ಮುಖಪುಟ /ಸುದ್ದಿ ಸಮಾಚಾರ   
 

ಕುವೆಂಪು ಸಾಹಿತ್ಯ ಇಂಗ್ಲಿಷ್ ಗೆ ತರ್ಜುಮೆ ಆಗಿದ್ದರೆ
ನೊಬೆಲ್ ಪ್ರಶಸ್ತಿ ಬರುತ್ತಿತ್ತು - ಡಿ.ಬಿ. ಚಂದ್ರೇಗೌಡ

D.B. Chandregowdaಬೆಂಗಳೂರು, ಮೇ 17 : ರಾಷ್ಟ್ರಕವಿ ಕು.ವೆಂ.ಪು. ಅವರ ವಿಚಾರಧಾರೆಗಳು ವಿಶ್ವಮಾನ್ಯವಾಗಿದ್ದು, ಅವರ ಕೃತಿಗಳನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಿದ್ದರೆ ಅವರಿಗೆ ಖಂಡಿತಾ ನೊಬೆಲ್ ಪ್ರಶಸ್ತಿ ದೊರಕುತ್ತಿತ್ತು ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನೂತನ ಸಂಸತ್ ಸದಸ್ಯ ಡಿ.ಬಿ. ಚಂದ್ರೇಗೌಡ ಅಭಿಪ್ರಾಯಪಟ್ಟರು.

ಬೆಂಗಳೂರಿನ ರಂಗಾಭರಣ ಕಲಾಕೇಂದ್ರ, ಸಂಜಯನಗರದ ಚಂದ್ರಪ್ರಿಯ ರಂಗಮಂದಿರದಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಸಾಂಸ್ಕೃತಿಕ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಕರುನಾಡು ಕಲೆಗಳ ತವರು. ಕಲೆ, ಸಂಸ್ಕೃತಿ ಪರಂಪರೆಯಿಂದ ಶ್ರೀಮಂತವಾದ ನಾಡಿನ ಕಲಾ ಪ್ರತಿಭೆಗಳು ಹೊರ ನಾಡಿನಲ್ಲೂ ಅರಳಬೇಕು, ಬೆಳಗಬೇಕು. ಈ ನಿಟ್ಟಿನಲ್ಲಿ ರಂಗಾಭರಣ ಕಲಾಕೇಂದ್ರ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಇಂದಿನ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಲಕರು ಗಮನ ಹರಿಸಬೇಕು ಎಂದು ಅವರು ಹೇಳಿದರು.

ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಳೆದ 11 ತಿಂಗಳುಗಳಲ್ಲಿ ಹೆಬ್ಬಾಳ ಕ್ಷೇತ್ರದ ಶಾಸಕರಾಗಿ ಜನತೆಯ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸಿದ್ದೇನೆ. ಹೇಳಿದ ಅಭಿವೃದ್ಧಿ ಕೆಲಸವನ್ನೆಲ್ಲಾ ಮಾಡಿದ್ದೇನೆ. ಆದರೂ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸದೆ ಪಕ್ಷಕ್ಕೆ ಕ್ಷೇತ್ರದಲ್ಲಿ ಅಲ್ಪ ಮತ ನೀಡಿರುವ ಬಗ್ಗೆ ನೋವು ವ್ಯಕ್ತಪಡಿಸಿದರು.

ಸಂಸ್ಕೃತಿಯಲ್ಲಿ ಕರ್ನಾಟಕಕ್ಕೆ ಕರ್ನಾಟಕವೇ ಸಾಟಿ. ಎಳೆಯ ವಯಸ್ಸಿನಿಂದಲೇ ಅವರಿಗೆ ಸಂಸ್ಕೃತಿಯ ಪರಿಚಯ ಮಾಡಿಸುವ ನಿಟ್ಟಿನಲ್ಲಿ ರಂಗಾಭರಣ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ರಂಗಾಭರಣದ ಸ್ಥಾಪಕ ಕಾರ್ಯದರ್ಶಿ ಎಂ.ಎಸ್. ಗುಣಶೀಲನ್ ಮಾತನಾಡಿ, ಕಳೆದ 15 ವರ್ಷಗಳಿಂದಲೂ ಕಲಾಕೇಂದ್ರ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯ ಪ್ರಕಾಶಕ್ಕೆ ಶ್ರಮಿಸುತ್ತಿದೆ.

ಸಂಜಯ ನಗರದಲ್ಲಿ ಸುಸಜ್ಜಿತವಾದ ಆಪ್ತ ರಂಗ ಮಂದಿರ ನಿರ್ಮಾಣ ಮಾಡುವ ಮೂಲಕ ಬೆಂಗಳೂರು ಉತ್ತರ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಿಲ್ಲ ಎಂಬ ಕೊರಗು ನೀಗಿಸಿದೆ ಎಂದರು.

ಜನಪ್ರತಿನಿಧಿಗಳು ಕೇವಲ ರಸ್ತೆ, ನೀರು, ಚರಂಡಿ ದುರಸ್ತಿಗೆ ಮಾತ್ರವೇ ಗಮನ ಹರಿಸದೆ ನಾಡಿನ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿಯುವ ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕೆಂದರು.

ಚಿತ್ರ ಸಾಹಿತಿ ಕೆ. ಕಲ್ಯಾಣ್ ಕಲೆಯನ್ನು ಆದರಿಸುವವರನ್ನು ಕಲೆ ಅಪ್ಪಿಕೊಳ್ಳುತ್ತದೆ ಎಂದು ಹೇಳಿದರು.

 

 ಮುಖಪುಟ /ಸುದ್ದಿ ಸಮಾಚಾರ