ಮುಖಪುಟ /ಸುದ್ದಿ ಸಮಾಚಾರ 

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ
ಪುಂಡಲೀಕ ಹಾಲಂಬಿ ಅಧಿಕಾರ ಸ್ವೀಕಾರ

Halambi News president of Kannada Sahitya Parishatಬೆಂಗಳೂರು, ಮೇ .3: ಕನ್ನಡ ನಾಡು, ನುಡಿ, ಭಾಷೆ, ಗಡಿ, ಜಲ ಯಾವುದೇ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾದರೂ ಅದನ್ನು ಕನ್ನಡ ಸಾಹಿತ್ಯ ಪರಿಷತ್ತು ಸಹಿಸುವುದಿಲ್ಲ. ಈ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಹೋರಾಟಕ್ಕೆ, ಸಂಘರ್ಷಕ್ಕೆ ಬದ್ಧ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಪುಂಡಲೀಕ ಹಾಲಂಬಿ ಸ್ಪಷ್ಟಪಡಿಸಿದ್ದಾರೆ.

ಕನ್ನಡನಾಡಿನ ಸಾಂಸ್ಕೃತಿಕ ಸಾರ್ವಭೌಮ ಸಂಸ್ಥೆಯ ಅಧ್ಯಕ್ಷರಾಗಿ ೭ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸಿದ ಅವರು, ಇಂದು ಆಡಳಿತಾಧಿಕಾರಿ ಮನುಬಾಳಿಗಾರ್ ಅವರಿಂದ ಪರಿಷತ್ತಿನ ಧ್ವಜ ಸ್ವೀಕರಿಸುವ ಮೂಲಕ ಅಧಿಕಾರ ಸ್ವೀಕರಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತನ್ನು ಜಾತ್ಯತೀತ ಹಾಗೂ ಕನ್ನಡಿಗರ ಸಂಸ್ಥೆಯಾಗಿ ರೂಪಿಸುವುದಾಗಿ, ತಮ್ಮ ಅಧಿಕಾರಾವಧಿಯಲ್ಲಿ ೨೫ ಕೋಟಿ ರೂಪಾಯಿಗಳ ಶಾಶ್ವತ ನಿಧಿಯನ್ನು ಪರಿಷತ್ತಿನಲ್ಲಿಡಲು ಶ್ರಮಿಸುವುದಾಗಿ ಹೇಳಿದರು.

ಇದು ತಮ್ಮ ಅಧಿಕಾರ ಸ್ವೀಕಾರ ಸಮಾರಂಭವಲ್ಲ. ಬದಲಾಗಿ ಸೇವಾಧೀಕ್ಷೆ ತೊಡುವ ಸಮಾರಂಭ ಎಂದು ಬಣ್ಣಿಸಿದ ಅವರು, ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ವ್ಯಕ್ತಿ ಕೇಂದ್ರಿತವಾಗಬಾರದು, ಅದಕ್ಕೆ ಸಾಂಸ್ಥಿಕ ಪ್ರಾತಿನಿಧ್ಯವೇ ಇರಬೇಕು. ನಾನು ಕೇವಲ ಹೆಸರಿಗಷ್ಟೇ ಅಧ್ಯಕ್ಷ ವಾಸ್ತವವಾಗಿ ನಾಡಿನ ಎಲ್ಲ ೬ ಕೋಟಿ ಕನ್ನಡಿಗರೂ ಈ ಸಂಸ್ಥೆಯ ಅಧ್ಯಕ್ಷರು ಎಂದು ಹೇಳಿದರು.

ಕನ್ನಡ ಕಟ್ಟುವ ಕಾರ್ಯಕ್ಕಾಗಿಯೇ ಕನ್ನಡ ಸಾಹಿತ್ಯ ಪರಿಷತ್ತು ಜನ್ಮತಾಳಿದ್ದು, ಹಿರಿಯರು, ಹಿಂದಿನ ಅಧ್ಯಕ್ಷರು, ನಾಡಿನ ಹಿರಿಯರು, ವಿವಿಧ ಕ್ಷೇತ್ರಗಳ ಗಣ್ಯರು, ಕನ್ನಡಪರ ಸಂಘಟನೆಗಳ ಸಹಕಾರ ಪಡೆದು ಸಾಹಿತ್ಯ ಪರಿಷತ್ತಿನ ಉದ್ದೇಶದ ಈಡೇರಿಕೆಗೆ ಶ್ರಮಿಸುವುದಾಗಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಾನು ನಿಂತಾಗ ಸಾಹಿತಿಗಳಲ್ಲದವರು ಅಧ್ಯಕ್ಷರಾಗಬಾರದು ಎಂಬ ಅಪಸ್ವರವೂ ಕೇಳಿಬಂತು. ಕನ್ನಡದ ಕೆಲಸ ಮಾಡಲು ಎಲ್ಲರಿಗೂ ಅರ್ಹತೆ ಇದೆ. ಕನ್ನಡ ಕಟ್ಟುವ ಮನಸ್ಸು, ಕನ್ನಡಿಗರನ್ನು ಒಗ್ಗೂಡಿಸುವ ಹುಮ್ಮಸ್ಸು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗಿರಬೇಕು. ಕನ್ನಡಕ್ಕೆ ಅನ್ಯಾಯವಾದಾಗ ಹಿಂದೆ ಮುಂದೆ ನೋಡದೆ ಹೋರಾಟ ಮಾಡುವ ಮನೋಸ್ಥಿತಿ ಅವರಿಗಿರಬೇಕು ಎಂದರು.

