ಮುಖಪುಟ /ಸುದ್ದಿ ಸಮಾಚಾರ   
      

ವಿಶ್ವಕನ್ನಡ ಸಮ್ಮೇಳನಕ್ಕೆ ಕ್ಷಣಗಣನೆ

Viswakannada sammelana siddateಬೆಂಗಳೂರು, ಮಾ.೧೦: ೨೫ ವರ್ಷಗಳ ಬಳಿಕ ನಡೆಯುತ್ತಿರುವ ೨ನೇ ವಿಶ್ವಕನ್ನಡ ಸಮ್ಮೇಳನಕ್ಕೆ ಗಡಿ ನಗರ ಬೆಳಗಾವಿ ಸಜ್ಜಾಗಿದೆ. ಕನ್ನಡ - ಕರ್ನಾಟಕ ಉತ್ಸವಕ್ಕೆ ವೇದಿಕೆ ಸಿದ್ಧವಾಗಿದ್ದು, ಅಮೃತಘಳಿಗೆಗೆ ಕ್ಷಣಗಣನೆ ಆರಂಭವಾಗಿದೆ.

ಬೆಳಗಾವಿ ನಗರ ನವವಧುವಿನಂತೆ ಸಿಂಗಾರಗೊಂಡಿದ್ದು, ಎಲ್ಲೇಲ್ಲೂ ಕನ್ನಡದ ಕಂಪು ಹೊರಹೊಮ್ಮಿದೆ. ಕನ್ನಡ ಬಾವುಟಗಳು, ಕಿತ್ತೂರು ರಾಣಿ ಚೆನ್ನಮ್ಮ, ಕನ್ನಡದ ಕವಿವರೇಣ್ಯರ ಕಟೌಟ್, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಸಮಾವೇಶದ ಪ್ರಮುಖ ವೇದಿಕೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

೧೨೦ಅಡಿ ಉದ್ದ, ೬೦ ಅಡಿ ಅಗಲದ ಕನ್ನಡ ನಾಡಿನ ಇತಿಹಾಸ, ಶಿಲ್ಪ ಕಲೆ ಪ್ರತಿಬಿಂಬಿಸುವ ಪ್ರಮುಖ ವೇದಿಕೆಗೆ ಕಲಾವಿದರು, ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಇಡೀ ಆವರಣ ನೋಡುಗರನ್ನು ಚಿತ್ತಾಕರ್ಷಗೊಳಿಸುತ್ತಿದೆ.

ಕನ್ನಡದ ಹಬ್ಬಕ್ಕೆ ರಾಜ್ಯ ಹಾಗೂ ದೇಶವಿದೇಶಗಳಿಂದ ಬರುವ ಕನ್ನಡಿಗರು ಕುಳಿತುಕೊಳ್ಳಲು ೫೦ ಸಾವಿರ ಕುರ್ಚಿಗಳನ್ನು ಹಾಕಲಾಗಿದ್ದು ಶಾಮಿಯಾನ ನಯನ ಮನೋಹರವಾಗಿದೆ. ವೇದಿಕೆ ಹಿಂಬದಿ ಕನ್ನಡ ಹಿರಿಮೆ ಸಾರುವ ರಾಜ್ಯ ಲಾಂಛನಗಳು, ರಾಷ್ಟ್ರಕೂಟ, ವಿಜಯನಗರ, ಹೊಯ್ಸಳ ಶೈಲಿಯ ವಾಸ್ತುಶಿಲ್ಪಗಳು ಕಂಗಗೊಳಿಸುತ್ತಿವೆ. ವೇದಿಕೆ ಎರಡು ಬದಿಗಳಲ್ಲಿ ಗಜಪಡೆಗಳ ಸಾಲು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದೆ.

ಸ್ವಾತಂತ್ರ್ಯ ಹೋರಾಟಗಾರರಾದ ವೀರ ರಾಣಿ ಚೆನ್ನಮ್ಮ, ಸಂಗೊಳ್ಳಿರಾಯಣ್ಣ ಅವರುಗಳ ಸುಂದರ ಪ್ರತಿಮೆಗಳು ಕನ್ನಡಿಗರ ಮನಸೆಳೆಯಲು ಎದ್ದು ನಿಂತಿವೆ.

ಇನ್ನು.... ರಿಯಾಯಿತಿ ದರದ ಕನ್ನಡ ಪುಸ್ತಕಗಳ ಮಾರಾಟ ಮಳಿಗೆ ಓದುಗ- ಪ್ರಿಯರನ್ನು ಆಕರ್ಷಿಸಲಿದೆ. ಪಂಪರಿಂದ ಹಿಡಿದು ಇಂದಿನ ಸಾಹಿತಿಗಳವರೆಗಿನ ಎಲ್ಲ ಪುಸ್ತಕಗಳು ಲಭ್ಯ ಅದು ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳಿಗೆ ಶೇ.೩೩ರμ ರಿಯಾಯಿತಿಯಂತೆ.

