ಮುಖಪುಟ /ಸುದ್ದಿ ಸಮಾಚಾರ   
      

೫ ವರ್ಷಕ್ಕೊಮ್ಮೆ ವಿಶ್ವಕನ್ನಡ ಸಮ್ಮೇಳನ-ಸಿ.ಎಂ.

B.S. Yadiyurappaಬೆಳಗಾವಿ, ಮಾ. ೧೩ - ಇನ್ನು ಮುಂದೆ ಪ್ರತಿ ಐದು ವರ್ಷಗಳಿಗೊಮ್ಮೆ ವಿಶ್ವ ಕನ್ನಡ ಸಮ್ಮೇಳನ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಧಾನಮಂಡಳದ ಸುವರ್ಣ ಕರ್ನಾಟಕ ಸಂಪುಟಗಳ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ನೀವೇ ಅಧಿಕಾರಿಗಳು, ನೀವು ಕರತಾಡನದ ಮೂಲಕ ಒಪ್ಪಿಗೆ ಕೊಟ್ಟರೆ ಇನ್ನು ಮುಂದೆ ಐದು ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಲಾಗುವುದು ಎಂದಾಗ ಜನರ ಚಪ್ಪಾಳೆಯ ಶಬ್ದ ಮುಗಿಲು ಮುಟ್ಟಿತು.

ನಂತರ ಮಾತು ಮುಂದುವರಿಸಿದ ಮುಖ್ಯಮಂತ್ರಿ ಮುಂದಿನ ಸಮ್ಮೇಳನ ಎಲ್ಲಿ ನಡೆಸಬೇಕು ಎಂಬ ಬಗ್ಗೆ ಆ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಹಳೆಯ ಕಹಿ ಮರೆತು ಹೊಸ ಕನ್ನಡ ನಾಡು ಕಟ್ಟುವ ಕೆಲಸ ಮಾಡೋಣ ಎಂದರು.

ಉದಯವಾಗಲಿ ನಮ್ಮ ಕನ್ನಡನಾಡು ಗೀತೆ ಮೊದಲು ಮೊಳಗಿದ್ದು ಬೆಳಗಾವಿಯಲ್ಲಿ, ಈಗ ಮತ್ತೆ ಮೂರು ದಿನಗಳಿಂದ ಅದ್ದೂರಿಯಾಗಿ ಕನ್ನಡಾಭಿಮಾನ ಮೂಡಿಸುವ ಕಾರ್ಯಕ್ರಮ ಜರುಗಿದೆ ಎಂದರು.

ಕನ್ನಡದ ತೇರನ್ನು ಎಳೆದ ಲಕ್ಷಾಂತರ ಕನ್ನಡ ಮನಸ್ಸುಗಳಿಗೆ ಅವರು ಕೃತಜ್ಞತೆ ಅರ್ಪಿಸಿದರು. ಸಾಲು ಮರದ ತಿಮ್ಮಕ್ಕ ಅವರ ಕೋರಿಕೆಯಂತೆ ಅವರ ಊರಿಗೆ ಹೆರಿಗೆ ಆಸ್ಪತ್ರೆ ಮಂಜೂರು ಮಾಡುವುದಾಗಿ ಹೇಳಿದ ಅವರು, ಹಂಪನಾ ಅವರ ಸಲಹೆಯಂತೆ ಬೆಳಗಾವ್ ಅನ್ನು ಬೆಳಗಾವಿ ಎಂದೇ ಮಾಡುವ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ವಿಧಾನಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಅನ್ಯ ಭಾಷೆಯ ಪ್ರಭಾವದಿಂದ ಕನ್ನಡದ ಮೇಲೆ ಪ್ರತೀಕೂಲ ಪ್ರಭಾವ ಬೀರುತ್ತದೆ ಎಂಬ ಆತಂಕ ಇದೆ. ಆದರೆ, ಕನ್ನಡತನ ಶಾಶ್ವತ ಎಂದು ಹೇಳಿದರು. ಹೊರ ನಾಡಿಗೆ ಹೋದವರಲ್ಲಿ ಕನ್ನಡದ ತುಡಿತ ಇರುತ್ತದೆ. ನಾವು ಕನ್ನಡತನ, ಕನ್ನಡ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ನಾವು ಕೇವಲ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಇದೆ ಎಂದು ಗರ್ವಪಟ್ಟರೆ ಸಾಲದು, ಕನ್ನಡ ನಮ್ಮ ಉಸಿರಾಗಬೇಕು, ಕನ್ನಡತನ ನಮ್ಮಲ್ಲಿ ಆವಿರ್ಭವಿಸಬೇಕು ಎಂದು ಕರೆ ನೀಡಿದರು.

ಸಚಿವ ಗೋವಿಂದ ಕಾರಜೋಳ ಮಾತನಾಡಿ, ೨೧ನೇ ಶತಮಾನ ಭಾರತದ ಶತಮಾನ ಎಂದು ಹೇಳಲಾಗುತ್ತಿದೆ. ಕರ್ನಾಟಕ ರಾಷ್ಟ್ರದಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಸ್ಥಾನ ಪಡೆಯಬೇಕು ಎಂದು ಆಶಿಸಿದರು. ಪ್ರತಿ ಐದು ವರ್ಷಗಳಿಗೊಮ್ಮೆ ವಿಶ್ವ ಕನ್ನಡ ಸಮ್ಮೇಳನ ನಡೆಸುವಂತೆ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಸುಮಾರು ೨೦ ಲಕ್ಷಕ್ಕೂ ಹೆಚ್ಚು ಜನರು ಈ ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದೀರಿ. ಇದಕ್ಕೆ ನಾವು ಆಭಾರಿ ಎಂದರು.

ಮುಖಪುಟ /ಸುದ್ದಿ ಸಮಾಚಾರ