ಜಾತಿ, ಮತ, ಪ್ರದೇಶಗಳೆಲ್ಲವನ್ನೂ ಮೀರಿ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲ ಕನ್ನಡಿಗರಿಗೆ ಕೃತಜ್ಞತೆ ಅರ್ಪಿಸಿದ ಅವರು, ತಮ್ಮ ಪೂರ್ಣ ಅಧಿಕಾರಾವಧಿಯನ್ನು ಕನ್ನಡದ ಕೆಲಸಕ್ಕೆ ಹಾಗೂ ಪರಿಷತ್ತಿನ ಏಳಿಗೆಗೆ ಮುಡಿಪಾಗಿಡುವುದಾಗಿ ಘೋಷಿಸಿದರು.

Pundaleeka Halambi, ಪುಂಡಲೀಕ ಹಾಲಂಬಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಕನ್ನಡ ಸಾಹಿತ್ಯ ಪರಿಷತ್ತು ೯೭ ವರ್ಷ ಪೂರೈಸಿದೆ. ಶತಮಾನದ ಹೊಸ್ತಿಲಲ್ಲಿರುವ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಹೇಳಿದ ಪುಂಡಲೀಕ ಹಾಲಂಬಿ, ಕನ್ನಡ ಸಾಹಿತ್ಯ ಪರಿಷತ್ತಿನ ಆವರಣಲ್ಲಿ ಶತಮಾನೋತ್ಸವ ಕಟ್ಟಡ ನಿರ್ಮಿಸುವುದಾಗಿ ಹೇಳಿದರು.

ಭಿಕ್ಷೆಯಲ್ಲ:- ಕನ್ನಡ ಸಾಹಿತ್ಯ ಪರಿಷತ್ತಿಗೆ ಅನುದಾನ ನೀಡುವುದು ಸರ್ಕಾರದ ಕರ್ತವ್ಯ. ಅದು ಖಂಡಿತಾ ಭಿಕ್ಷೆಯಲ್ಲ. ಕನ್ನಡಿಗರ ಅಧಿಕಾರ ಎಂದು ಹೇಳಿದ ನೂತನ ಅಧ್ಯಕ್ಷರು, ಕನ್ನಡದ ವಿಚಾರದಲ್ಲಿ ಯಾರೇ ಅಪಸ್ವರ ತೆಗೆದರೂ ಅದನ್ನು ಪರಿಷತ್ತಿನ ಅಧ್ಯಕ್ಷನಾಗಿ ನಾನು ಸಹಿಸುವುದಿಲ್ಲ. ಇಂದು ಕನ್ನಡನಾಡಿನಲ್ಲೇ ಕನ್ನಡ ಶೋಚನೀಯ ಸ್ಥಿತಿ ತಲುಪುತ್ತಿದೆ. ಕನ್ನಡನಾಡಿನಲ್ಲಿ ಕನ್ನಡ ಸಾರ್ವಭೌಮ ಸಂಸ್ಥೆಯಾಗಿ ಮೆರೆಯುವಂತೆ ಮಾಡುವುದು ನಮ್ಮೆಲ್ಲರ ಗುರಿಯಾಗಬೇಕು. ಇದಕ್ಕೆ ನಾವೆಲ್ಲಾ ಶಪಥ ಮಾಡಬೇಕು ಎಂದರು.

ಆಡಳಿತಾಧಿಕಾರಿಯಾಗಿ ಅಧಿಕಾರ ಹಸ್ತಾಂತರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನುಬಾಳಿಗಾರ್ ಮಾತನಾಡಿ, ಕನ್ನಡದ ಕೆಲಸಕ್ಕೆ ಯಾವುದೇ ಸರ್ಕಾರ ಹಣ ನೀಡುವುದಿಲ್ಲ ಎನ್ನುವುದಿಲ್ಲ. ಎಲ್ಲರೂ ಒಗ್ಗೂಡಿ ಕನ್ನಡ ಕಟ್ಟುವ ಕೆಲಸ ಮಾಡಿ ಎಂದರು. 

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಮಾತನಾಡಿ, ಪುಂಡಲೀಕ ಹಾಲಂಬಿಯವರು ಕಳೆದ ಹಲವು ದಶಕಗಳಿಂದ ಸಾಹಿತ್ಯ ಪರಿಷತ್ತಿನೊಂದಿಗೆ ಒಡನಾಡ ಹೊಂದಿದ್ದು, ಪರಿಷತ್ತಿನ ಏಳಿಗೆಗೆ ವಿವಿಧ ಸ್ತರದಲ್ಲಿ ದುಡಿದಿದ್ದಾರೆ. ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಅವರು ಅರ್ಹರಾಗಿದ್ದಾರೆ, ಯೋಗ್ಯರಾಗಿದ್ದಾರೆ ಎಂದರು. 

ಕನ್ನಡದ ಹಿತಕ್ಕೆ ಕುಂದಾದರೆ ಹಿಂದೆ ಮುಂದೆ ನೋಡದೆ ಎದೆಗಾರಿಕೆ ತೋರಬೇಕಾದ್ದು ಪರಿಷತ್ತಿನ ಕರ್ತವ್ಯ. ಈ ಕಾರ್ಯವನ್ನು ಹಾಲಂಬಿ ಅವರು ಮಾಡುತ್ತಾರೆ ಎಂದರು. ವಿವಿಧ ಸಂಘ ಸಂಸ್ಥೆಗಳು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.

 

ಮುಖಪುಟ /ಸುದ್ದಿ ಸಮಾಚಾರ