ಮುಖಪುಟ /ಸುದ್ದಿ ಸಮಾಚಾರ 

ನೋಟಾ-ಯಾರಿಗೂ ಮತ ಹಾಕಲ್ಲ....

EVMನವದೆಹಲಿ, ಮಾರ್ಚ್ 5:  ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತಯಂತ್ರಗಳಲ್ಲಿ, ಸ್ಪರ್ಧಿಸಿರುವ ಯಾವುದೇ ಅಭ್ಯರ್ಥಿಗೂ ಮತದಾನ ಮಾಡುವುದಿಲ್ಲ ಎಂದು ಮತದಾರರು ದಾಖಲಿಸುವ ಅವಕಾಶ ಕಲ್ಪಿಸಲಾಗಿದೆ.

ಇದಕ್ಕಾಗಿ ನನ್ ಆಫ್ ದಿ ಎಬೋ - ನೋಟಾ ಸಂಕೇತ ಇರುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಸ್ಪಷ್ಟಪಡಿಸಿದರು.

ಕಳೆದ ಹಲವು ವರ್ಷಗಳಿಂದ ಮತದಾನದ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ನಡೆದ ಅಧ್ಯಯನದ ವೇಳೆ ಹಲವು ಪ್ರಜ್ಞಾವಂತ ಹಾಗೂ ವಿದ್ಯಾವಂತ ನಾಗರಿಕರು, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಚಾರಿತ್ರ್ಯ, ಹಿನ್ನೆಲೆ ನೋಡಿದರೆ ಮತ ಚಲಾಯಿಸಲು ಮನಸ್ಸೇ ಬರುವುದಿಲ್ಲ ಹೀಗಾಗಿ ಮತಗಟ್ಟೆಗೆ ಹೋಗಲ್ಲ ಎಂದು ಉತ್ತರ ನೀಡಿದ ಉದಾಹರಣೆಗಳು ಸಾಕಷ್ಟಿವೆ. ಜೊತೆಗೆ ಹಲವು ಗ್ರಾಮಗಳಲ್ಲಿ, ಬೂತ್ ಗಳಲ್ಲಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮತದಾನ ಬಹಿಷ್ಕಾರ ಮಾಡಿದ ಘಟನೆಗಲೂ ನಡೆದಿವೆ. ಈ ಎಲ್ಲದರ ಹಿನ್ನೆಲೆಯಲ್ಲಿ ಮತದಾರರು ಮತದಾನದಿಂದ ದೂರ ಉಳಿಯಬಾರದು. ಅವರು ತಮ್ಮ ವಿರೋಧವನ್ನು ದಾಖಲಿಸಲು ಅವಕಾಶ ನೀಡಬೇಕು ಎಂಬ ವಾದ ಸಾರ್ವತ್ರಿಕವಾಗಿತ್ತು.

ಈ ಹಿಂದೆ ಮತಗಟ್ಟೆಗೆ ಬಂದು ಮತ ಚಲಾಯಿಸದೆ, ಕೇವಲ ರಿಜಿಸ್ಟರ್ ನಲ್ಲಿ ಸಹಿ ಮಾಡಿ ಹಿಂತಿರುಗುವ ಅವಕಾಶವಿತ್ತು. ಈಗ ಸುಪ್ರೀಂಕೋರ್ಟ್ ನಿರ್ದೇಶನದಂತೆ ಗೌಪ್ಯ ಮತದಾನದ ಹಕ್ಕು ಕಾಪಾಡಲು ಈ ವ್ಯವಸ್ಥೆ ಜಾರಿ ಮಾಡಲಾಗಿದೆ.

ಜನರ ದನಿಗೆ ಸ್ಪಂದಿಸಿರುವ ಆಯೋಗ ಈ ಬಾರಿ ಮೊದಲ ಬಾರಿಗೆ ಮತಯಂತ್ರದಲ್ಲಿ ದಾಖಲಾಗಿರುವ ಅಂದರೆ ಚುನಾವಣೆಯ ಕಣದಲ್ಲಿರುವ ಯಾವುದೇ ವ್ಯಕ್ತಿಗೆ ಮತ ಚಲಾಯಿಸಲು ಇಚ್ಛಿಸುವುದಿಲ್ಲ ಎಂದು ತಮ್ಮ ವಿರೋಧವನ್ನು ನೋಟ ಮೂಲಕ ದಾಖಲಿಸಲು  ಆಯೋಗ ಅವಕಾಶ ನೀಡಿದೆ.

 

ಮುಖಪುಟ /ಸುದ್ದಿ ಸಮಾಚಾರ