ಮುಖಪುಟ /ಸುದ್ದಿ ಸಮಾಚಾರ 

ಮುಖ್ಯಮಂತ್ರಿಗಳಿಗೂ ತಟ್ಟಿದ ಕತ್ತಲ ಭಾಗ್ಯದ ಬಿಸಿ

ಬಜೆಟ್ ಮಂಡನೆಗೆ ಮಾಡಲಿಲ್ಲ ಪ್ರತಿಪಕ್ಷಗಳು ಅಡ್ಡಿ
ಆದರೆ ಆ ಕೆಲಸವನ್ನು ಕರೆಂಟೇ ಮಾಡಿತು ಬಿಡಿ

CM Kattala Bhagya, ಮುಖ್ಯಮಂತ್ರಿಗಳಿಗೂ ಕತ್ತಲಭಾಗ್ಯಬೆಂಗಳೂರು,ಮಾ.18: ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ಹಣಕಾಸು ಸಚಿವರಾಗಿ 11ನೇ ಬಾರಿ ಇಂದು ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದರು.

ಸರ್ಕಾರದ ಸಾಧನೆ ಹೇಳಿಕೊಂಡಾಗ, ಹೊಸ ಹೊಸ ಯೋಜನೆ ಘೋಷಿಸಿದಾಗಲೂ ಆಡಳಿತ ಪಕ್ಷದ ಸದಸ್ಯರು ಹರ್ಷೋದ್ಗಾರ ಮಾಡಲಿಲ್ಲ. ಮೇಜು ತಟ್ಟಿ ಬೆಂಬಲಿಸಲಿಲ್ಲ. ಎಲ್ಲೋ ಒಂದೆರೆಡು ಬಾರಿ ತಟ್ಟೋಣೋ ಬೇಡವೋ ಎಂಬಂತೆ ಮೇಜು ಮುಟ್ಟಿದರು ಅಷ್ಟೇ. ಈ ಮಧ್ಯೆ ಪ್ರತಿ ಪಕ್ಷಗಳು ಕೂಡ ಬಜೆಟ್ ಮಂಡನೆಗೆ ಯಾವುದೇ ಸಂದರ್ಭದಲ್ಲಿ ವಿರೋಧವನ್ನೂ ಮಾಡಲಿಲ್ಲ, ಅಡ್ಡಿಯನ್ನೂ ಪಡಿಸಲಿಲ್ಲ. ಆದರೆ ದುರ್ದೈವ ವಿದ್ಯುತ್ತೇ ಆ ಕೆಲಸ ಮಾಡ್ತು. ಮುಖ್ಯಮಂತ್ರಿಗಳು ಸದನದಲ್ಲಿ ಬಜೆಟ್ ಮಂಡಿಸುವಾಗ ಎರಡು ಬಾರಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡಿತು. ಒಂದು ಬಾರಿಯಂತೂ ಮುಖ್ಯಮಂತ್ರಿಗಳು ಅಧಿಕಾರಿಯೊಬ್ಬರ ಮೊಬೈಲ್ ಬೆಳಕಲ್ಲೇ ಬಜೆಟ್ ಓದಿ ಮುಗಿಸಲು ಮುಂದಾದರು. ಆದರೆ ಅಷ್ಟು ಹೊತ್ತಿಗೆ ವಿದ್ಯುತ್ ಬಂತು. 

ಇದು ರಾಹುಕಾಲದಲ್ಲಿ ಬಜೆಟ್ ಮಂಡಿಸಿದ ಪರಿಣಾಮ ಎಂದು ಬಿಜೆಪಿ ಹಿರಿಯ ಸದಸ್ಯ ಗೋವಿಂದ ಕಾರಜೋಳ ಹೇಳಿದರೆ, ಈ ಬಗ್ಗೆ ರೇವಣ್ಣ ಅವರನ್ನು ಕೇಳಬೇಕು ಅಂದರು ಬಸವರಾಜ ಬೊಮ್ಮಾಯಿ. ವಿದ್ಯುತ್ ಕ್ಷೇತ್ರದಲ್ಲಿ ಇದು ಸರ್ಕಾರದ ನೈಜ ಸ್ಥಿತಿ ಎಂದು ಕುಟುಕಿದರು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್. ಕೊನೆಗೆ ಹೀಗೆಲ್ಲಾ ಮಾತನಾಡಬೇಡಿ ಎಂದ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮುಂದುವರಿಸಿದರು. ಆದ್ರೂ ಇಂಧನ ಸಚಿವರು ಬಜೆಟ್ ಮಂಡನೆ ವೇಳೆಯಲ್ಲಾದ್ರೂ ಹೀಗಾಗದಂತೆ ಎಚ್ಚರ ವಹಿಸಬೇಕಾಗಿತ್ತು ಅಂದ್ರು ಹಲವರು...

 ಮುಖಪುಟ /ಸುದ್ದಿ ಸಮಾಚಾರ