ಮುಖಪುಟ /ಸುದ್ದಿ ಸಮಾಚಾರ   
      

ಕನ್ನಡ ಜಾಗೃತಿ, ಅಸ್ಮಿತೆ ಪ್ರತಿಷ್ಠಾಪನೆಯೇ
ವಿಶ್ವಕನ್ನಡ ಸಮ್ಮೇಳನದ ಆಶಯ - ಸಿಎಂ

ಕನ್ನಡ ಜಾಗೃತಿ, ಅಸ್ಮಿತೆ ಪ್ರತಿಷ್ಠಾಪನೆಯೇ ಬೆಂಗಳೂರು, ಮಾ.೧೧: ಕನ್ನಡತ್ವದ ಜಾಗೃತಿ ಮತ್ತು ಅಸ್ಮಿತೆಯನ್ನು ಪ್ರತಿಷ್ಠಾಪಿಸುವುದು ವಿಶ್ವಕನ್ನಡ ಸಮ್ಮೇಳನದ ಪ್ರಧಾನ ಆಶಯವಾಗಿದೆ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ.

ಬೆಳಗಾವಿಯಲ್ಲಿಂದು ನಡೆಯುತ್ತಿರುವ ವಿಶ್ವಕನ್ನಡ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡವೆಂದರೆ ಭಾಷೆಯಷ್ಟೇ ಅಲ್ಲ ನಮ್ಮೆಲ್ಲರ ಬದುಕೂ ಆಗಿದೆ.  ಗಂಡು ಮೆಟ್ಟಿದ ನೆಲ ಗಡಿನಾಡು ಬೆಳಗಾವಿಯಲ್ಲಿ ನಡೆದಿರುವ ಈ ಮಹಾ ಯಜ್ಞಕ್ಕೆ ಮತ್ತೊಂದು ಬದಿಯ ಗಡಿನಾಡು ಅವಿಭಾಜಿತ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ಸಂಜಾತ ಮಾಹಿತಿ ತಂತ್ರಜ್ಞ ಮತ್ತು ಉದ್ಯಮಿ ಎನ್.ಆರ್. ನಾರಾಯಣಮೂರ್ತಿಯವರು ನಾಂದಿ ಹಾಡಿರುವುದು ಅರ್ಥಪೂರ್ಣವಾಗಿದೆ ಎಂದರು.

ಕಿತ್ತೂರು ರಾಣಿ ಚೆನ್ನಮ್ಮನ ಪರಾಕ್ರಮ ಮತ್ತು ಸಂಗೊಳ್ಳಿ ರಾಯಣ್ಣನ ತ್ಯಾಗ ಭೂಮಿ, ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕದ ಏಕೀಕರಣದ ಕಹಳೆಯೂದಿದ ಕುಂದಾನಗರಿ ಬೆಳಗಾವಿಯಲ್ಲಿ ಈ ಮಹತ್ವದ ಸಮ್ಮೇಳನ ಆಯೋಜನೆಗೊಂಡಿರುವುದು ಸರ್ವರೀತಿಯಲ್ಲಿಯೂ ಸಮರ್ಥನೀಯವಾಗಿದೆ ಎಂದು ತಿಳಿಸಿದರು.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಸದಭಿಮಾನದ ಗೂಡು ಎಂಬ ಹಾಡು ಮೊದಲು ಮೊಳಗಿದ್ದು ಇದೇ ನೆಲದಲ್ಲಿ. ಚೆಲುವ ಕನ್ನಡ ನಾಡಿನ ಕನಸು ನನಸಾಗಿರುವ ಈ ಸಂದರ್ಭದಲ್ಲಿ ಮತ್ತೊಮ್ಮೆ ಕನ್ನಡದ ಮಕ್ಕಳೆಲ್ಲಾ ಸೇರಿ ನಾಡು ಮತ್ತು ನುಡಿ ಹಬ್ಬ ಆಚರಿಸುತ್ತಿರುವುದು ರೋಮಾಂಚನಕಾರಿ ಬೆಳವಣಿಗೆಯಾಗಿದೆ ಎಂದರು.

ಮುಖಪುಟ /ಸುದ್ದಿ ಸಮಾಚಾರ