ಮುಖಪುಟ /ಸುದ್ದಿ ಸಮಾಚಾರ  

ಕನ್ನಡವನ್ನು ಅನ್ನದ ಭಾಷೆ ಮಾಡುವುದು ಅಗತ್ಯ - ಸಿ.ಎಂ.

ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನ, ಮುಖ್ಯಮಂತ್ರಿ ಯಡಿಯೂರಪ್ಪಬೆಂಗಳೂರು, ಮಾ.೧೧: ಆಧುನಿಕ ತಂತ್ರಜ್ಞಾನದ ಅಗತ್ಯಗಳಿಗೆ ತಕ್ಕಂತೆ ಕನ್ನಡವನ್ನೂ ಸಜ್ಜುಗೊಳಿಸುವುದು, ಕನ್ನಡವನ್ನು ಅನ್ನದ ಭಾಷೆಯನ್ನಾಗಿಸಿ ಮುಂದಿನ ಪೀಳಿಗೆಯ ಮಕ್ಕಳು ಕನ್ನಡವನ್ನು ತಮ್ಮ ಬದುಕಿನ ಮುಖ್ಯ ಶಕ್ತಿಯನ್ನಾಗಿ ಸ್ವೀಕರಿಸುವಂತೆ ಪ್ರೇರೇಪಿಸುವುದು ತೀರಾ ಅಗತ್ಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಬೆಳಗಾವಿಯಲ್ಲಿಂದು ನಡೆಯುತ್ತಿರುವ ವಿಶ್ವಕನ್ನಡ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅದಕ್ಕಾಗಿ ಇಡಬೇಕಾದ ಹೆಜ್ಜೆಗಳನ್ನು ಗುರುತಿಸಿ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳುವುದು ವಿಶ್ವ ಕನ್ನಡ ಸಮ್ಮೇಳನದ ಮುಖ್ಯ ಕಾಳಜಿಗಳಲ್ಲಿ ಸೇರಿದೆ ಎಂದರು.

ವಿಶ್ವ ಕನ್ನಡ ಸಮ್ಮೇಳನ ಕೇವಲ ಉತ್ಸವವಲ್ಲ, ಜಾತ್ರೆಯಲ್ಲ. ಸಂಭ್ರಮ, ಸಡಗರಗಳ ಜೊತೆಗೆ ಸದ್ವಿವೇಕ, ಸದಾಶಯಗಳೂ ಇಲ್ಲಿವೆ. ಕನ್ನಡವನ್ನು ಕುರಿತ ಹೊಸ ಎಚ್ಚರ ಮೂಡುವುದಕ್ಕೆ ಇದು ಹೊಸದಿಗಂತವಾಗಲಿದೆ. ಸಮಸ್ತ ಕನ್ನಡಿಗರ ಪರವಾಗಿ ಸರ್ಕಾರವು ಕನ್ನಡಕ್ಕೆ ಹೊಸ ಒಸಗೆ ಸಲ್ಲಿಸಲಿದೆ. ಹಿರಿಯರ ಹರಕೆ, ಕಿರಿಯರ ಬಯಕೆ ಒಂದುಗೂಡಿ ಕನ್ನಡದ ಹೊಸ ಶಕೆ ಆರಂಭವಾಗಲಿದೆ ಎಂಬ ಆತ್ಮವಿಶ್ವಾಸ ನಮಗಿದೆ.

