ಮುಖಪುಟ /ಸುದ್ದಿ ಸಮಾಚಾರ  

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಮೂಲಕ ಜನತೆಗೆ ನೆಮ್ಮದಿ- ಸಿ.ಎಂ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನಬೆಂಗಳೂರು, ಮಾ.೧೧: ನಾಡಿನ ರೈತನ ಬದುಕು ಸುಧಾರಿಸಬೇಕು. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಮೂಲಕ ಜನತೆಗೆ ನೆಮ್ಮದಿ ದೊರೆತು ನಗರಗಳಿಗೆ ವಲಸೆ ಹೋಗುವುದು ತಪ್ಪಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಬೆಳಗಾವಿಯಲ್ಲಿಂದು ನಡೆಯುತ್ತಿರುವ ವಿಶ್ವಕನ್ನಡ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,. ಸಾಮಾಜಿಕ ನ್ಯಾಯದೊಂದಿಗೆ ಶೋಷಿತರ ಆತ್ಮವಿಶ್ವಾಸ ಹೆಚ್ಚಬೇಕು. ಅಲ್ಪ ಸಂಖ್ಯಾತರು ಮತ್ತು ಮಹಿಳೆಯರು ಭದ್ರತೆಯ ಭಾವದೊಂದಿಗೆ ನಿರುಮ್ಮಳವಾಗಿ ಬದುಕು ನಡೆಸಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಮಾನ ವಿಕಾಸವಾಗಬೇಕು. ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿ, ಕೃಷಿ ಹಾಗೂ ಕೈಗಾರಿಕೆ ಮತ್ತು ವಾಣಜ್ಯಾಭಿವೃದ್ಧಿ ಪ್ರಕ್ರಿಯೆ ಕ್ಷಿಪ್ರಗೊಳ್ಳಬೇಕು. ನೈಸರ್ಗಿಕ ಮತ್ತು ಮಾನವ ಸಂಪನ್ಮೂಲದ ಬೆಳವಣಗೆ ಹಾಗೂ ಸದ್ಬಳಕೆ ಸಾಧ್ಯವಾಗಬೇಕು. ಸಂಪನ್ಮೂಲಗಳ ವಿವೇಚನಾಯುತ ಬಳಕೆಯೊಂದಿಗೆ ಭವಿಷ್ಯದ ಪೀಳಿಗೆಗಳಿಗೆ ಅರಣ್ಯ, ಖನಿಜ ಮತ್ತು ಜಲಸಂಪನ್ಮೂಲಗಳು ಉಳಿಯುವಂತೆ ನೋಡಿಕೊಳ್ಳಬೇಕು. ಶಾಂತಿ-ಸುವ್ಯವಸ್ಥೆ ನೆಲೆಗೊಂಡು ನಾಡು ಅಭಿವೃದ್ಧಿ ಪಥದಲ್ಲಿ ಸರಾಗವಾಗಿ ಸಾಗಬೇಕು. ಇವು ನಮ್ಮ ಪ್ರಧಾನ ಆಶಯಗಳು. ಈ ಆಶಯಗಳ ಸಾಕಾರಕ್ಕೆ ಅನುಗುಣವಾದ ಕಾರ್ಯನೀತಿ ಮತ್ತು ಯೋಜನೆಗಳನ್ನು ರೂಪಿಸಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಿಚ್ಚಿಸುತ್ತೇನೆ ಎಂದರು.

ಕರ್ನಾಟಕ ಏಕೀಕರಣಕ್ಕಾಗಿ ಆಜೀವ ಹೋರಾಡಿದ ಅನೇಕಾನೇಕ ಮಹನೀಯರನ್ನು ನೆನಪಿಸಿಕೊಂಡು, ಅವರಿಗೆ ಹೃತ್ಪೂರ್ವಕ ಗೌರವಾದರಗಳನ್ನು ಸಲ್ಲಿಸುವುದು ನನ್ನ ಕರ್ತವ್ಯ. ಅವರ ಶ್ರಮದ ಫಲವಾಗಿಯೇ ನಾವು ಇಂದು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಏರ್ಪಡಿಸಲು ಸಾಧ್ಯವಾಗಿದೆ ಎಂಬುದನ್ನು ಮರೆಯಲಾಗದು. 

ಕನ್ನಡದ, ಕನ್ನಡ ನಾಡಿನ ಮತ್ತು ಕನ್ನಡಿಗರ ಹಿತ ಕಾಪಾಡುವುದು ನನ್ನ ಆಜೀವ ಧ್ಯೇಯ. ನಾಡಿನ ಭವಿಷ್ಯ ಉತ್ತಮಗೊಳ್ಳಬೇಕೆಂಬ ಕನಸನ್ನು ನನಸು ಮಾಡುವುದು ನನ್ನ ಜವಾಬ್ದಾರಿ. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಯಾವುದೇ ದಾಕ್ಷಿಣ್ಯಕ್ಕೆ ಬಲಿಯಾಗುವವನಲ್ಲ ನಾನು ಎಂಬುದನ್ನು ಈ ವೇದಿಕೆಯಿಂದ ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದರು.

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ, ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುವ ಸಂಕಲ್ಪ ನನ್ನದು. ಕನ್ನಡಕ್ಕೆ ದಕ್ಕಬೇಕಾದ ಅಂತಃಶಕ್ತಿ ಇನ್ನೂ ಹಲವು ಆಯಾಮದ್ದಾಗಿದೆ. ನಾವು ನಮ್ಮ ಪರಂಪರೆ - ಸಂಸ್ಕೃತಿಗಳ ಬಗ್ಗೆ ಹೆಮ್ಮೆ ಪಡುವುದು ಮಾತ್ರವಲ್ಲದೆ, ಕನ್ನಡ ಜನಪದವನ್ನು ಆಧುನಿಕ ಪ್ರಗತಿಯ ಜೊತೆ ಹೆಜ್ಜೆ ಹಾಕುವಂತೆ ಮಾಡಬೇಕಾಗಿದೆ. ನಮಗೆ ನಿನ್ನೆ ಎಷ್ಟು ಮುಖ್ಯವೋ ಇಂದೂ ಅಷ್ಟೇ ಮುಖ್ಯ- ನಾಳೆ ಇವೆರಡರ ಹಾಗೆಯೇ ಅತಿ ಮುಖ್ಯ. ಕನ್ನಡವನ್ನು ನಾಳೆಯ ರಾಜಕೀಯ-ಸಾಮಾಜಿಕ ಶಕ್ತಿಯಾಗಿಯೂ ರೂಪಿಸುವುದು ಬಹಳ ಮುಖ್ಯ ಎಂದು ಹೇಳಿದರು.

ಮುಖಪುಟ /ಸುದ್ದಿ ಸಮಾಚಾರ