ಮುಖಪುಟ /ಸುದ್ದಿ ಸಮಾಚಾರ 

೧೧ರಂದು ಶಕ್ತಿ ಪ್ರದರ್ಶನ ಬೇಡ, ಬಿಎಸ್‌ವೈಗೆ ವರಿಷ್ಠರ ಕಿವಿಮಾತು

BSYಬೆಂಗಳೂರು, ಮಾ.೬- ಬರುವ ೧೧ರಂದು ನೀವು ಮತ್ತೊಮ್ಮೆ ಬಲ ಪ್ರದರ್ಶನ ನಡೆಸುವುದು ಪಕ್ಷದ ಹಿತದೃಷ್ಟಿಯಿಂದ ಹಾಗೂ ನಿಮ್ಮ ಭವಿಷ್ಯದ ದೃಷ್ಟಿಯಿಂದಲೂ ಸೂಕ್ತವಲ್ಲ. ಯಾವುದೇ ದುಡುಕಿನ ನಿರ್ಧಾರಕ್ಕೆ ಬಾರದೆ, ಕೆಲವು ತಿಂಗಳುಗಳ ಕಾಲ ತಾಳ್ಮೆಯಿಂದ ಕಾದು ನೋಡಿ ಎಂದು ಬಿಜೆಪಿ ವರಿಷ್ಠರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಿವಿ ಮಾತು ಹೇಳಿದ್ದಾರೆ.

ಕೆಲವೇ ದಿನಗಳ ಹಿಂದೆ ರಾಜಕೀಯ ವೈರಾಗ್ಯದ ಮಾತುಗಳನ್ನಾಡಿ, ಎಲ್ಲಿ ಗೌರವ ಇರುವುದಿಲ್ಲವೋ ಅಲ್ಲಿರಬಾರದು ಎಂದು ಹೇಳುವ ಮೂಲಕ ಪಕ್ಷ ತೊರೆಯುವ ಸುಳಿವು ನೀಡಿದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಬರುವ ೧೧ರಂದು ತಮ್ಮ ಅಭಿನಂದನಾ ಸಮಾರಂಭದಲ್ಲಿ ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸಲು ಮುಂದಾಗಿರುವ ಯಡಿಯೂರಪ್ಪ ಅವರಿಗೆ ಪಕ್ಷದ ವರಿಷ್ಠರು ಈ ತಿಳಿವಳಿಕೆ ಮಾತುಗಳನ್ನು ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನೀವು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವೇ ಬೇಕು, ಮತ್ತೆ ನಿಮ್ಮನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಹಠ ಹಿಡಿಯುವುದು ಸರಿಯಲ್ಲ. ಇದಕ್ಕಾಗಿ ಪಕ್ಷದಲ್ಲಿ ಪದೇ ಪದೇ ಗೊಂದಲ ಉಂಟು ಮಾಡುವುದು ಸೂಕ್ತ ಕ್ರಮವಲ್ಲ. ತುಸು ತಾಳ್ಮೆಯಿಂದಿದ್ದರೆ ನಿಮಗೆ ಸೂಕ್ತ ಮನ್ನಣೆ, ಗೌರವ ದೊರಕುತ್ತದೆ ಎಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ ದೆಹಲಿಗೆ ತೆರಳಿದ್ದ ವೇಳೆ, ವರಿಷ್ಠರು ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಅದಕ್ಕೆ ತನ್ನದೇ ಆದ ತತ್ವ, ಸಿದ್ಧಾಂತಗಳಿರುತ್ತವೆ. ಇದನ್ನು ಮೀರಿ ನಡೆಯುವುದು ಸರಿಯಲ್ಲ. ಹಠ ಬಿಟ್ಟು ಕೆಲವು ತಿಂಗಳುಗಳ ಕಾಲ ತಾಳ್ಮೆಯಿಂದಿರಿ ಎಂದಾಗ, ನೀವು ಹೀಗೆ ತಿಂಗಳು ಗಟ್ಟಲೆ ಕಾಲ ದೂಡುತ್ತಿದ್ದರೆ, ನಾನು ಯಾವುದೇ ಅಧಿಕಾರ ಇಲ್ಲದೆ ಸುಮ್ಮನೆ ಕೂರಬೇಕೆ ಎಂದು ಯಡಿಯೂರಪ್ಪ ವರಿಷ್ಠರ ವಿರುದ್ಧ ತಿರುಗಿ ಬಿದ್ದಿದ್ದರು ಎನ್ನಲಾಗಿದೆ. 

ಹಾಗಾದರೆ ನಿಮಗೆ ಸಧ್ಯಕ್ಕೆ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡುತ್ತೇವೆ ಎಂದಾಗ ಇದಕ್ಕೆ ಒಪ್ಪದ ಯಡಿಯೂರಪ್ಪ ತಮಗೆ ಮುಖ್ಯಮಂತ್ರಿ ಪದವಿಯೇ ಬೇಕು, ಇಲ್ಲವಾದರೆ ನನ್ನ ದಾರಿ ನನಗೆ ಎಂದು ಖಡಕ್ ಉತ್ತರ ನೀಡಿದ್ದಾರೆ ಎನ್ನಲಾಗಿದೆ. 

ಇದಕ್ಕೆ ಒಪ್ಪದ ವರಿಷ್ಠರು ಹಲವು ಭ್ರಷ್ಟಾಚಾರ ಆರೋಪ ನಿಮ್ಮ ಮೇಲಿದೆ. ನೀವು ನಿರ್ದೋಷಿ ಎಂದು ನ್ಯಾಯಾಲಯದಲ್ಲಿ ಸಾಬೀತಾಗುವ ತನಕ ನಿಮ್ಮನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ಸಾಧ್ಯವಿಲ್ಲದ ಮಾತು. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರದ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

ಮುಖಪುಟ /ಸುದ್ದಿ ಸಮಾಚಾರ