ಸುವರ್ಣ ಕರ್ನಾಟಕ ಸಂಭ್ರಮ ಮತ್ತು ಅದರ ಅಂಗವಾಗಿ ಆಯೋಜಿಸಲಾದ ಎರಡನೇ ವಿಶ್ವಕನ್ನಡ ಸಮ್ಮೇಳನದ ನೆನಪನ್ನು ಚಿರಸ್ಥಾಯಿಯಾಗಿಸುವ ಸಂಕಲ್ಪವನ್ನು ನಮ್ಮ ಸರ್ಕಾರ ಮಾಡಿದೆ. ಪ್ರಾಚಿನ ಕಾಲದಿಂದ ಹಿಡಿದು ಆಧುನಿಕ ಸಂದರ್ಭದವರೆಗೆ ಸಮಗ್ರ ಕರ್ನಾಟಕ ವಿಕಾಸ ಹೊಂದಿದ ಚಿತ್ರಣ ಮತ್ತು ಭವಿಷ್ಯದ ಮಾರ್ಗಸೂಚಕ ವಸ್ತುಸಂಗ್ರಹಾಲಯ ಮತ್ತು ಪ್ರಾತ್ಯಕ್ಷಿಕೆಗಳ ಸಹಿತ ಥೀಮ್‌ಪಾರ್ಕ್ ಸ್ಥಾಪಿಸುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

ಕರ್ನಾಟಕದ ಸಮಗ್ರ ಇತಿಹಾಸ : ಕರ್ನಾಟಕ ಹಾಗೂ ಕನ್ನಡ ಭಾಷೆಯ ಉಗಮ, ಕನ್ನಡ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆ, ಕಲೆ, ಕ್ರೀಡೆ, ರಂಗಭೂಮಿ, ಚಲನಚಿತ್ರ, ಸಂಗೀತ, ವಿಜ್ಞಾನ, ತಂತ್ರಜ್ಞಾನ, ಕೃಷಿ, ನೀರಾವರಿ, ಕೈಗಾರಿಕೆ, ಆಡಳಿತ ಇತ್ಯಾದಿ ಕ್ಷತ್ರಗಳು, ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳು ಹಾಗೂ ಸ್ವಾತಂತ್ರ್ಯಾ ನಂತರದ ಈ ಆರು ದಶಕಗಳಲ್ಲಿ ಸಾಧಿಸಲಾದ ಅಭಿವೃದ್ಧಿ ಸೇರಿ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಆಗಿರುವ ಬೆಳವಣಿಗೆ ಮತ್ತು ಬದಲಾವಣೆಗಳನ್ನು ಪ್ರದರ್ಶಿಸುವ ವ್ಯವಸ್ಥೆಯನ್ನು ಈ ಥೀಮ್‌ಪಾರ್ಕ್‌ನಲ್ಲಿ ಮಾಡಲಾಗುವುದು.

ಭೂತ ಮತ್ತು ವರ್ತಮಾನದ ಸಾಧನೆಗಳನ್ನು ಸೆರೆ ಹಿಡಿದು ಭವಿಷ್ಯದ ದಾರಿಯನ್ನು ಮುಂಗಾಣುವ ಮುನ್ನೋಟವನ್ನೂ ಈ ಥೀಮ್‌ಪಾರ್ಕ್‌ನಲ್ಲಿ ಅಳವಡಿಸಲಾಗುವುದು. ಸಮಕಾಲೀನ ಮತ್ತು ಭವಿಷ್ಯದ ಪೀಳಿಗೆಗೆ ಕರ್ನಾಟಕದ ವೀರರು, ವೀರ ವನಿತೆಯರು, ತ್ಯಾಗಿಗಳು, ಸಾಧಕರನ್ನು ಪರಿಚಯಿಸುವ ಮತ್ತು ಒಟ್ಟಾರೆ ಕರ್ನಾಟಕ ವಿಕಾಸಗೊಂಡ ಹಾಗೂ ಭವಿಷ್ಯದಲ್ಲಿ ವಿಕಾಸಗೊಳ್ಳಬೇಕಾದ ರೀತಿ ನೀತಿಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸಲಾಗುವುದು ಎಂದು ಹೇಳಿದರು.

ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಕರಾವಳಿ, ಮಲೆನಾಡುಮೈದಾನ ಪ್ರದೇಶಗಳೂ ಸೇರಿ ಎಲ್ಲಾ ಭೌಗೋಳಿಕ ಪ್ರದೇಶಗಳು ಸಂಗಮಿಸುವ ಸ್ಥಾನದಲ್ಲಿ ಈ ಥೀಮ್‌ಪಾರ್ಕ್ ಸ್ಥಾಪಿಸುವ ಗುರಿ ನಮ್ಮ ಸರ್ಕಾರದ್ದು. ಇದಕ್ಕಾಗಿ ಮಧ್ಯ ಕರ್ನಾಟಕದ ಸೂಕ್ತ ಸ್ಥಳವೊಂದನ್ನು ಆಯ್ಕೆಮಾಡಲಾಗುವುದು ಎಂದು ಹೇಳಿದರು.

