ಮುಖಪುಟ /ಸುದ್ದಿ ಸಮಾಚಾರ   
      

ಕರ್ನಾಟಕದಂಥ ರಾಜ್ಯ ಮತ್ತೊಂದಿಲ್ಲ-ಪಾಪು

Papuಬೆಳಗಾವಿ, ಮಾ. ೧೩-  ಭಾರತದಂಥ ದೇಶ ಜಗತ್ತಿನಲ್ಲಿ ಇನ್ನೊಂದಿಲ್ಲ, ಕರ್ನಾಟಕದಂಥ ರಾಜ್ಯ ಮತ್ತೊಂದು ಭಾರತದಲ್ಲಿಲ್ಲ ಎಂದು ಹಿರಿಯ ಪತ್ರಕರ್ತ ನಾಡೋಜ ಪಾಟೀಲ್ ಪುಟ್ಟಪ್ಪ ಹೇಳಿದರು.

ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ಕನ್ನಡಿಗರು ಒಟ್ಟಿಗೆ ಕಲೆತರೆ ಏನಾಗುತ್ತದೆ ಎಂಬುದಕ್ಕೆ ಈ ಸಭೆ ಸಾಕ್ಷಿ. ಬೆಳಗಾವಿಯಲ್ಲಿ ಮೂರು ದಿನ ಸಾಕ್ಷಾತ್ಕರಿಸಿದ ವಿರಾಟ್ ದರ್ಶನ ವಿರಾಟ್ ಜನತೆಯೇ ಸಾಕ್ಷಿ. ನಾವು ಸದಾ ಹೀಗೇ ಇರಬೇಕು ಹೇಳಿದರು.

ನಾವು ಕನ್ನಡಿಗರು ನಮ್ಮ ಇತಿಹಾಸ, ನಮ್ಮ ಸಂಸ್ಕೃತಿ, ಕಲೆ, ಸಾಹಿತ್ಯ ತಿಳಿಯಬೇಕು. ನಮ್ಮಲ್ಲಿ ಐತಿಹಾಸಿಕ ಪ್ರಜ್ಞೆ ಇಲ್ಲ. ಉಜ್ವಲ ಇತಿಹಾಸದ ವಾರಸುದಾರರು ನಾವು. ನಾವು ನಿನ್ನೆಯ ಮೇಲೆ ಬದುಕಲು ಆಗಲ್ಲ, ಇಂದಿನ ಮೇಲೆ ಬದುಕಬೇಕು, ನಾಳೆಯನ್ನು ನಮ್ಮದಾಗಿ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು. ಇದಕ್ಕಾಗಿ ಕರುನಾಡ ಇತಿಹಾಸ ಅರಿಯಲು ಅವರು ಕರೆ ನೀಡಿದರು.

ತಮಿಳು ಕನ್ನಡ ಬಿಟ್ಟರೆ ದೇಶದಲ್ಲಿ ಪುರಾತನ ಭಾಷೆಗಳಿಲ್ಲ. ಇಂಗ್ಲೆಂಡ್‌ನಲ್ಲಿ ಇಂಗ್ಲಿಷ್ ಇಲ್ಲದಿದ್ದಾಗ, ಕರ್ನಾಟಕದಲ್ಲಿ ಕನ್ನಡ ಇತ್ತು. ಜಗತ್ತಿನಲ್ಲಿ ೬ ಸಾವಿರ ಭಾಷೆಗಳಿವೆ. ಆದರೆ, ಜಗತ್ತಿನ ೧೫ -೨೦ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು ಹೇಳಿದರು.

ಇಂಗ್ಲಿಷ್ ಬೇಡ ಎಂದು ನಾನು ಹೇಳಲ್ಲ. ಆದರೆ, ಕನ್ನಡದ ಸೇವೆಗೆ ಇಂಗ್ಲಿಷ್ ಇರಬೇಕು, ಆದರೆ, ಕನ್ನಡವೇ ಇಂಗ್ಲಿಷ್ ಸೇವೆ ಮಾಡುವಂತಾಗಬಾರದು ಎಂದು ತಿಳಿಸಿದರು. ಕನ್ನಡಕ್ಕೆ ಬಹುದೊಡ್ಡ ವ್ಯಾಪ್ತಿ ಇದೆ. ಭಾರತದಲ್ಲಿ ಕರ್ನಾಟಕ ಒಂದು ದೊಡ್ಡ ಜನಪದ. ಹಿಂದೆ ಮಹಾರಾಷ್ಟ್ರ ಕರ್ನಾಟಕದ ಭಾಷೆ ಒಂದೇ ಆಗಿತ್ತು. ಅದು ಕನ್ನಡ ಆಗಿತ್ತು ಎಂದು ಲೋಕಮಾನ್ಯ ತಿಲಕರೇ ಹೇಳಿದ್ದಾರೆ ಎಂದರು.

