ಮುಖಪುಟ /ಸುದ್ದಿ ಸಮಾಚಾರ 

ನನಗೂ ಬಿಎಸ್‌ವೈ ಕುಟುಂಬಕ್ಕೂ ಸಂಬಂಧ ಇಲ್ಲ- ನಟಿ ಹರಿಪ್ರಿಯ

Haripriyaಬೆಂಗಳೂರು, ಮೇ ೧೬:- ನನಗೂ ಯಡಿಯೂರಪ್ಪ ಪುತ್ರ ವಿಜಯೇಂದ್ರನಿಗೂ ಪರಿಚಯವೇ ಇಲ್ಲ. ನಮ್ಮ ಮನೆ ಮೇಲೆ ಸಿಬಿಐ ದಾಳಿ ನಡೆದಿಲ್ಲ. ಈ ಬಗ್ಗೆ ಬಂದಿರುವ ಮಾಧ್ಯಮ ವರದಿಗಳೆಲ್ಲಾ ಸುಳ್ಳು ಎಂದು ಕನ್ನಡ ಚಿತ್ರರಂಗದ ನಟಿ ಹರಿಪ್ರಿಯ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿಂದು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಕುಟುಂಬಕ್ಕೂ ನನಗೂ ಯಾವುದೇ ಪರಿಚಯ ಇಲ್ಲ, ಸಂಬಂಧ ಇಲ್ಲ. ಹೀಗಿರುವಾಗ ಅವರ ಮೇಲಿನ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ನನ್ನ ಮನೆ ಮೇಲೆ ಏಕೆ ದಾಳಿ ಮಾಡುತ್ತದೆ ಎಂದು ಪ್ರಶ್ನಿಸಿದರು.

ಇಂದು ನಾನು ಮನೆಯಿಂದ ಹೊರಗೆ ಹೋಗಿದ್ದೆ. ಆಗ ನನ್ನ ಗೆಳತಿ ಫೋನ್ ಮಾಡಿ ಟಿವಿ ನೋಡು ನಿಮ್ಮ ಮನೆ ಮೇಲೆ ಸಿಬಿಐ ದಾಳಿ ನಡೆದಿದೆ ಎಂದು ಬರ್ತಿದೆ ಎಂದರು. ಆಗ ನನ್ನ ಅಣ್ಣ, ಅಮ್ಮ ಮನೆಯಲ್ಲಿದ್ದರು. ಕೂಡಲೇ ಮನೆಗೆ ದಾವಿಸಿದೆ. ಆದರೆ ಯಾವುದೇ ದಾಳಿ ನಡೆದಿರಲಿಲ್ಲ. ಇದು ಕೇವಲ ಸುಳ್ಳು ಸುದ್ದಿ ಎಂದರು.

ಸಿಬಿಐ ದಾಳಿ ಮಾಡಿದರೂ ಒಳ್ಳೆದೆ ಆಗ ಸತ್ಯ ಜನಕ್ಕೆ ಗೊತ್ತಾಗತ್ತೆ. ನನಗೂ ಹಾಗೂ ಯಡಿಯೂರಪ್ಪ ಕುಟುಂಬದವರಿಗೂ ಸಂಬಂಧ ಇಲ್ಲ ಎಂಬುದು ಜನರಿಗೆ ತಿಳಿಯುತ್ತದೆ ಎಂದು ಹೇಳಿದರು.

