ಮುಖಪುಟ /ಸುದ್ದಿ ಸಮಾಚಾರ 

ಐವರು ಮಾಜಿ ಸಿಎಂಗಳು ಲೋಕಾ ಕಣದಲ್ಲಿ..?

ರಾಜ್ಯದಲ್ಲಿ ಮತ್ತೆ ಉಪ ಚುನಾವಣೆ ಭೀತಿ

ಬೆಂಗಳೂರು, ಮಾ.25- ಐವರು ಮಾಜಿ ಮುಖ್ಯಮಂತ್ರಿಗಳು ಈ ಬಾರಿಯ ಲೋಕಸಭಾ ಚುನಾವಣೆ ಕಣಕ್ಕಿಳಿಯುವ ಸಾಧ್ಯತೆ ನಿಚ್ಚಳವಾಗಿದೆ. ಜೊತೆಗೆ ಉಪ ಚುನಾವಣೆ ಭೀತಿಯೂ ಎದುರಾಗಿದೆ.
ಮಾಜಿ ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ತಮ್ಮ ತವರು ಜಿಲ್ಲೆ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದರೆ, ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಇದೇ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದ್ದು, ಎಚ್.ಡಿ.ಕೆ. ಸ್ಪರ್ಧಿಸಿದರೆ,  ಇಲ್ಲಿ ಮಾಜಿ ಮುಖ್ಯಮಂತ್ರಿಗಳಿಬ್ಬರ ನಡುವೆಯೇ ಸ್ಪರ್ಧೆ ಏರ್ಪಡಲಿದೆ.
ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ  ಹಾಗೂ  ಡಿ.ವಿ. ಸದಾನಂದಗೌಡ ಅನುಕ್ರಮವಾಗಿ ಶಿವಮೊಗ್ಗ ಮತ್ತು ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಉಪ ಚುನಾವಣೆ -ಈಗಾಗಲೇ ಬಿ. ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಈ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಖಚಿತವಾಗಿದೆ.

ಈ ಮಧ್ಯೆ ಸಚಿವ ಪ್ರಕಾಶ್ ಹುಕ್ಕೇರಿ, ಶಾಸಕರಾದ ಎ.ಮಂಜು, ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ವಿನಯ ಕುಲಕರ್ಣಿ ಸಹ ಲೋಕಸಭಾ ಚುನಾವಣಾ  ಕಣದಲ್ಲಿದ್ದಾರೆ. ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಹಾಲಿ ಶಾಸಕರಲ್ಲಿ ಯಾರಾದರೂ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ರಾಜ್ಯದಲ್ಲಿ ಮತ್ತೆ ಉಪ ಚುನಾವಣೆ ನಡೆಯಬೇಕಾಗುತ್ತದೆ. 

ಮುಖಪುಟ /ಸುದ್ದಿ ಸಮಾಚಾರ