ಮುಖಪುಟ /ಸುದ್ದಿ ಸಮಾಚಾರ 

ಸಿ.ಇ.ಟಿ.ಗೆ1.58 ಲಕ್ಷ ವಿದ್ಯಾರ್ಥಿಗಳ ಅರ್ಜಿ

ಬೆಂಗಳೂರು, ಮಾರ್ಚ್ ೭:  ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಿ ಶಿಕ್ಷಣ ಪ್ರವೇಶಕ್ಕಾಗಿ ಬರುವ ಮೇ ತಿಂಗಳಿನಲ್ಲಿ ನಡೆಸಲಿರುವ ೨೦೧೫ನೇ ಸಾಲಿನ ಸಾಮಾನ್ಯ  ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮತ್ತು  ಪರೀಕ್ಷಾ ಶುಲ್ಕ ಪಾವತಿಸುವ ಕಾಲಾವಕಾಶ ಮುಗಿದಿದ್ದು, ಒಟ್ಟು ೧,೫೮,೦೭೩ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಈ ಪೈಕಿ ೧,೪೪,೯೪೦ ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದು (ಪಿ.ಯು. ಶಿಕ್ಷಣ), ಸಿಬಿಎಸ್‌ಸಿ/ಸಿಐಎಸ್‌ಸಿಇ ಯಿಂದ ೯೧೦೧ ಅಭ್ಯರ್ಥಿಗಳು ಹಾಗೂ ೪೦೩೨ ಹೊರ ರಾಜ್ಯಗಳು/ ಹೊರದೇಶಗಳ  ಮತ್ತು ಇತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 

ಈ ವರ್ಷ ಒಟ್ಟು ಅಭ್ಯರ್ಥಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ೮೨,೩೦೫ ಮತ್ತು ವಿದ್ಯಾರ್ಥಿನಿಯರ ಸಂಖ್ಯೆ ೭೫, ೭೬೮ ಆಗಿದ್ದುಈ ವರ್ಷ ಪ್ರಪ್ರಥಮ ಬಾರಿಗೆ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಯಾವುದೇ ರೀತಿಯ ತೊಂದರೆ ಇಲ್ಲದೆ ಹೊಸ ವ್ಯವಸ್ಥೆಯನ್ನು ಬಳಸಿ ಉತ್ತಮವಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಸಿಇಟಿ-೨೦೧೪ ಪ್ರವೇಶ ಪರೀಕ್ಷೆಗೆ ೭೩,೬೦೧ ವಿದ್ಯಾರ್ಥಿಗಳು ಮತ್ತು ೬೬,೮೯೫ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೧,೪೦,೪೯೬ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಅದರಲ್ಲಿ ೧,೨೬,೩೮೪ ಕರ್ನಾಟಕದ ಅಭ್ಯರ್ಥಿಗಳು, ಸಿಬಿಎಸ್‌ಸಿ/ಸಿಐಎಸ್‌ಸಿ ಯಿಂದ ೫೮೯೮ ಮತ್ತು ಇತರ ರಾಜ್ಯಗಳ ೬,೯೧೬ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಮುಖಪುಟ /ಸುದ್ದಿ ಸಮಾಚಾರ