕಿಮಕ್ ಎನ್ನಲು ಸಾಧ್ಯವಾಗದಂತಹ ಪರಿಸ್ಧಿತಿ ನಿರ್ಮಾಣವಾಗಿದೆ. ಇದರಿಂದಾಗಿ ಆಡಳಿತಾರೂಢ ರಾಜ್ಯ ಬಿಜೆಪಿ ಪರ ವಿರುದ್ಧದ ಧನಿಗಳು ಕೇಳಿ ಬಂದಿವೆ. ಯಡ್ಡಿ ಪಾಳೆಯ ದಿಗ್ಮೂಢವಾಗಿದ್ದರೆ, ವಿರೋಧಿ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿದೆ.

ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್.ಐ.ಆರ್ ದಾಖಲಿಸಿದ ಮರು ದಿನ ಬೆಳಗ್ಗೆಯೇ ಈ ದಾಳಿ ನಡೆಸಿರುವುದು ವಿಶೇಷವಾಗಿದೆ.

ಬೆಂಗಳೂರಿನ ಸಿಬಿಐ ಘಟಕದ ಮುಖ್ಯಸ್ಧ ಹಿತೇಂದ್ರ, ಎಸ್.ಪಿ. ಡಾ. ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದ ೧೬ ಮಂದಿ ನುರಿತ ಅಧಿಕಾರಿಗಳ ತಂಡ ಯಡಿಯೂರಪ್ಪ ಅವರ ಡಾಲರ‍್ಸ್ ಕಾಲೋನಿಯಲ್ಲಿರುವ ಮನೆ ಹಾಗೂ ರೇಸ್‌ಕೋರ್ಸ್ ರಸ್ತೆಯಲ್ಲಿರುವ ನಿವಾಸ, ಆರ್.ಪಿ.ಸಿ ಲೇಔಟ್‌ನಲ್ಲಿರುವ ಯಡಿಯೂರಪ್ಪ ಅವರ ಅಳಿಯ ಸೋಹನ್ ಕುಮಾರ್ ಅವರ ನಿವಾಸದ ಮೇಲೆಯೂ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡರು.

ಇದಲ್ಲದೇ ಯಡಿಯೂರಪ್ಪ ಕುಟುಂಬದ ಒಡೆತನದಲ್ಲಿರುವ ಪಿಇಎಸ್ ಶಿಕ್ಷಣ ಟ್ರಸ್ಟ್, ಧವಳಗಿರಿ ಪ್ರಾಪ್ರಟೀಸ್ ಪ್ರೈವೆಟ್ ಲಿಮಿಟೆಡ್, ಭಗತ್ ಹೋಮ್ಸ್ ಪ್ರೇವೈಟ್ ಲಿಮಿಟೆಡ್ ಕಚೇರಿಯ ಮೇಲೂ ದಾಳಿ ನಡೆಸಲಾಗಿದೆ. ಕಚೇರಿ ನಿರ್ವಹಾಕರಿಂದ ಬೀಗ ತರಿಸಿಕೊಂಡು ಕಚೇರಿಯನ್ನು ಸಿಬಿಐ ಅಧಿಕಾರಿಗಳು ಸಮಗ್ರವಾಗಿ ಜಾಲಾಡಿದ್ದಾರೆ.

ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ, ಇನ್ನೋರ್ವ ಪುತ್ರ, ಸಂಸದ ರಾಘವೇಂದ್ರ, ಅಳಿಯ ಸೋಹನ್ ಕುಮಾರ್, ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಿದ್ದಲಿಂಗಯ್ಯ, ಶಾಸಕ ಕೃಷ್ಣಯ್ಯಶೆಟ್ಟಿ ಅವರ ರಾಜಾಜಿನಗರದ ನಿವಾಸ, ಯಡಿಯೂರಪ್ಪ ಅವರ ಶಿವಮೊಗ್ಗದ ಮೈತ್ರಿ ನಿವಾಸ, ಶಿಕಾರಿಪುರದ ಮನೆ, ತೋಟದ ಮನೆಗಳ ಮೇಲೆಯೂ ದಾಳಿ ನಡೆಸಿ, ಅಮೂಲ್ಯ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇಂದು ಬೆಳಗ್ಗೆ ೫.೩೦ ಗಂಟೆಯಿಂದಲೇ ಸರಣಿ ದಾಳಿ ಆರಂಭವಾಗಿದ್ದು, ಸಿಬಿಐ ಅಧಿಕಾರಿಗಳು ಹಲವರನ್ನು ವಶಕ್ಕೆ ಪಡೆದು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ. ಜತೆಗೆ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಆರೋಪಕ್ಕೆ ಪೂರಕವಾದ ದಾಖಲೆಗಳು ದೊರೆತಿರುವುದಾಗಿ ಸಿಬಿಐ ಮೂಲಗಳು ದೃಢಪಡಿಸಿವೆ.

ಬೆಳ್ಳಂಬೆಳಗ್ಗೆ ೮ ಜನರ ಸಿಬಿಐ ತಂಡ ತೋರಣಗಲ್ಲಿನ ಜಿಂದಾಲ್‌ನ ವಿದ್ಯಾನಗರಕ್ಕೆ ಆಗಮಿಸಿ ಜಿಂದಾಲ್ ಸ್ಟೀಲ್ ಕಂಪನಿಯ ಸಿಇಓ ಡಾ.ವಿನೋದ್ ನಾವೇಲ್ ಮತ್ತು ಸೌತ್ ವೆಸ್ಟ್ ಮೈನಿಂಗ್ ಕಂಪನಿಯ ಪ್ರಭಾರಿ ಸಿಈಓ ಯು.ಕೆ.ಪಾಂಡೆ ಅವರ ಮನೆ ಮೇಲೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆದಿದೆ.

