ಮುಖಪುಟ /ಸುದ್ದಿ ಸಮಾಚಾರ   
      

ಬೆಳಗಾವಿ ಕನ್ನಡ ನಾಡಿನ ಅವಿಭಾಜ್ಯ ಅಂಗ - ಮುಖ್ಯಮಂತ್ರಿ

ಮುಖ್ಯಮಂತ್ರಿ ಯಡಿಯೂರಪ್ಪ, ಬೆಳಗಾವಿ ಕನ್ನಡ ನಾಡಿನ ಅವಿಭಾಜ್ಯ ಅಂಗ - ಮುಖ್ಯಮಂತ್ರಿ ಬೆಂಗಳೂರು, ಮಾ.೧೧: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಈ ವಿಚಾರದಲ್ಲಿ ಯಾರಿಗೂ ಸಂಶಯ ಬೇಡ. ಪ್ರತಿ ವರ್ಷ ರಾಜಧಾನಿ ಬೆಂಗಳೂರಿನಿಂದ ಹೊರಗಡೆ ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಸುವುದರ ಜೊತೆಗೆ ಇದೀಗ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸುವ ಮೂಲಕ ಈ ಅಂಶವನ್ನು ಮತ್ತೆ ಮನದಟ್ಟು ಮಾಡಿಕೊಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಬೆಳಗಾವಿಯಲ್ಲಿಂದು ನಡೆಯುತ್ತಿರುವ ವಿಶ್ವಕನ್ನಡ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಸುವರ್ಣ ವಿಧಾನಸೌಧ ಸದ್ಯದಲ್ಲೇ ಪೂರ್ಣಗೊಳ್ಳಲಿದ್ದು ವಿಧಾನ ಮಂಡಲದ ವಾರ್ಷಿಕ ಅಧಿವೇಶನಕ್ಕೆ ಕಾಯಂ ಆಗಿ ಸಜ್ಜಾಗಲಿದೆ ಎಂದು ಹೇಳಿದರು. 

ಭಾಷಾ ಅಲ್ಪಸಂಖ್ಯಾತರೂ ಸೇರಿ ಕರ್ನಾಟಕ ಸಂಜಾತರು ಮತ್ತು ನಿವಾಸಿಗಳೆಲ್ಲರೂ ಕನ್ನಡಿಗರೇ ಆಗಿದ್ದಾರೆ. ಶಿಕ್ಷಣ, ಉದ್ಯೋಗ, ವಾಣಿಜ್ಯ ಮತ್ತಿತರ ಕಾರಣಗಳಿಗೆ ಹೊರನಾಡು ಮತ್ತು ವಿದೇಶಗಳಲ್ಲಿರುವ ಅನಿವಾಸಿ ಕನ್ನಡಿಗರೂ ಸೇರಿ ಸಮಸ್ತ ಕರ್ನಾಟಕವಾಸಿಗಳನ್ನು ಭಾವನಾತ್ಮಕವಾಗಿ ಬೆಸೆಯುವ ಮಹಾಯಜ್ಞ ಈ ವಿಶ್ವಕನ್ನಡ ಸಮ್ಮೇಳನ ಎಂದು ಅಭಿಪ್ರಾಯಪಟ್ಟರು.

ಜೊತೆಗೆ ಕನ್ನಡ ನಾಡು, ನುಡಿ ಮತ್ತು ಜನರ ಬದುಕಿನಲ್ಲಿ ಉಂಟಾಗಿರುವ ಬೆಳವಣಿಗೆಗಳನ್ನು ಹಾಗೂ ಬದಲಾವಣೆಗಳನ್ನು ಪುನರ್‌ಮನನ ಮಾಡಿಕೊಂಡು ಉಜ್ವಲ ಭವಿಷ್ಯದ ನೀಲಿ ನಕ್ಷೆ ರೂಪಿಸುವ ಮಹತ್ವದ ಪರಿಕಲ್ಪನೆಯು ಇದಾಗಿದೆ.

ಇತಿಹಾಸದ ಅರಿವು ಯಾರಿಗೆ ಇರುವುದಿಲ್ಲವೊ ಅವರ ಭವಿಷ್ಯ ಉಜ್ವಲವಾಗುವುದು ಅಸಾಧ್ಯ. ಆದ್ದರಿಂದ ನಿನ್ನೆಯ ಅರಿವಿನಲ್ಲಿ ಇಂದಿನ ಅನುಭವ ಮತ್ತು ನಾಳೆಯ ನಿರೀಕ್ಷೆಗಳನ್ನು ಪಕ್ವಗೊಳಿಸಿಕೊಂಡು ಮುಂದಡಿಯಿಡುವ ಸಂಕಲ್ಪ ತೊಡಲು ಈ ಸಮ್ಮೇಳನ ಕನ್ನಡಿಗರಿಗೆ ಸ್ಫೂರ್ತಿ ನೀಡಲೆಂಬುದು ನಮ್ಮ ಸರ್ಕಾರದ ಆಶಯ ಎಂದು ತಿಳಿಸಿದರು.

