ಮುಖಪುಟ /ಸುದ್ದಿ ಸಮಾಚಾರ  

ಅನ್ಯಪ್ರಭಾವದ ಬಿರುಗಾಳಿಗೆ ಕನ್ನಡ ದೀಪ ಆರದಂತೆ
ಸಂಕಲ್ಪ ಮಾಡಲು ಮುಖ್ಯಮಂತ್ರಿ ಕರೆ

Yadiyurappa, ವಿಶ್ವ ಕನ್ನಡ ಸಮ್ಮೇಳನ, ಬೆಳಗಾವಿಬೆಂಗಳೂರು, ಮಾ.೧೧: ಕನ್ನಡತ್ವದ ಗರಿಮೆ ಮತ್ತು ನಾಡಿನ ಹಿರಿಮೆ ಬಗ್ಗೆ ಕನ್ನಡ ಜನತೆ ವಿಸ್ಮತಿಗೆ ಒಳಗಾಗದಂತೆ ಕನ್ನಡದ ಎಚ್ಚರದ ದೀಪವನ್ನು ಬೆಳಗಿಸಿ ಅನ್ಯಪ್ರಭಾವದ ಬಿರುಗಾಳಿಗೆ ಆರದಂತೆ ಕಾಪಾಡುವ ಸಂಕಲ್ಪ ತೊಡುವುದರ ಜೊತೆಗೆ ಮುಂದಿನ ಹೆಜ್ಜೆಗಳನ್ನು ಕುರಿತ ಚಿಂತನೆಯು ನಮಗೆ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ.

ಬೆಳಗಾವಿಯಲ್ಲಿಂದು ನಡೆಯುತ್ತಿರುವ ವಿಶ್ವಕನ್ನಡ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಪ್ರಜ್ಞೆ ಒಂದು ಸಂಚಯಿತ ಅಂತಃಶಕ್ತಿಯಾಗಿ ಕನ್ನಡಿಗರಿಗೆ ಬೇಕಾದುದನ್ನು ಗಳಿಸಿಕೊಡುವ ಕಾಮಧೇನು ಆಗಬೇಕು. ಈ ಹಿನ್ನೆಲೆಯಲ್ಲಿ ಕನ್ನಡದ ಎಲ್ಲಾ ಮನಸ್ಸುಗಳು ಒಂದಾಗುವಂತೆ ಪ್ರೇರೆಪಿಸುವುದು ವಿಶ್ವಕನ್ನಡ ಸಮ್ಮೇಳನದ ಗುರಿಯಾಗಬೇಕು ಎಂದರು. 

ಮಣಿಯದಿಹ ಮನವೊಂದು, ಸಾಧಿಸುವ ಛಲವೊಂದು, ನಿಜದ ನೇರಕೆ ನಡೆವ ನಿಷ್ಠುರತೆಯೊಂದು ಕನ್ನಡಿಗರ ಸ್ವಭಾವದಲ್ಲೇ ಅಂತರ್ಗತವಾಗಿದೆ.

ಕನ್ನಡ ಪರಂಪರೆ ಮತ್ತು ಕನ್ನಡ ಸಂಸ್ಕೃತಿ ಯಾವತ್ತಿಗೂ ನಿಂತ ನೀರಲ್ಲ. ನಿರಂತರ ಪ್ರವಹಿಸುವ ಜೀವಧಾರೆ. ನಮ್ಮ ಪರಂಪರೆಯ ಹೆಗ್ಗುರುತುಗಳಾದ ಸಹನೆ, ಸಂಯಮ ಮತ್ತು ಸಮಾಧಾನಗಳನ್ನು ಕೈಬಿಡದೆ, ಸ್ವಾಭಿಮಾನದಿಂದ ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರೊಂದಿಗೂ ಬೆಳೆದು ಬದುಕುವ ಉದಾರ ಮತ್ತು ವಿಶಾಲ ಮನೋಧರ್ಮದೊಡನೆ ನಮ್ಮತನವನ್ನು ಕಾಯ್ದುಕೊಳ್ಳುವ ನಮ್ಮ ನಿರ್ಧಾರ ಅಚಲ. ಜೊತೆಗೆ ಸಹಜ ನ್ಯಾಯದಲ್ಲಿ ನಮಗೆ ಬರಬೇಕಾದುದನ್ನು ಪಡೆದುಕೊಳ್ಳುವ ನಿಷ್ಠುರತೆಯೂ ನಮ್ಮೊಳಗಿದೆ ಎಂಬುದನ್ನು ಸಾರಬೇಕಾಗಿದೆ ಎಂದರು.