ನಂತರ ಸಿಬಿಐ ತಂಡ ಸಂಡೂರು ರಸ್ತೆಯ ಬೆಟ್ಟ ಪ್ರದೇಶದಲ್ಲಿನ ಜಿಂದಾಲ್ ಸಂಸ್ಥೆಯ ಸೌತ್ ವೆಸ್ಟ್ ಮೈನಿಂಗ್ ಕಂಪನಿಯ ಕಚೇರಿ ಮೇಲೆ ದಾಳಿ ಮಾಡಿ ಕಡತಗಳ ಪರಿಶೀಲನೆ ನಡೆಸಿದೆ ಸಿಬಿಐನ ಅಧಿಕಾರಿಗಳಿಗೆ ಜಿಂದಾಲ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ವಿಖಾಸ್ ಶರ್ಮ ಸಹಕಾರ ನೀಡಿ ಅಗತ್ಯ ಮಾಹಿತಿ ನೀಡಿದ್ದಾರೆ.

ಯಡಿಯೂರಪ್ಪ ಅವರ ಮತ್ತೋರ್ವ ಅಳಿಯ ಉದಯ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದರು.

ಅವರಿಂದ ಮಹತ್ವದ ಮಾಹಿತಿ ಪಡೆದು ನಂತರ ಬಿಡುಗಡೆ ಮಾಡಿದರು ಎಂದು ಸಿಬಿಐ ಮೂಲಗಳು ತಿಳಿಸಿವೆ. ಆದರೆ ಈ ಸುದ್ದಿಯನ್ನು ಯಡಿಯೂರಪ್ಪ ಕುಟುಂಬ ನಿರಾಕರಿಸಿದೆ.

ಶಿವಮೊಗ್ಗದಲ್ಲಿ ಆರು ಮಂದಿ ಸಿಬಿಐ ಅಧಿಕಾರಿಗಳ ತಂಡ, ಯಡಿಯೂರಪ್ಪ ಅವರ ಕುಟುಂಬಕ್ಕೆ ಸೇರಿದ ಹಲವಾರು ಶಿಕ್ಷಣ ಸಂಸ್ಧೆಗಳನ್ನು ತಪಾಣೆಗೊಳಪಡಿಸಿತು. ಅವರ ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲಿಸಿತು.

ಯಡಿಯೂರಪ್ಪ ಅವರ ಪುತ್ರಿ ಅರುಣಾ ದೇವಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗೆ ೭.೩೦ ಕ್ಕೆ ನಮ್ಮ ನಿವಾಸಕ್ಕೆ ಆಗಮಿಸಿ, ಸಂಪೂರ್ಣ ತಪಾಸಣೆ ನಡೆಸಿತು.

ವಿಮಾ ಬಾಂಡ್‌ಗಳು, ವಾಹನ ಚಾಲನಾಪರವಾನಗಿ, ವಾಹನಗಳ ದಾಖಲೆ ಪತ್ರಗಳು, ಮತ್ತಿತರ ದಾಖಲೆ ಪತ್ರಗಳನ್ನು ಸಿಬಿಐ ತಂಡ ಪರಿಶೀಲನೆಗೊಳಪಡಿಸಿತು ಎಂದು ಹೇಳಿದರು.

ಶಿಕಾರಿಪುರದಲ್ಲೂ ಸಿಬಿಐನ ಮತ್ತೊಂದು ತಂಡ ದಾಳಿ ನಡೆಸಿತು. ಅಲ್ಲಿನ ಮನೆ ಮತ್ತು ತೋಟದ ಮನೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ದಾಖಲೆ ಪತ್ರಗಳನ್ನು ತನ್ನ ವಶಕ್ಕೆ ಪಡೆಯಿತೆಂದು ಸಿಬಿಐ ಮೂಲಗಳು ತಿಳಿಸಿವೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರರ ಪ್ರೇರಣಾ ಶಿಕ್ಷಣ ಟ್ರಸ್ಟ್‌ಗೆ ಸಂಡೂರು ತಾಲೂಕಿನಲ್ಲಿ ಗಣಿ ಗುತ್ತಿಗೆ ಪಡೆಯಲು ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿರುವ ಜಿಂದಾಲ್ ಸೌತ್ ವೆಸ್ಟ್ ಮೈನಿಂಗ್ ಕಂಪನಿ ೩೦ ಕೋಟಿ ರೂಪಾಯಿ ಕಿಕ್ ಬ್ಯಾಕ್ ನೀಡಿದೆ ಎಂಬ ಆರೋಪ ಮಾಡಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ಸುಪ್ರೀಂ ಕೋರ್ಟಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ನ ಹಸಿರು ಪೀಠ ಸಿಬಿಐ ತನಿಖೆಗೆ ಆದೇಶಿಸಿತ್ತು.

ಬಂಧನ ಭೀತಿ : ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಮತ್ತೆ ತಮ್ಮನ್ನು ಮತ್ತು ಕುಟುಂಬದ ಸದಸ್ಯರನ್ನು ಬಂಧಿಸುವ ಭೀತಿ ಎದುರಿಸುತ್ತಿರುವ ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಕೋರಿ ಸಿಬಿಐ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ. 

ಮುಖಪುಟ /ಸುದ್ದಿ ಸಮಾಚಾರ