ಮುಖಪುಟ /ಸುದ್ದಿ ಸಮಾಚಾರ   
      

ಹುರುಳಿಲ್ಲದ ಆರೋಪ -ಸಿ.ಎಂ.

C.M. B.S. Yadiyurappaಬೆಂಗಳೂರು, ಮಾ. ೧೦ - ಅಕ್ರಮ ಗಣಿಗಾರಿಕೆಗೆ ಅನುವು ಮಾಡಿಕೊಡಲು ತಾವು ಯಾರಿಂದಲೂ ಕಪ್ಪ ಪಡೆದಿಲ್ಲ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದೆಹಲಿಯಲ್ಲಿ ನಿನ್ನೆ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ವರಿಷ್ಠರ ಆದೇಶದ ಮೇರೆಗೆ ದೆಹಲಿಗೆ ಆಗಮಿಸಿದ ಮುಖ್ಯಮಂತ್ರಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಪದೇ ಪದೇ ತಮ್ಮ ಮೇಲೆ ಮಿಥ್ಯಾರೋಪ ಮಾಡಿ, ಅಭಿವೃದ್ಧಿಗೆ ತೊಡಕುಂಟು ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಜೆಡಿಎಸ್ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.  ತಾವು ಯಾವುದೇ ತಪ್ಪು ಮಾಡಿಲ್ಲ. ತಾವು ತಮ್ಮ ಕಚೇರಿಯನ್ನಾಗಲೀ, ಆಡಳಿತ, ಅಧಿಕಾರವನ್ನಾಗಲೀ ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ತಮ್ಮ ಪುತ್ರರ ಪ್ರೇರಣಾ ಶಿಕ್ಷಣ ಟ್ರಸ್ಟ್ ಕಾನೂನಿನ ಚೌಕಟ್ಟಿನಲ್ಲಿ ದೇಣಿಗೆ ಪಡೆದಿದೆ. ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಯಾವುದೇ ಶಿಕ್ಷಣ ಸಂಸ್ಥೆಗೆ ದೇಣಿಗೆ ಸ್ವೀಕರಿಸಲು ಕಾನೂನಿನ ರೀತ್ಯ ಅವಕಾಶವಿದೆ ಎಂದು ಹೇಳಿದರು.

ಅಪ್ಪ ಮಕ್ಕಳು ತಮ್ಮ ಮೇಲೆ ಕಳೆದ ಎರಡು ವರ್ಷಗಳಿಂದಲೂ ಆರೋಪ ಮಾಡುತ್ತಲೇ ಇದ್ದು, ಇದರಲ್ಲಿ ಎಷ್ಟು ಸತ್ಯ ಇದೆ ಎಂಬುದು ನಾಡಿನ ಜನತೆಗೆ ತಿಳಿದಿದೆ ಈ ಬಗ್ಗೆ ತಾವು ಹೆಚ್ಚೇನೂ ಹೇಳುವ ಅಗತ್ಯವಿಲ್ಲ ಎಂದರು.

ಕರ್ನಾಟಕ ಭವನಕ್ಕೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ  ಮೊದಲಿಗೆ ಬಿಜೆಪಿ ಸಂಸತ್ ಸದಸ್ಯರ ಜೊತೆಗೆ ಸಮಾಲೋಚನೆ ನಡೆಸಿದರು.

ನಂತರ  ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ ಮುಖ್ಯಮಂತ್ರಿ, ತಾವು ಅಮಾಯಕರು, ತಮ್ಮ ಮೇಲೆ ಮಾಡಿರುವ ೨೭ ಕೋಟಿ ರೂಪಾಯಿ ಲಂಚ ಆರೋಪ ದುರುದ್ದೇಶಪೂರ್ವಕ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು. ಮಧ್ಯಾಹ್ನದ ವೇಳೆಗೆ ಪಕ್ಷದ ವರಿಷ್ಠರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಅವರ ಮನವೊಲಿಕೆಯ ಪ್ರಯತ್ನ ಮಾಡಿದರು.

ಕುಮಾರಸ್ವಾಮಿ ತಮ್ಮ ವಿರುದ್ಧ ಆರೋಪ ಮಾಡುತ್ತಿರುವುದು ಇದು ಹೊಸದೇನೂ ಅಲ್ಲ, ಅವರ ಪಕ್ಷದ ