ಮುಖಪುಟ /ಸುದ್ದಿ ಸಮಾಚಾರ   
 

ಗೊಂದಲದ ಗೂಡಾದ ಸಮಾರಂಭ, ಲಾಠಿಪ್ರಹಾರ

ಕನ್ನಡ ಚಲನಚಿತ್ರ ಅಮೃತಮಹೋತ್ಸವಕ್ಕೆ ಹರಿದು ಬಂದ ಜನಸಾಗರಬೆಂಗಳೂರು, ಮಾ.1 :ಕನ್ನಡ ಚಿತ್ರರಂಗ ಹಿಂದೆಂದೂ ಇಷ್ಟು ದೊಡ್ಡ ಸಮಾರಂಭ ಆಯೋಜಿಸಿದ್ದಿಲ್ಲ. ಹೀಗಾಗಿ ಅನುಭವವೂ ಇಲ್ಲ. ಅನುಭವದ ಕೊರತೆ, ಅರಮನೆ ಮೈದಾನದಲ್ಲಿ ನಡೆದ ಅಮೃತ ಮಹೋತ್ಸವ ಸಮಾರಂಭದಲ್ಲಿ ರಾರಾಜಿಸಿತು. 

ಅವ್ಯವಸ್ಥೆಯ ಆಗರವಾಗಿದ್ದ ಸಮಾರಂಭ ಗೊಂದಲದ ಗೂಡಾಗಿ, ಪ್ರೇಕ್ಷಕರು ಸಂಘಟಕರನ್ನು ಹಿಡಿಶಾಪ ಹಾಕುವಂತೆ ಮಾಡಿತು. ಸಂಜೆ 5-30ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಮಧ್ಯಾಹ್ನದಿಂದಲೇ ಜನ ಅರಮನೆ ಆವರಣದಲ್ಲಿ ಜಮಾಯಿಸಿದರು. 5-00ರವೇಳೆಗೆ ಇಡೀ ಸಭಾಂಗಣ ತುಂಬಿಹೋಗಿತ್ತು. ಕಾಲಿಡಲೂ ಅಲ್ಲಿ ಜಾಗವಿರಲಿಲ್ಲ.

ಪೊಲೀಸರು 6ಗಂಟೆಗೆ ತಡೆಗೋಡೆ ಇಟ್ಟು ಪ್ರವೇಶದ್ವಾರ ಬಂದ್ ಮಾಡಿದ್ದು, ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಗೆ ಕಾರಣವಾಯ್ತು. ಕಾರ್ಯಕ್ರಮ ಆರಂಭವಾದ ನಂತರವೂ ಜನ ಬರುತ್ತಲೇ ಇದ್ದರು, ಒಳನುಗ್ಗಲು ಪ್ರಯತ್ನಿಸುತ್ತಲೇ ಇದ್ದರು. ಆಗ ಪದೆ ಪದೇ ಲಾಠಿಯೇ ಎಲ್ಲವನ್ನೂ ನಿಯಂತ್ರಿಸಿತು.

ತಮ್ಮ ನೆಚ್ಚಿನ ತಾರೆಯರನ್ನು ನೋಡಲು ಲಕ್ಷಾಂತರ ಜನ ಆಗಮಿಸಿದ ಹಿನ್ನೆಲೆಯಲ್ಲಿ ವಿ.ವಿ.ಐ.ಪಿ., ಐ.ವಿ.ಪಿ. ಪಾಸ್ ಹೊಂದಿದ್ದವರಿಗೂ ಸಮಾರಂಭದ ಸ್ಥಳಕ್ಕೆ ಹೋಗಲು ಆಗಲಿಲ್ಲ. ತಡವಾಗಿ ಬಂದ ಹಲವು ಚಿತ್ರನಟರು ಕೂಡ ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸಾಗಬೇಕಾಯಿತು. ತಾರೆಯರ ಕಾರುಗಳು ಬಂದಾಗ ಅವರನ್ನು ಕಾಣಲು ನುಗ್ಗುತ್ತಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು.

ಒಳಗೆ ಹೋಗಲು ಆಗದ ಕಾರಣ, ಗೇಟ್ ಬಳಿಯೇ ಸಹಸ್ರಾರು ಅಭಿಮಾನಿಗಳು ಜಮಾಯಿಸಿದ್ದರು. ಈ ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಯಿತು.

ಈ ಮಧ್ಯೆ ಪ್ರೇಕ್ಷಕರ ಅನುಕೂಲಕ್ಕಾಗಿ ಹಾಕಲಾಗಿದ್ದ ಬೃಹತ್ ಪರದೆಗಳು ಸಹ ಕೆಲಸ ಮಾಡದೆ ಹಿಂದೆ ಕುಳಿತಿದ್ದ ಮಂದಿ ಕಾರ್ಯಕ್ರಮ ವೀಕ್ಷಿಸಲಾರದೆ ಪರಿತಪಿಸಿದರು. ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಯಾತನೆ ಸಹಿಸಿ ಸಮಾರಂಭ ಸ್ಥಳಕ್ಕೆ ಬಂದವರೂ ಕೂಡ ಕಾರ್ಯಕ್ರಮ ಸ್ಥಳಕ್ಕೆ ಹೋಗಲು ಸಾಧ್ಯವಾಗದೆ ಬಂದದಾರಿಗೆ ಸುಂಕವಿಲ್ಲವೆಂದು ಮನೆಗೆ ಮರಳಿದರು.

 ಮುಖಪುಟ /ಸುದ್ದಿ ಸಮಾಚಾರ