ಕರ್ನಾಟಕ - ಮರಾಠಿ ಜನರ ವೇಷ ಭೂಷಣ, ಊಟೋಪಚಾರ, ನಾವು ಮೆಚ್ಚುವ ಸಂಗೀತ ಒಂದೆ, ನಮ್ಮ ಮತ್ತು ಮಹಾರಾಷ್ಟ್ರದ ಜೊತೆ ಸಂಬಂಧಗಳು ಹೆಚ್ಚು, ನಮ್ಮಲ್ಲಿ ಕೊಡುಕೊಳ್ಳುವಿಕೆ ಇದೆ. ಕನ್ನಡಿಗರು ಮತ್ತು ಮರಾಠಿಗಳು ಸೌಹಾರ್ದದಿಂದ ಇದ್ದಾರೆ. ಆದರೆ, ಕೆಲವರು ಇದಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಬೆಳಗಾವಿಯಲ್ಲಿರುವ ಯಾವುದೇ ಮರಾಠಿಗಳು ನಮ್ಮ ಶತ್ರುಗಳಲ್ಲ, ಅವರು ನಮ್ಮ ಬಂಧು ಬಾಂಧವರು ಎಂದು ತಿಳಿಸಿದರು.

ಎಳ್ಳೂರಿನವರು ಮಹಾರಾಷ್ಟ್ರ ಎಂದು ಬರೆದುಕೊಂಡರೆ ಅದು ಮಹಾರಾಷ್ಟ್ರ ಆಗಲ್ಲ. ತಿರುಕ ತನ್ನ ಮಗನಿಗೆ ಕುಬೇರ ಅಂತ ಹೆಸರಿಟ್ಟರೆ ಅವನು ಶ್ರೀಮಂತ ಆಗಲ್ಲ ಎಂದು ಹೇಳಿದರು. ಪಂಡರಾಪುರದ ವಿಠಲ ಕನ್ನಡವ. ಅವ ನಮ್ಮವನೇ. ಕನ್ನಡ ಬಾರದಿದ್ದರೆ ಜ್ಞಾನೇಶ್ವರಿ ತಿಳಿಯಲ್ಲ. ಮರಾಠಿಗಳು ಕನ್ನಡಿಗರೊಂದಿಗೆ ಕಲೆತು ಬಾಳ್ವೆ ನಡೆಸಬೇಕು ಎಂದು ಹೇಳಿದರು.

ಬ್ರಿಟಿಷರು  ಬೆಳಗಾವಿಯಲ್ಲಿ ಕನ್ನಡ ಶಾಲೆ ತೆರೆದಿದ್ದರು, ಇದು ಮರಾಠಿ ಪ್ರದೇಶ ಆಗಿದ್ದರೆ ಕನ್ನಡ ಶಾಲೆ ಏಕೆ ತೆರೆಯುತ್ತಿದ್ದರು ಎಂದು ಪ್ರಶ್ನಿಸಿದ ಅವರು, ಮಹಾರಾಷ್ಟ್ರದಲ್ಲಿರುವ ಹಲವು ಊರುಗಳ ಹೆಸರು ಕನ್ನಡದ ಹೆಸರುಗಳಾಗಿವೆ ಎಂದು ದೊಡ್ಡ ಪಟ್ಟಿಯನ್ನೇ ನೀಡಿದರು. ೧೮೧೮ರಲ್ಲಿ ಬ್ರಿಟಿಷ್ ಗೌರ್ನರ್‌ಗೆ ಮುಂಬೈನಲ್ಲಿ ಕೊಟ್ಟ ಮಾನ ಪತ್ರ ಕನ್ನಡದಲ್ಲಿತ್ತು ಎಂದೂ ಉಲ್ಲೇಖಿಸಿದರು.

ಕರ್ನಾಟಕದ ವ್ಯಾಪ್ತಿ ಮಿಥಿಲಾ, ನೇಪಾಳದವರೆಗೂ ಹಬ್ಬಿದೆ. ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ಕೋಟಾದವರೇ ಪೂಜೆ ಮಾಡಬೇಕು ಎಂದು ಒಪ್ಪಂದವೇ ಆಗಿತ್ತು ಎಂದು ಇತಿಹಾಸ ಮೆಲಕು ಹಾಕಿದರು. ಕನ್ನಡಿಗರು ಒಟ್ಟು ಗೂಡಿ ನಿಂತರೆ ಅಸಾಮಾನ್ಯವಾದುದನ್ನು ಸಾಧಿಸಬಹುದು ಎಂದು ಹೇಳಿದರು.

 

ಮುಖಪುಟ /ಸುದ್ದಿ ಸಮಾಚಾರ