ಮುಖಪುಟ /ಸುದ್ದಿ ಸಮಾಚಾರ 

9 ಹಂತದಲ್ಲಿ ಲೋಕಸಭಾ ಚುನಾವಣೆ

ಏಪ್ರಿಲ್ 7ರಿಂದ ಮೇ 12ರವರೆಗೆ ಮತದಾನ, 16ರಂದು ಮತ ಎಣಿಕೆ

Parliamentನವದೆಹಲಿ, ಮಾರ್ಚ್ 5: ಬಹುನಿರೀಕ್ಷಿತ 16ನೇ ಲೋಕಾಸಭಾ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಿಸಿದ್ದು, ಏಪ್ರಿಲ್ 7ರಿಂದ ಮೇ 12ರವರಗೆ 9 ಹಂತಗಳಲ್ಲಿ ಮತದಾನ ನಡೆಯಲಿದೆ.

ಒಂದೂವರೆ ತಿಂಗಳ  ಸುದೀರ್ಘ ಅವಧಿಯಲ್ಲಿ ನಡೆಯಲಿರುವ ಚುನಾವಣೆ ಹಾಗೂ ಮತದಾನದ ಪ್ರಕ್ರಿಯೆ ಮೇ 16ರಂದು ದೇಶಾದ್ಯಂತ ಒಂದೇ ದಿನ ನಡೆಯಲಿರುವ ಮತದಾನ ಹಾಗೂ ಫಲಿತಾಂಶದ ಪ್ರಕಟಣೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಕಳೆದ ಲೋಕಸಭಾ ಚುನಾವಣೆಯಿಂದ, ಈ ಚುನಾವಣೆಯ ಅವಧಿಯಲ್ಲಿ ದೇಶದ ಮತದಾರರ ಸಂಖ್ಯೆ ಸುಮಾರು ೧೦ ಕೋಟಿಯಷ್ಟು ಹೆಚ್ಚಳವಾಗಿದೆ, ಇದರೊಂದಿಗೆ 16ನೇ ಲೋಕಸಭೆಯಲ್ಲಿ ಮತ ಚಲಾಯಿಸಲು 81 ಕೋಟಿ 4 ಲಕ್ಷ ಜನರು ಅರ್ಹತೆ ಪಡೆದಿದ್ದಾರೆ ಎಂದು ವಿವರಿಸಿದರು.

ಇಂದಿನಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ಬರಲಿದೆ ಎಂದೂ ಅವರು ತಿಳಿಸಿದರು.

ಮಾರ್ಚ್ ೯ರಂದು ದೇಶಾದ್ಯಂತ ವಿಶೇಷ ಕೇಂದ್ರಗಳನ್ನು ತೆರೆಯಲಾಗುತ್ತದೆ, ಸ್ಥಳದಲ್ಲಿಯೇ ಭಾವಚಿತ್ರ ಸಹಿತ ಮತದಾರರ ಗುರುತಿನ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಪ್ರಸಕ್ತ 15ನೇ ಲೋಕಸಭೆಯ ಅಧಿಕಾರಾವಧಿ ಜೂನ್ ಒಂದರಂದು ಪೂರ್ಣಗೊಳ್ಳಲಿದ್ದು, ಬರುವ ಮೇ 31ರ ವೇಳೆಗೆ ನೂತನ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಿದೆ, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.

ಮೊದಲ ಹಂತದಲ್ಲಿ ಏಪ್ರಿಲ್ 7ರಂದು 6 ಕ್ಷೇತ್ರಗಳಲ್ಲಿ, ಎರಡನೇ ಹಂತದಲ್ಲಿ ಏಪ್ರಿಲ್ 9ರಂದು 7 ಕ್ಷೇತ್ರಗಳಲ್ಲಿ, ಮೂರನೇ ಹಂತದಲ್ಲಿ ಏಪ್ರಿಲ್ 10ರಂದು 92 ಕ್ಷೇತ್ರಗಳಲ್ಲಿ, ಏಪ್ರಿಲ್ 12ರಂದು ನಾಲ್ಕನೇ ಹಂತದಲ್ಲಿ 5 ಕ್ಷೇತ್ರಗಳಲ್ಲಿ, ಏಪ್ರಿಲ್ 17ರಂದು ಐದನೇ ಹಂತದಲ್ಲಿ 122 ಕ್ಷೇತ್ರಗಳಲ್ಲಿ, 6ನೇ ಹಂತದಲ್ಲಿ ಏಪ್ರಿಲ್ 24ರಂದು 117ಕ್ಷೇತ್ರಗಳಲ್ಲಿ, 7ನೇ ಹಂತದಲ್ಲಿ ಏಪ್ರಿಲ್ 30ರಂದು 89 ಕ್ಷೇತ್ರಗಳಲ್ಲಿ, ಮೇ 7ರಂದು 8ನೇ ಹಂತದಲ್ಲಿ 64 ಕ್ಷೇತ್ರಗಳಲ್ಲಿ ಹಾಗೂ ಕೊನೆಯ ಮತ್ತು 9ನೇ ಹಂತದಲ್ಲಿ ಮೇ 12ರಂದು 41 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ ಎಂದು ಸಂಪತ್ ತಿಳಿಸಿದರು. ಲೋಕಸಭಾ ಚುನಾವಣೆಯೊಂದಿಗೇ ಆಂಧ್ರ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಅವರು ಪ್ರಕಟಿಸಿದರು. ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯುಕ್ತರಾದ ಎಚ್.ಎಸ್.ಬ್ರಹ್ಮ ಮತ್ತು ಎಸ್.ಎನ್.ಎ. ಜೈದಿ ಹಾಜರಿದ್ದರು.

 

ಮುಖಪುಟ /ಸುದ್ದಿ ಸಮಾಚಾರ