ಮುಖಪುಟ /ಸುದ್ದಿ ಸಮಾಚಾರ   
 

ರಾಜ್ಯದಲ್ಲಿ ಶುರುವಾಗಲಿದೆ ಮತ್ತೆ ಚುನಾವಣೆ ಕಾವು
5 ಕ್ಷೇತ್ರಗಳಿಗೆ ನಡೆಯಲಿದೆ ಉಪ ಚುನಾವಣೆ

evmಬೆಂಗಳೂರು, ಮೇ 29 : ರಾಜ್ಯದಲ್ಲಿ ಇನ್ನಾರು ತಿಂಗಳೊಳಗೆ ಮತ್ತೊಂದು ಉಪ ಚುನಾವಣೆ ನಡೆಯಲಿದೆ. ಬೆಂಗಳೂರು ಗೋವಿಂದರಾಜನಗರದ ಕಾಂಗ್ರೆಸ್ ಶಾಸಕರಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ, ಚನ್ನಪಟ್ಟಣದ ಕಾಂಗ್ರೆಸ್ ಶಾಸಕರಾಗಿದ್ದ ಚಿತ್ರನಟ ಸಿ.ಪಿ. ಯೋಗೇಶ್ವರ್, ನಾಗಮಂಗಲ ಕಾಂಗ್ರೆಸ್ ಶಾಸಕ ಎಲ್.ಆರ್. ಶಿವರಾಮೇಗೌಡ ರಾಜೀನಾಮೆ ನೀಡಿ ಬಿ.ಜೆ.ಪಿ. ಸೇರಿದ ಹಿನ್ನೆಲೆಯಲ್ಲಿ ಈ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವುದು ಖಚಿತವಾಗಿತ್ತು.

ಏಪ್ರಿಲ್ ತಿಂಗಳಲ್ಲಿ ಎರಡು ಹಂತದಲ್ಲಿ ರಾಜ್ಯದ 28 ಕ್ಷೇತ್ರಗಳಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ  ರಾಮನಗರ ಜೆಡಿಎಸ್ ಶಾಸಕ ಎಚ್.ಡಿ.ಕುಮಾರಸ್ವಾಮಿ, ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಲ್ಲಿಕಾರ್ಜುನ ಖರ್ಗೆ  ವಿಧಾನಸಭಾಧ್ಯಕ್ಷ ಜಗದೀಶ ಶೆಟ್ಟರ್ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದು,  ಈ ಸ್ಥಾನಗಳಿಗೂ ಚುನಾವಣೆ ನಡೆಯಬೇಕಾಗಿದೆ.

 ರಾಜ್ಯದಲ್ಲಿ ಕಳೆದ 1 ವರ್ಷದಿಂದಲೂ ಬರೀ ಚುನಾವಣೆಯದೇ ಮಾತಾಗಿದೆ. 2008ರ ಏಪ್ರಿಲ್ ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಿತು. ಇದಾದ ಬಳಿಕ ಆಪರೇಷನ್ ಕಮಲದ ಪರಿಣಾಮವಾಗಿ 7 ವಿಧಾನಸಭೆಗಳಿಗೆ ಕಳೆದ ವರ್ಷಾಂತ್ಯದಲ್ಲಿ ಉಪ ಚುನಾವಣೆ ಜರುಗಿತು.

ಅದಾದ ನಂತರ ದೇಶದ ಮಹಾಚುನಾವಣೆಯ ಅಂಗವಾಗಿ ರಾಜ್ಯದ 28 ಲೋಕಸಭೆಗಳಿಗೂ ಚುನಾವಣೆ ನಡೆಯಿತು.

ಈಗ ಬೆಂಗಳೂರು ಮಹಾನಗರ ಪಾಲಿಕೆಗೆ ಜುಲೈ 31ರೊಳಗೆ ಚುನಾವಣೆ ನಡೆಯಬೇಕಾಗಿದೆ. ಬೆಂಗಳೂರು ಬೆಳೆದು, ನಗರಸಭೆಗಳೂ ಬೆಂಗಳೂರು ವ್ಯಾಪ್ತಿಗೆ ಸೇರಿ ಬೃಹತ್ ಬೆಂಗಳೂರು ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ವಾರ್ಡ್ ಗಳ ಸಂಖ್ಯೆ 100ರಿಂದ 197ಕ್ಕೆ ಏರಿಸುವ ಬಗ್ಗೆ ಸರ್ಕಾರ ನಿರ್ಧರಿಸಿದೆ. ಅಂದ ಮೇಲೆ ಬೆಂಗಳೂರಿನಲ್ಲಿ ಮತ್ತೆ ಚುನಾವಣೆ ಕಾವು ಏರಲಿದೆ.

ರಾಜ್ಯದ ಹಲವು ಸಹಕಾರ ಸಂಘಗಳಿಗೂ ಚುನಾವಣೆ ನಡೆಯಬೇಕಾಗಿದ್ದು ಸಿದ್ಧತೆಗಳು ಸಾಗಿವೆ. ಎಲ್ಲ ಮುಗಿಯಿತಪ್ಪ ಎನ್ನುವ ಹೊತ್ತಿಗೆ ಮತ್ತೆ ರಾಜ್ಯದ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

 ಮುಖಪುಟ /ಸುದ್ದಿ ಸಮಾಚಾರ