ಮುಖಪುಟ /ಸುದ್ದಿ ಸಮಾಚಾರ   
 

ಸತತ 2ನೇ ಬಾರಿ ಪ್ರಧಾನಿಯಾಗಿ ಡಾ.ಮನಮೋಹನಸಿಂಗ್

ಸೋನಿಯಾಗಾಂಧೀ, ಡಾ. ಮನಮೋಹನಸಿಂಗ್, Dr. Manmohan singh, Soniya Gandhiನವದೆಹಲಿ,22: ಪಂಡಿತ್ ಜವಾಹರಲಾಲ್ ನೆಹರೂ ಅವರ ಬಳಿಕ ಐದು ವರ್ಷಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿ, ಎರಡನೇ ಬಾರಿಗೆ ಮತ್ತೊಮ್ಮೆ ಪ್ರಧಾನಿಯಾಗಿ ಡಾ. ಮನಮೋಹನಸಿಂಗ್ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾದೇವಿಸಿಂಗ್ ಪಾಟೀಲ್ ಗೌಪ್ಯತೆ ಮತ್ತು ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಡಾ. ಸಿಂಗ್ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಎರಡನೆಯವರಾಗಿ ಪ್ರಣಬ್ ಮುಖರ್ಜಿ ಪ್ರಮಾಣ ವಚನ ಸ್ವೀಕರಿಸಿದರೆ, ನಂತರ ಶರದ್ ಪವಾರ್, ಎ.ಕೆ. ಆಂಟನಿ, ಪಿ. ಚಿದಂಬರಂ, ಮಮತಾ ಬ್ಯಾನರ್ಜಿ, ಎಸ್.ಎಂ. ಕೃಷ್ಣ, ಗುಲಾಂ ನಬಿ ಆಜಾದ್, ಸುಶೀಲ್ ಕುಮಾರ್ ಶಿಂಧೆ, ಎಂ. ವೀರಪ್ಪ ಮೊಯ್ಲಿ, ಎಸ್. ಜಯಪಾಲರೆಡ್ಡಿ, ಕಮಲ್ ನಾಥ್, ವಯಲ್ಲಾರ್ ರವಿ, ಮೀರಾ ಕುಮಾರ್, ಮುರಳಿ ದೇವೂರಾ, ಕಪಿಲ್ ಸಿಬಲ್, ಅಂಬಿಕಾಸೋನಿ, ಬಿಜಯ್ ಕೃಷ್ಣ ಹಂದೆ, ಆನಂದ್ ಶರ್ಮಾ, ಸಿ.ಪಿ. ಜೋಶಿ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.

ಚುನಾವಣಾ ಪೂರ್ವದಲ್ಲಿ ಯು.ಪಿ.ಎ. ಮಿತ್ರಪಕ್ಷವಾಗಿದ್ದ ಡಿ.ಎಂ.ಕೆ. ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿರುವ ಕಾರಣ, ಯು.ಪಿ.ಎ. ಸರ್ಕಾರದಲ್ಲಿ ಪಾಲ್ಗೊಳ್ಳದೆ ಬಾಹ್ಯ ಬೆಂಬಲ ನೀಡಲು ತೀರ್ಮಾನಿಸಿದೆ. ಆದರೆ, ಯು.ಪಿ.ಎ. ಅಂಗ ಪಕ್ಷವಾದ ತೃಣಮೂಲ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಇಂದು ನಡೆದ ಸಚಿವ ಸಂಪುಟ ರಚನೆಯಲ್ಲಿ ಪಾಲ್ಗೊಂಡಿವೆ.

ಖಾತೆ ಹಂಚಿಕೆ ವಿಚಾರದಲ್ಲಿ ಮುನಿಸಿಕೊಂಡಿರುವ ಫಾರೂಕ್ ಅಬ್ದುಲ್ಲಾ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳದೆ ಐ.ಪಿ.ಎಲ್. ಕ್ರಿಕೆಟ್ ಪಂದ್ಯ ವೀಕ್ಷಿಸಲು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