ಮುಖಪುಟ /ಸುದ್ದಿ ಸಮಾಚಾರ 

ಮತದಾರರ ಪಟ್ಟಿಗೆ ಸೇರಿಸಲು 3 ಲಕ್ಷ ಅರ್ಜಿ

ಬೆಂಗಳೂರು ಮಾರ್ಚ್ 10: ಜನವರಿ 31 ಕ್ಕೆ ಮುಕ್ತಾಯಗೊಂಡ ಮತದಾರರ ಪಟ್ಟಿಯ ಪರಿಷ್ಕರಣೆ ನಂತರ ಮಾರ್ಚ್ 8 ರವರೆಗೆ 3.14 ಲಕ್ಷ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಮಾರ್ಚ್ 9 ರಂದು ರಾಜ್ಯಾದ್ಯಂತ ನಡೆದ ವಿಶೇಷ ಶಿಬಿರದಲ್ಲಿ ಅಂದಾಜು 3 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ.  ಒಟ್ಟಾರೆ ಈ ಅವಧಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಹೊಸ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಭಾನುವಾರ ನಡೆದ ವಿಶೇಷ ಶಿಬಿರದಲ್ಲಿ ಈವರೆಗೆ ಪಡೆದ ಮಾಹಿತಿ ಪ್ರಕಾರ 2.44 ಲಕ್ಷ ಅರ್ಜಿ ಸ್ವೀಕರಿಸಲಾಗಿದೆ.  ಬೆಂಗಳೂರಿನಲ್ಲಿ 79,೦೦೦ ಅರ್ಜಿಗಳನ್ನು ಸ್ವೀಕರಿಸಲಾಗಿದೆ.   ಇನ್ನೂ ನಾಲ್ಕು ಜಿಲ್ಲೆಗಳಿಂದ ಮಾಹಿತಿ ಬರಬೇಕಾಗಿದ್ದು ಅಂದಾಜು 3 ಲಕ್ಷ ಜನರು ಮತದಾರರ ಪಟ್ಟಿಗೆ ಹೆಸರು ಸೇರಿಸುವ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ.  ಇನ್ನೂ ಒಂದು ವಾರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಕಾಲಾವಕಾಶವಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಂಡು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಿಕೊಳ್ಳಬಹುದು ಎಂದು ತಿಳಿಸಿದರು.

ಈ ಅರ್ಜಿಗಳನ್ನು 10 ದಿನಗಳ ಅವಧಿಯಲ್ಲಿ  ಪರಿಶೀಲಿಸಿ  ಮತದಾರರ ಪಟ್ಟಿಗೆ ಸೇರ್ಪಡೆ ಕ್ರಮ ಕೈಗೊಳ್ಳಲಾಗುವುದು.  ಬೆಂಗಳೂರಿನಲ್ಲಿ ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

  

ಮುಖಪುಟ /ಸುದ್ದಿ ಸಮಾಚಾರ