ಸಮಗ್ರ ಕರ್ನಾಟಕದ ಮತ್ತು ಸರ್ವಕ್ಷೇತ್ರಗಳ ಬೆಳವಣಗೆ ಮತ್ತು ಸಾಧನೆ ಈ ಪಾರ್ಕ್‌ನಲ್ಲಿ ಪ್ರದರ್ಶನಗೊಳ್ಳುವಂತೆ ಅಗತ್ಯ ತಯಾರಿ ಮಾಡಲು ಆಯಾ ಕ್ಷೇತ್ರಗಳ ಪರಿಣತರನ್ನೊಳಗೊಂಡ ಉನ್ನತಾಧಿಕಾರ ಸಮಿತಿಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುವುದು. ಈ ಸಮಿತಿ ಥೀಮ್‌ಪಾರ್ಕ್‌ನ ಸ್ವರೂಪ ಮತ್ತು ಒಳಗೊಳ್ಳಬೇಕಾದ ವಿಷಯಗಳನ್ನು ಅಂತಿಮಗೊಳಿಸುವುದು.

ಮುಂದಿನ ಎರಡು ವರ್ಷಗಳಲ್ಲಿ ಈ ಥೀಮ್‌ಪಾರ್ಕ್ ಪೂರ್ಣಗೊಳಿಸುವ ಗುರಿ ನಮ್ಮದು. ಈ ಯೋಜನೆಯನ್ನು ಸಾಕಾರಗೊಳಿಸಲು ಸಾಕಷ್ಟು ಹಣ ವೆಚ್ಚವಾಗುವ ಅರಿವಿದೆ. ಆದರೆ ಕನ್ನಡದ ಕೆಲಸಕ್ಕೆ ಹಣದ ಕೊರತೆ ಇಲ್ಲ. ಎಷ್ಟೇ ಹಣ ವೆಚ್ಚವಾದರೂ ಅದನ್ನು ಭರಿಸಲು ಸರ್ಕಾರ ಸಿದ್ಧವಿದೆ. ಇದಕ್ಕೆ ಅಗತ್ಯ ಹಣಕಾಸನ್ನು ಒದಗಿಸಲಾಗುವುದು ಎಂದು ಹೇಳಿದರು.

ನಾಡು ಮತ್ತು ನುಡಿಯ ಅಭ್ಯುದಯಕ್ಕೆ ನಮ್ಮ ಸರ್ಕಾರ ಪೂರ್ಣ ಬದ್ಧವಾಗಿದೆ. ನಾಡಿನ ನೆಲ-ಜಲ, ಭಾಷೆ-ಸಂಸ್ಕೃತಿ ಸಂರಕ್ಷಣೆ ನಮ್ಮ ಸರ್ಕಾರದ ಅತ್ಯಾದ್ಯತೆಯಾಗಿದೆ. ಸಮಗ್ರ ಕರ್ನಾಟಕದ ಸಮಾನ ಬೆಳವಣಗೆ ನಮ್ಮ ಗುರಿಯಾಗಿದೆ. ನಾಡವರ ಹಾರೈಕೆ ಮತ್ತು ಸಹಕಾರದಿಂದ ಆ ಗುರಿಯನ್ನು ನಿಶ್ಚಯವಾಗಿ ತಲುಪುತ್ತೇವೆ ಎಂದು ಈ ಐತಿಹಾಸಿಕ ಸಂದರ್ಭದಲ್ಲಿ ಘೋಷಿಸಿ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಲೆಂದು ಹಾರೈಸಿದರು.

ಮುಖಪುಟ /ಸುದ್ದಿ ಸಮಾಚಾರ