ಮುಖಪುಟ /ಸುದ್ದಿ ಸಮಾಚಾರ 

ಸೂಕ್ಷ್ಮ ನೀರಾವರಿಗೆ ಹೊಸ ನೀತಿ: ಕೃಷ್ಣ ಬೈರೇಗೌಡ

ಬೆಂಗಳೂರು, ಮಾರ್ಚ್ ೭: ರಾಜ್ಯದಲ್ಲಿ ಸೂಕ್ಷ್ಮ ನೀರಾವರಿಗಾಗಿ ಹೊಸ ನೀತಿಯನ್ನು ತರಲು ಸರ್ಕಾರ ಉದ್ದೇಶಿಸಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಕೃಷಿ ಇಲಾಖೆ ನೀರಾವರಿ, ತೋಟಗಾರಿಕೆ ಕೈಗಾರಿಕೆ ಇಲಾಖೆಗಳು ಜಂಟಿಯಾಗಿ ಲಲಿತ್ ಅಶೋಕ್ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಸೂಕ್ಷ್ಮ ನೀರಾವರಿ ಮುನ್ನೋಟ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದ ಅವರು ವ್ಯವಸಾಯದಲ್ಲಿ ನೀರನ್ನು ಮಿತವಾಗಿ ಬಳಸುವ ಉದ್ದೇಶದಿಂದ ಹೊಸ ನೀತಿಯನ್ನು ತರಲು ಉದ್ದೇಶಿಸಲಾಗಿದೆ ಎಂದರು.

ರಾಜ್ಯದಲ್ಲಿ ಶೇಕಡ ೮೪ ರಷ್ಟು ವ್ಯವಸಾಯವನ್ನು ಅಂತರ್‌ಜಲದ ನೀರಿನ ಬಳಕೆಯಿಂದಲೇ ನಡೆಸಲಾಗುತ್ತಿರುವುದರಿಂದ ರಾಜ್ಯದಲ್ಲಿ ಅಂತರ್ ಜಲ ಮಟ್ಟವು ಕುಸಿಯುತ್ತಿದೆ.  

ರಾಜ್ಯದ ೮೪ ಲಕ್ಷ  ಹೆಕ್ಟೇರ್ ಕೃಷಿ ಭೂಮಿಯಲ್ಲಿ ಕೇವಲ ೪ ರಿಂದ ೬ ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಲಾಗಿದೆ.  ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡಿನಲ್ಲಿ ಸೂಕ್ಷ್ಮ ನೀರಾವರಿಯನ್ನು ಅಳವಡಿಸಿಕೊಂಡು ವ್ಯವಸಾಯವನ್ನು ಮಾಡುತ್ತಿರುವ ಮಾದರಿಯಲ್ಲಿಯೇ ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಅಧಿಕಾರಿಗಳು ಈ ಕಾರ್ಯಾಗಾರದ ಮೂಲಕ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ರಾಜಸ್ಥಾನದ ತರುಣ್ ಭಾರತ್ ಸಂಘದ ಅಧ್ಯಕ್ಷರಾಗಿರುವ ರಾಜೇಂದ್ರಸಿಂಗ್ ಅವರು ರಾಜಸ್ಥಾನದಲ್ಲಿ ನಶಿಸಿಹೋಗಿದ್ದ ೭ ನದಿಗಳಿಗೆ ಹೇಗೆ ಮರುಜೀವ ನೀಡಲಾಯಿತು ಮತ್ತು ಅಲ್ಲಿ ಅಂತರ್ ಜಲವನ್ನು ಹೆಚ್ಚಿಸಿದ ಬಗ್ಗೆ ವಿವರಿಸಿದ ಅವರು ನಮ್ಮ ದೇಶದಲ್ಲಿ ಪ್ರಕೃತಿಯನ್ನು ಅರಿಯಲು ಒಂದು ವಿಶ್ವವಿದ್ಯಾಲಯದಿಂದಲೂ ಸಾಧ್ಯವಾಗಿಲ್ಲ ಎಂದರು.   .

ಭಾರಿ ಮತ್ತು ಸಣ್ಣ ನೀರಾವರಿ ಸಚಿವರಾದ ಎಂ.ಬಿ. ಪಾಟೀಲ್ ಅವರು ನಮ್ಮ ರಾಜ್ಯದಲ್ಲಿ ಭತ್ತ ಹಾಗೂ ಕಬ್ಬಿನ ಬೆಳೆಗಳಿಗೆ  ಹೆಚ್ಚಿನ ನೀರು ವ್ಯಯವಾಗುತ್ತಿದೆ.  ಈ ಬೆಳೆಗಳಿಗೂ ಸೂಕ್ಷ್ಮ - ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡರೆ ಕನಿಷ್ಠ ೨೦೦ ಟಿ.ಎಂ.ಸಿ. ನೀರನ್ನು ಉಳಿಸಬಹುದಾಗಿದೆ.  ಅಲ್ಲದೆ, ಕೈಗಾರಿಕೆಗಳೂ ತಾವು ಉಪಯೋಗಿಸಿದ ನೀರನ್ನೇ ಮತ್ತೆ ಮರುಬಳಕೆ ಮಾಡಿಕೊಳ್ಳುವುದರಿಂದ ನೀರು ನಿರುಪಯುಕ್ತವಾಗಿ ಹೋಗುವುದನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಲತಾ ಕೃಷ್ಣರಾವ್, ಕೃಷಿ ಇಲಾಖೆ ಕಾರ್ಯದರ್ಶಿ, ಉಮ ಮಹದೇವನ್, ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೀವ್ ಚಾವ್ಲಾ, ಮಹರಾಷ್ಟ್ರದ ಕೃಷಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸುಧೀರ್ ಕುಮಾರ್ ಘೋಯಲ್ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಖಪುಟ /ಸುದ್ದಿ ಸಮಾಚಾರ