ಮುಖಪುಟ /ಸುದ್ದಿ ಸಮಾಚಾರ   
      

ಬೆಳಗಾವಿಯಲ್ಲಿ ಕನ್ನಡದ ಶಕ್ತಿ ಪ್ರದರ್ಶನ

Belagam Viswakannada Sammelana, ವಿಶ್ವ ಕನ್ನಡ ಸಮ್ಮೇಳನ 2011, ಬೆಳಗಾವಿ, ಬೆಳಗಾಂಬೆಂಗಳೂರು, ಮಾ.೧೧: ಗಡಿನಾಡು ನಗರ ಬೆಳಗಾವಿಯಲ್ಲಿಂದು ಕನ್ನಡಾಂಬೆಗೆ ವಿಶ್ವದಾರತಿ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಈ ನಾಡಿನಲ್ಲಿ ಮಾತೃಭೂಮಿಯ ಭವ್ಯ ಪರಂಪರೆ ಅನಾವರಣಗೊಂಡಿತು.

ಕನ್ನಡ ಸ್ವಾಭಿಮಾನದ ವಿಷಯವನ್ನು  ಯಾವತ್ತೂ ಕೆಣಕುತ್ತಾ ಬಂದ ಕನ್ನಡದ ನೆಲ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನದ ಅಭೂತ ಪೂರ್ವ ಸಂಭ್ರಮದ ವಾತಾವರಣ ಮೂಡಿತು. ಈ ಸಂಭ್ರಮಕ್ಕೆ ಕನ್ನಡಿಗರ ಮೈಮನ ರೋಮಾಂಚನಗೊಂಡಿತು. ನಾಡಿನೆಲ್ಲೆಯಿಂದ, ದೇಶ ವಿದೇಶಗಳಿಂದ ಕನ್ನಡದ ಮನಸ್ಸುಗಳು ಬೆಳಗಾವಿಗೆ ಹರಿದುಬಂದವು.

ಇಂದು ಬೆಳಿಗ್ಗೆ ೧೦ ಗಂಟೆಯ ಸುಮಾರಿಗೆ ಪ್ರಾರಂಭವಾದ ಸುಮಾರು ೬ ಕಿಲೋಮೀಟರ್ ಉದ್ದದ ಭವ್ಯವಾದ ಮೆರವಣಿಗೆ, ಕನ್ನಡದ ಶಕ್ತಿಯನ್ನು ಪ್ರದರ್ಶಿಸಿತು.

ನಾದ ನೀನಾದೊಂದಿಗೆ ಕನ್ನಡಿಗರ ಜಾಗೃತ ಮನಸ್ಸನ್ನು ಬಡಿದೆಬ್ಬಿಸಿತು.  ಕನ್ನಡದೇವಿ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ  ಗೃಹ ಸಚಿವ ಆರ್. ಅಶೋಕ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿ ಉಮೇಶ ಕತ್ತಿ ಮೊದಲಾದವರು ಹಾಜರಿದ್ದರು.

ಬೆಳಗಾವಿಯಲ್ಲೂ ದಸರಾ ವೈಭವ

Belagam Viswakannada Sammelana, ವಿಶ್ವ ಕನ್ನಡ ಸಮ್ಮೇಳನ 2011, ಬೆಳಗಾವಿ, ಬೆಳಗಾಂ೧೯೨೫ರಲ್ಲಿ ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಅಧಿವೇಶನ ನಡೆಸಿದ ಬೆಳಗಾವಿಯ ಟಿಳಕವಾಡಿ ವೀರಸೌಧದಿಂದ ಮೆರವಣಿಗೆ ಆರಂಭವಾದದ್ದು ಒಂದು ವಿಶೇಷ.  ಮೆರವಣಿಗೆಯ ಆರಂಭದಲ್ಲಿ ಮೈಸೂರು ದಸರಾ ಖ್ಯಾತಿಯ ಬಲರಾಮ ಅಂಬಾರಿಯ ಮೇಲೆ  ಭುವನೇಶ್ವರಿ ದೇವಿ ಪ್ರತಿಮೆಯನ್ನು ಹೊತ್ತು ತನ್ನ ಸಹವರ್ತಿ ಆರು ಗಜಗಳು ಹಾಗೂ ಕುದುರೆಗಳೊಂದಿಗೆ  ಹೆಜ್ಜೆ ಹಾಕುತ್ತಿದ್ದಂತೆ ಕನ್ನಡದ ಜಯ ಘೋಷಣೆಗೆ ಕೊನೆಯಿರಲಿಲ್ಲ.

