ಮುಖಪುಟ /ಸುದ್ದಿ ಸಮಾಚಾರ 

ಬಿ.ಎಸ್.ವೈ. ವಿರುದ್ಧದ ಬಂಧನ ವಾರೆಂಟ್ ರದ್ದು

BSYಬೆಂಗಳೂರು, ಮಾ.೬: ನ್ಯಾಯಾಲಯದ ವಿಚಾರಣೆಗೆ ಸತತ ಗೈರು ಹಾಜರಿ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿನ್ನೆ ಹೊರಡಿಸಿದ್ದ ಜಾಮೀನು ರಹಿತ ಬಂಧವ ವಾರೆಂಟನ್ನು ಇಂದು ಹಿಂಪಡೆದಿದೆ.

ತಮ್ಮ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸಿರಾಜಿನ್ ಬಾಷಾ ಸಲ್ಲಿಸಿರುವ ೨ ಹಾಗೂ ೩ನೇ ಖಾಸಗಿ ದೂರಿಗೆ ಸಂಬಂಧಿಸಿದಂತೆ ನಿನ್ನೆ ವಿಚಾರಣೆಗೆ ಹಾಜರಾಗದ ಯಡಿಯೂರಪ್ಪ ಇಂದು ಇತರ ಆರೋಪಿಗಳೊಂದಿಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ, ನಿನ್ನೆ ವಕೀಲರು ಕಲಾಪ ಬಹಿಷ್ಕರಿಸಿದ್ದ ಹಿನ್ನೆಲೆಯಲ್ಲಿ ತಾವು ಹಾಜರಾಗಿರಲಿಲ್ಲ, ತಮಗೆ ನ್ಯಾಯಾಲಯದ ಮೇಲೆ ಅಪಾರ ಗೌರವ ಇದೆ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇಂದು ವಿಶೇಷ ನ್ಯಾಯಾಧೀಶರಾದ ಎನ್.ಕೆ. ಸುಧೀಂದ್ರ ರಾವ್ ತಾವೇ ಹೊರಡಿಸಿದ್ದ ವಾರೆಂಟ್ ಅನ್ನು ಹಿಂಪಡೆದರು.

ನಿನ್ನೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವೇಳೆ ಯಡಿಯೂರಪ್ಪ ಪರ ವಕೀಲರು, ನ್ಯಾಯಾಲಯ ಸಮುಚ್ಚಯದಲ್ಲಿ ಸೂಕ್ತ ಭದ್ರತೆ ಇಲ್ಲದ ಕಾರಣ ಯಡಿಯೂರಪ್ಪ ಅವರು ಹಾಜರಾಗುತ್ತಿಲ್ಲ ಎಂದು ತಿಳಿಸಿದ್ದರು.

ಇದಕ್ಕೆ ಸಮ್ಮತಿಸದ ವಿಶೇಷ ಲೋಕಾಯುಕ್ತ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇಂದು ಯಡಿಯೂರಪ್ಪ ಅವರು, ತಮ್ಮ ಪುತ್ರ ವಿಜಯೇಂದ್ರ, ರಾಘವೇಂದ್ರ ಹಾಗೂ ಶಾಸಕ ಕೃಷ್ಣಯ್ಯ ಶೆಟ್ಟಿ, ಅಳಿಯ  ಸೋಹನ್ ಕುಮಾರ್ ಅವರೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ ಖುದ್ದು ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ವಾರೆಂಟ್ ಹಿಂಪಡೆಯಿತು.

ತಳ್ಳಾಟ : ಈ ಮಧ್ಯೆ ಹಲವು ವಕೀಲರ ಬಂಧನ, ವಕೀಲರ ಮೇಲೆ ಕಳೆದ ಶುಕ್ರವಾರ ಪೊಲೀಸರು ನಡೆಸಿದ ಲಾಠೀ ಪ್ರಹಾರ ಖಂಡಿಸಿ ವಕೀಲರು ನಡೆಸುತ್ತಿರುವ ಕಲಾಪ ಬಹಿಷ್ಕಾರದ ಹಿನ್ನೆಲೆಯಲ್ಲಿ ಇಂದು ಯಡಿಯೂರಪ್ಪ ಅವರೊಂದಿಗೆ ನ್ಯಾಯಾಲಯಕ್ಕೆ ಬಂದ ವಕೀಲ ಸಂದೀಪ್ ಪಾಟೀಲ್ ಅವರಿಗೆ ಕಲಾಪದಲ್ಲಿ ಪಾಲ್ಗೊಳ್ಳದಂತೆ ಇತರ ವಕೀಲರು ತಡೆದ ಘಟನೆ ನಡೆಯಿತು. 

ಯಡಿಯೂರಪ್ಪ ಪರ ವಕೀಲರನ್ನು ನ್ಯಾಯಾಲಯ ಪ್ರವೇಶಿಸದಂತೆ ಕೆಲವು ವಕೀಲರು ತಳ್ಳಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರೇ ನ್ಯಾಯಾಧೀಶರೆದುರು ಹಾಜರಾಗಿ ಖುದ್ದು ಮನವಿ ಮಾಡಿದರು. 

ಮುಖಪುಟ /ಸುದ್ದಿ ಸಮಾಚಾರ