ಎರಡು ಸಾವಿರ ವರ್ಷಗಳ ಪ್ರಾಚೀನತೆ ಹೊಂದಿರುವ ಮತ್ತು ಶಾಸ್ತ್ರೀಯ ಭಾಷೆ ಗೌರವಕ್ಕೆ ಪಾತ್ರವಾಗಿರುವ ಕನ್ನಡದ ತೇಜಸ್ಸು ಮತ್ತು ಕನ್ನಡಿಗರ ಯಶಸ್ಸನ್ನು ಕಂಡು ಆನಂದಿಸಲು ವಿಶ್ವಕನ್ನಡ ಸಮ್ಮೇಳನಕ್ಕಿಂತ ಮಿಗಿಲಾದ ಸಂದರ್ಭವುಂಟೆ. ಜಗತ್ತಿನ ಮೂಲೆ-ಮೂಲೆಗಳಲ್ಲಿ ಕನ್ನಡಿಗರು ನೆಲೆಗೊಂಡಿದ್ದಾರೆ. ತಾವು ನಿಂತ ನೆಲಕ್ಕೆ ನಿಷ್ಠರಾಗಿ ಆ ನೆಲದ ಮತ್ತು ಸ್ವ-ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ. ವಿಶ್ವವೇ ನಮ್ಮ ಕುಟುಂಬ ಎಂಬ ವಿಶ್ವಮಾನವ ತತ್ವ ಹಾಗೂ ವಸುಧೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ. ಎಲ್ಲೆಡೆ ಚದುರಿಹೋಗಿರುವ ಕನ್ನಡಿಗರು ತಾಯ್ನೆಲಕ್ಕೆ ಬಂದು ನಾಡವರೊಂದಿಗೆ ಬೆರೆತು ನಾಲ್ಕು ದಿನ ಭೂತ, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಚಿಂತನ-ಮಂಥನ ನಡೆಸುವುದರ ಜೊತೆಗೆ ಸಂತಸವನ್ನು ಹಂಚಿಕೊಳ್ಳುವ ಈ ಸಂದರ್ಭ ಐತಿಹಾಸಿಕವಾದುದೆಂಬುದು ನನ್ನ ಭಾವನೆ ಎಂದು ತಿಳಿಸಿದರು.

ಸುಮಾರು ಕಾಲು ಶತಮಾನದ ನಂತರ ಎರಡನೆ ವಿಶ್ವಕನ್ನಡ ಸಮ್ಮೇಳನ ಜರುಗುತ್ತಿದೆ. ಏಕೀಕೃತ ಕರ್ನಾಟಕದ ಬೆಳ್ಳಿ ಹಬ್ಬದ ಹಿನ್ನೆಲೆಯಲ್ಲಿ ಮೊದಲನೆ ವಿಶ್ವಕನ್ನಡ ಸಮ್ಮೇಳನ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಜರುಗಿತ್ತು. ಕುಂದಾನಾಡು ಮತ್ತು ಸಕ್ಕರೆ ಬೀಡು ಬೆಳಗಾವಿಯಲ್ಲಿ ಎರಡನೇ ವಿಶ್ವ ಕನ್ನಡ ಸಮ್ಮೇಳನ ಜರುಗಿರುವುದು ಸಂತಸದಾಯಕ. ಈ ಐತಿಹಾಸಿಕ ಸಂದರ್ಭವನ್ನು ಚಿರಸ್ಮರಣೀಯಗೊಳಿಸುವ ಸಂಕಲ್ಪವನ್ನು ನಾವೆಲ್ಲರೂ ತೊಡಬೇಕಾಗಿದೆ ಎಂದು ಹೇಳಿದರು.

ಪ್ರಧಾನ ಪಾತ್ರ ವಹಿಸಿದೆ

ಕರ್ನಾಟಕವು ಭಾರತ ಜನನಿಯ ತನುಜಾತೆಯಾಗಿ ರಾಷ್ಟ್ರೀಯ ಮುಖ್ಯ ವಾಹಿನಿಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದೆ. ಭಾರತೀಯ ಸಂಸ್ಕೃತಿಯ ನೆರಳಿನಲ್ಲಿ ಅರಳಿದರೂ ಕನ್ನಡ ಸಂಸ್ಕೃತಿಯ ಸಿರಿಸೊಬಗು, ಬೆಡಗು, ಸೊಗಡು ಎಲ್ಲವೂ ವಿಶಿಷ್ಠ. ಅದರಲ್ಲಿ ಸಹ್ಯಾದ್ರಿಯ ಗಾಂಭೀರ್ಯವಿದೆ, ಕಾವೇರಿ, ಕೃಷ್ಣೆ, ತುಂಗಭದ್ರೆಯರ ಜೀವಸ್ವರವಿದೆ. ಸಾವಿರಾರು ವರ್ಷಗಳಿಂದ ಬೆಳೆದು ಉಳಿದು ಬಂದಿರುವ ಕನ್ನಡ ಸಂಸ್ಕೃತಿಯ ಅಮೃತಧಾರೆ ಕನ್ನಡಿಗರೆಲ್ಲರ ಎದೆಯಲ್ಲಿ ಪ್ರವಹಿಸುತ್ತಿದೆ. ನಡೆದುಬಂದ ದಾರಿಯ ಕಡೆಗೆ ಕಣ್ಣು ಹೊರಳಿಸಿ ನೋಡಲು, ಕನ್ನಡ ಸಂಸ್ಕೃತಿಯ ಶ್ರೇಷ್ಠತೆಯನ್ನು ಮತ್ತೊಮ್ಮೆ ಮನನ ಮಾಡಿಕೊಳ್ಳಲು, ಅದರ ಬೆಳಕಿನಲ್ಲಿ ಮಿಂದು ಪುಳಕಿತರಾಗಲು ಇದು ಸುಸಂದರ್ಭವಾಗಿದೆ ಎಂದರು.

ಮುಖಪುಟ /ಸುದ್ದಿ ಸಮಾಚಾರ