ಆನೆಗಳು ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಸಾಗಿದಾಗ, ಅವುಗಳ ಹಿಂದೆ ಸ್ತಬ್ಧ ಚಿತ್ರಗಳ ಸಾಲು ಸಾಲು ನೋಡಿದಾಗ ಬೆಳಗಾವಿಯಲ್ಲಿ ಮೈಸೂರು ದಸರಾ ವೈಭವವೇ ಮನೆ ಮಾಡಿತ್ತು. ರಾಜ್ಯದ ಸಾಂಸ್ಕೃತಿಕ ರಾಜಧಾನಿಗೆ ಆಗಮಿಸಿ ನಾಡ ಹಬ್ಬ ಕಾಣಲಾಗದ ಬೆಳಗಾವಿಯ ಮಂದಿ ವೈಭವದ ಮೆರವಣಿಗೆ ಕಂಡು ಧನ್ಯರಾದರು.

ನಾಡಿನ ವೈವಿದ್ಯಮಯವಾದ ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಮೆರವಣಿಗೆ ವಿಶೇಷ ಆಕರ್ಷಣೆಯಾಗಿದೆ. ಜನಪದ ಕಲೆಗಳಾದ ಸೋಮನ ಕುಣಿತ, ಕರಡಿ ಕುಣಿತ, ಕೀಲುಕುದರೆ, ಜಗ್ಗಲಗಿ ಮೇಳ, ಬೀರನ ಕುಣಿತಮೊದಲಾದ ಕಲಾ ವೈಭವದ ಮಧ್ಯ ಸಾಗುವ ರಾಜ್ಯದ ಬೇರ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ಸ್ತಬ್ಧ ಚಿತ್ರಗಳು ಆಯಾ ಜಿಲ್ಲೆಗಳ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊತ್ತು ಸಮ್ಮೆಳನದ ಮುಖ್ಯವೇದಿಕೆಯತ್ತ ಸಾಗಿದವು.

ಈ ಸಾಂಸ್ಕೃತಿಕ ಮೆರವಣಿಗೆಯನ್ನು ವೀಕ್ಷಿಸಲು ಯಾವುದೇ ಭಾಷಾ ಭೇದವಿಲ್ಲದೆ ಕನ್ನಡಿಗರೊಂದಿಗೆ ಬೆಳಗಾವಿಯ ಮರಾಠಿ ಬಾಂಧವರೂ ಸಕ್ರಿಯವಾಗಿ ಪಾಲ್ಗೊಂಡರು.

ಕನ್ನಡ ಸಾಂಸ್ಕೃತಿಕ ವೈವಿಧ್ಯತೆಯನ್ನು ತಮ್ಮ ಕ್ಯಾಮರಾಗಳಲ್ಲಿ ಸಂತೋಷದಿಂದ ಸೇರಿಹಿಡಿದರು. ಮಹಾರಾಷ್ಟ್ರದ  ಮುಂಬಯಿಯ ವಡಾಲ ಶಾಲಾ ಮಕ್ಕಳು ಮತ್ತು  ಸಂಘಟನೆ ಸಹಿತ ತಮ್ಮ ವಿಶಿಷ್ಟ ಕಲಾ ಪ್ರದರ್ಶನದೊಂದಿಗೆ ಭಾಗವಹಿಸಿರುವುದು ವಿಶೇಷವಾಗಿತ್ತು.

ಕನ್ನಡ ಸಂಘಟನೆಗಳು ಸಿದ್ಧಪಡಿಸಿದ ೯೦೦ ಅಡಿ ಉದ್ದದ ಕನ್ನಡ ಬಾವುಟದ ಪರದೆಯನ್ನು ಸ್ವಾಭಿಮಾನದಿಂದ ಹೊತ್ತುಸಾಗುತ್ತಿರುವುದು ಕನ್ನಡಿಗರಲ್ಲಿ ರೋಮಾಂಚನವನ್ನು ಉಂಟುಮಾಡಿದವು.

ಈ ಮಧ್ಯೆ ಮಕ್ಕಳಿಂದ ವಯೋವೃದ್ಧರವರಿಗೆ ಸಂಗೀತದ ಮೇಳದೊಂದಿಗೆ ಹಾಡು ಕುಣಿತದಲ್ಲಿ ಮೈಮರೆತಿದ್ದಾರೆ. ಮೆರವಣಿಗೆ ಬರೇ ಮೆರವಣಿಗೆಯಾಗದೆ ಕನ್ನಡ ಬದುಕಿನ ಅಗಮ್ಯ ಚೇತನವಾಗಿ ಹೊರ ಹೊಮ್ಮಿತು. 

ಮುಖಪುಟ /ಸುದ್ದಿ ಸಮಾಚಾರ