ಕನ್ನಡ ಭಾಷಿಕರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ನಾಡು ದಾರಿ ತೋರಬೇಕು. ನಾಡಿನ ಜನರ ಬದುಕು ಹಸನಾಗಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತ ಸೂತ್ರಗಳನ್ನು ಹಿಡಿದಿದ್ದವರು ದೂರದೃಷ್ಟಿ, ವಿವೇಚನೆ ಮತ್ತು ಮುತ್ಸದ್ಧಿತನ ಪ್ರದರ್ಶಿಸಬೇಕು. ಆದರೆ ಇದು ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗದಿರುವ ಬಗ್ಗೆ ನಾನು ಪ್ರಸ್ತಾಪಿಸಿದರೆ, ಅದಕ್ಕೆ ಯಾರೂ ರಾಜಕೀಯ ಬಣ್ಣ ನೀಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಕನ್ನಡವೇ ಒಂದು ರಾಜಕೀಯ ಶಕ್ತಿ

ಜನತೆಯ ಪ್ರತಿಯೊಂದು ಆಶೋತ್ತರವೂ ರಾಜಕೀಯ ನಿರ್ಧಾರವಾಗಿಯೇ ಈಡೇರಬೇಕೆನ್ನುವುದು ನಾಗರಿಕತೆ ನಮಗೆ ಮನಗಾಣಿಸಿರುವ ಸತ್ಯ. ಕನ್ನಡವೆಂಬ ಜನತೆಯ ಪಾಲಿಗೂ ಇದು ಬೇರೆಯಲ್ಲ. ಒಕ್ಕೂಟ ವ್ಯವಸ್ಥೆಯನ್ನು ಮನಃಪೂರ್ವಕವಾಗಿಯೇ ಒಪ್ಪಿಕೊಳ್ಳುತ್ತ, ಒಂದು ರಾಜ್ಯವಾಗಿ ಸಕಲ ಸವಲತ್ತುಗಳನ್ನು ಪಡೆಯಬೇಕಾದರೆ, ಕನ್ನಡವೇ ಒಂದು ರಾಜಕೀಯ ಶಕ್ತಿ ಆಗಬೇಕಾಗಿದೆ. ರಾಜಕೀಯ ತತ್ವ ಸಿದ್ಧಾಂತಗಳನ್ನು ಮೀರಿ ಕನ್ನಡ- ಕನ್ನಡತನ ಒಂದೇ ಪಕ್ಷಾತೀತ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವ ಅಗತ್ಯವಿದೆ. ಕನ್ನಡವು ಒಂದು ರಾಜಕೀಯ ಸಂಕೇತವಾದ ಹೊರತು, ಒಂದು ರಾಜಕೀಯ ಶಕ್ತಿಯಾಗಿ ಬೆಳೆಯದ ಹೊರತು ಕನ್ನಡಿಗರಿಗೆ ನ್ಯಾಯ ಪೂರ್ಣವಾಗಿ ಲಭಿಸುವುದಿಲ್ಲ ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕಾಗಿದೆ. ಇದನ್ನು ಮನಗಾಣಲು, ಮನಗಾಣಿಸಲು ವಿಶ್ವ ಕನ್ನಡ ಸಮ್ಮೇಳನ ತಕ್ಕ ವೇದಿಕೆಯಾಗಲಿದೆ ಎಂದು ಪ್ರತಿಪಾದಿಸಿದರು.

ಕರ್ನಾಟಕದಲ್ಲಿ ಈಗ ಹೊಸ ಗಾಳಿ ಬೀಸುತ್ತಿದೆ. ಅಭಿವೃದ್ಧಿಯನ್ನೇ ಆಡಳಿತ ಮಂತ್ರವನ್ನಾಗಿ ಸ್ವೀಕರಿಸಿ ಅದರಂತೆ ಅನುಷ್ಠಾನನಿರತವಾಗಿರುವ ಸರ್ಕಾರ ಆಡಳಿತ ನಡೆಸುತ್ತಿದೆ. ಪ್ರತಿ ಕುಟುಂಬ, ಪ್ರತಿ ಸಮುದಾಯ, ಪ್ರತಿ ಪ್ರದೇಶ ತನ್ನ ಬದುಕಿನ ಅಂಗಳದಲ್ಲಿ ಅಭಿವೃದ್ಧಿಯ ದೀಪ ಬೆಳಗುತ್ತಿರುವುದನ್ನು ಸ್ವತಃ ಕಾಣುತ್ತಿದೆ.

ಕಳೆದ ಮೂರು ವರ್ಷಗಳಲ್ಲಿ ಆಗಿರುವ ಅಭಿವೃದ್ಧಿಯ ಪ್ರಮಾಣವನ್ನು ಯಾರೇ ಆಗಲಿ ಮುಕ್ತ ಮನಸ್ಸಿನಿಂದ ನೋಡಲಿ. ಎಲ್ಲೆಡೆ ನೆಮ್ಮದಿಯ ದೀಪ ಬೆಳಕು ನೀಡುತ್ತಿರುವುದನ್ನು ಕಾಣಬಹುದು. ಹಿಂದಿನ ಸರ್ಕಾರಗಳು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕೈಗೊಂಡ ಎಲ್ಲಾ ಕ್ರಮಗಳನ್ನು ಸಂದರ್ಭ-ಸಮಯೋಚಿತವಾಗಿ ಮುಂದುವರೆಸುತ್ತಾ, ಇದುವರೆಗೆ ರಾಜ್ಯದ ಯಾವ ಪ್ರದೇಶಗಳಿಗೆ ಹೆಚ್ಚಿನ ಗಮನವನ್ನು ನೀಡಲು ಸಾಧ್ಯವಾಗಲಿಲ್ಲವೋ ಅಂಥ ಪ್ರದೇಶಗಳಿಗೆ ಹೆಚ್ಚಿನ ಮೂಲ ಸೌಲಭ್ಯಗಳನ್ನು ಒದಗಿಸುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದರು.

ಮುಖಪುಟ /ಸುದ್ದಿ ಸಮಾಚಾರ