ಸಮ್ಮೇಳನಕ್ಕೆ ಆಗಮಿಸುವ ಕನ್ನಡಿಗರಿಗೆ ಭರ್ಜರಿ ಭೋಜನ ಏರ್ಪಡಿಸಲಾಗಿದೆ. ಪ್ರತಿನಿತ್ಯ ೧.೫೦ ಲಕ್ಷ ಮಂದಿಗೆ ಊಟ, ತಿಂಡಿ ತಯಾರಿಸಲು ವ್ಯವಸ್ಥಿತವಾಗಿ ಬಡಿಸಲು ನಗರದ ೭ ಕಡೆ ವ್ಯವಸ್ಥೆ ಮಾಡಲಾಗಿದೆ. ವಿಶೇವಾಗಿ ಅತಿಥಿಗಳ ಹಸಿವು ನೀಗಿಸಲು ಬಿಜಾಪುರದಿಂದ ೩ ಲಕ್ಷ ಜೋಳದ ರೊಟ್ಟಿಗಳು ಸಮಾವೇಶದ ಅಡುಗೆ ಮನೆ ತಲುಪಿವೆ.

ಇನ್ನು ಸದಾ ಒಂದಿಲ್ಲೊಂದು ಹೋರಾಟ, ಪ್ರತಿಭಟನೆಗೆ ಹೆಸರುವಾಸಿಯಾಗಿರುವ ಕುಂದಾನಗರಿ ಅತಿಥಿಗಳನ್ನು ಸ್ವಾಗತಿಸಲು ಸಿಂಗಾರಗೊಂಡಿದೆ. ನಗರದ ಪ್ರಮುಖ ದ್ವಾರ, ಮುಖ್ಯ ರಸ್ತೆ ಮತ್ತಿತರ ಕಡೆ ಬಣ್ಣ ಬಣ್ಣದ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ನಗರಾದ್ಯಂತ ನಾಡು- ನುಡಿಗೆ ಸೇವೆ ಸಲ್ಲಿಸಿದ ಸಾಹಿತಿಗಳು, ಹೋರಾಟಗಾರರ ಚಿತ್ರಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಏಕೋ ಏನೋ ಯಾವುದೇ ರಾಜಕಾರಣಿಗಳ ಮುಖಗಳಿರುವ ಫ್ಲೆಕ್ಸ್‌ಗಳು ಕಾಣುತ್ತಿಲ್ಲ...!

Balarama ಮೈಸೂರು ದಸರದಲ್ಲಿ ದೇವಿ ಚಾಮುಂಡೇಶ್ವರಿಯನ್ನು ಹೊತ್ತೊಯ್ಯುವ ಬಲರಾಮ ನೇತೃತ್ವದ ಗಜಪಡೆ ಇಲ್ಲಿಗೆ ಆಗಮಿಸಿದ್ದು, ಮಾವುತರು ಅವುಗಳಿಗೆ ತರಬೇತಿ ನೀಡುವಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿಪುಂಗವರ ಕ್ರೀಡಾ ದಿಗ್ಗಜರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್ ಅವರ ಚಿತ್ತಾಕರ್ಷಕ ಪ್ರತಿಕೃತಿಗಳು ಗಮನ ಸೆಳೆಯುತ್ತವೆ. ವರನಟ ಡಾ. ರಾಜ್‌ಕುಮಾರ್ ಅವರ ಸುಂದರವಾದ ಚಿತ್ರಗಳು ನಗರಾದ್ಯಂತ ಅಭಿಮಾನಿಗಳ ಗಮನ ಸೆಳೆಯುತ್ತವೆ.

ಮೂರು ದಿನಗಳ ಸಂಭ್ರಮವನ್ನು ಅಕ್ಷರಗಳಲ್ಲಿ ಹಾಗೂ ಕ್ಯಾಮರಾಗಳಲ್ಲಿ ಸೆರೆ ಹಿಡಿದು ದೇಶವಿದೇಶಗಳ ಕನ್ನಡಿಗರಿಗೆ ತಲುಪಿಸಲು ಮಾಧ್ಯಮ ಕೇಂದ್ರ ಸಕಲ ಸಜ್ಜುಗೊಂಡಿದೆ. ಅತ್ಯಾಧುನಿಕ ಕಂಪ್ಯೂಟರ್, ಬ್ರಾಡ್‌ಬ್ಯಾಂಡ್, ಅಪ್‌ಲಿಂಕ್ ಸೇರಿದಂತೆ ಬಹಳಷ್ಟು ವ್ಯವಸ್ಥೆ ಮಾಡಲಾಗಿದೆ.

 ಮುಖಪುಟ /ಸುದ್ದಿ ಸಮಾಚಾರ