ಯಡಿಯೂರಪ್ಪ ಅವರ ಕುಟುಂಬದ ಸದಸ್ಯರ ಜೊತೆ ನಿಮ್ಮ ಹೆಸರು ಕೇಳಿ ಬರುತ್ತಿದೆಯಲ್ಲ ಎಂದಾಗ, ವಾರಪತ್ರಿಕೆಯೊಂದು ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಹೆಸರ ಜೊತೆ ನನ್ನ ಹೆಸರು ಸೇರಿಸಿ ಬರೆದಿತ್ತು. ಹೀಗೆ ಏಕೆ ಬರೆಯಿತೋ ಗೊತ್ತಿಲ್ಲ. ನನ್ನ ಚಿತ್ರ ಬಿಡುಗಡೆ ಆಗುವ ಸಂದರ್ಭದಲ್ಲಿ ಹೀಗೆ ಅಪಪ್ರಚಾರ ನಡೆಯುತ್ತಿರುವುದರ ಹಿಂದೆ ಯಾರದೋ ಸಂಚಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ನಾನು ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ನೇರವಾಗಿ ನೋಡಿಯೇ ಇಲ್ಲ. ಆದರೆ ಆ ಪತ್ರಿಕೆ ಅದೇಕೆ ಹೀಗೆ ಬರೆಯಿತೋ ಗೊತ್ತಿಲ್ಲ. ನನ್ನ ಎರಡು ಚಿತ್ರಗಳು ಬಿಡುಗಡೆ ಆಗುವಾಗಲೂ ಹೀಗೆ ಅಪಪ್ರಚಾರ ಮಾಡಲಾಗಿತ್ತು. ಈಗ ಕಿಲಾಡಿ ಕಿಟ್ಟಿ ಚಿತ್ರ ಬಿಡುಗಡೆ ಸಂದರ್ಭದಲ್ಲಿ ನನ್ನ ಮನೆ ಮೇಲೆ ಸಿಬಿಐ ದಾಳಿ ಆಗಿದೆ ಎಂದು ಪ್ರಕಟಿಸಿದ್ದಾರೆ. ಬಹುಶಃ ನಾನು ಯಾರಿಂದಲಾದರೂ ಚಿತ್ರರಂಗದಲ್ಲಿ ಅವರ ಪಟ್ಟ ಕಿತ್ತುಕೊಳ್ಳುತ್ತೇನೆ ಎಂಬ ಭೀತಿ ಇರಬಹುದು. ಅದಕ್ಕೆ ಹೀಗೆ ಪ್ರತಿ ಬಾರಿ ನನ್ನ ಚಿತ್ರ ಬಿಡುಗಡೆ ಆಗುವಾಗ  ಸುಳ್ಳು ಸುದ್ದಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರಿಗೆ ನಿಮ್ಮ ಯಶಸ್ಸಿನ ಬಗ್ಗೆ ಭಯ ಇದೆ ಎಂದಾಗ. ಚಿತ್ರರಂಗದಲ್ಲಿ ಯಾರಿಗೆ ನನ್ನ ಬಗ್ಗೆ ಭಯ ಇದೆಯೋ ಗೊತ್ತಿಲ್ಲ. ನಾನು  ಚಿತ್ರೋದ್ಯಮದಲ್ಲಿ ಯಾರದೋ ಸ್ಥಾನ ಕಸಿದುಕೊಳ್ಳುತ್ತೇನೆ ಎಂಬ ಭಯದಿಂದ ಬೇರೆ ಯಾರೋ ಹೀಗೆ ಮಾಡುತ್ತಿದ್ದಾರೆ. ನಾನು ಉನ್ನತ ಸ್ಥಾನಕ್ಕೆ ಏರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇನ್ನು ಮುಂದಾದರೂ ಹೀಗೆ ನನ್ನ ವಿರುದ್ಧ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದರು.

ನನಗೂ ಯಡಿಯೂರಪ್ಪ ಕುಟುಂಬದ ಸದಸ್ಯರಿಗೂ ಯಾವುದೇ ಪರಿಚಯ ಇಲ್ಲ. ನಾವು ಡಾಲರ್ಸ್ ಕಾಲೊನಿಯಲ್ಲಿ ಈಗ ವಾಸ ಮಾಡುತ್ತಿಲ್ಲ. ನಾನು ಡಾಲರ್ಸ್ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿದ್ದೆ. ಆದರೆ ಕೆಲವು ಪತ್ರಿಕೆಗಳಲ್ಲಿ ನನಗೆ ಯಡಿಯೂರಪ್ಪ ಪುತ್ರ ಮನೆ ಕೊಡಿಸಿದ್ದಾರೆ ಎಂದೆಲ್ಲಾ ಸುದ್ದಿ ಹಬ್ಬಿಸಿದ್ದರು. ನಾನು ಯಾರಿಂದಲೂ ಯಾವುದೇ ಗಿಫ್ಟ್ ಪಡೆದಿಲ್ಲ. ನಾನು ಕಷ್ಟ ಪಟ್ಟು ದುಡಿದು ಮಾಡಿರುವ ಆಸ್ತಿ ಬಗ್ಗೆ ನನ್ನ ಬಳಿ ದಾಖಲೆ ಇದೆ ಎಂದರು.

ನನಗೆ ಚಿತ್ರರಂಗದಲ್ಲಿ ಬೆಳೆಯಬೇಕು ಎಂಬ ಹಂಬಲ ಇದೆಯೇ ಹೊರತು, ರಾಜಕೀಯದ ಬಗ್ಗೆ ಆಸಕ್ತಿಯೇ ಇಲ್ಲ. ಸುಮ್ಮನೆ ನನ್ನನ್ನು ಈ ಪ್ರಕರಣದಲ್ಲಿ ಎಳೆದು ತರಲಾಗಿದೆ. ನನ್ನ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಅಪಪ್ರಚಾರ ಮಾಡಲಾಗಿದೆ ಎಂದು ಅವರು ಹೇಳಿದರು.

ಮುಖಪುಟ /ಸುದ್ದಿ ಸಮಾಚಾರ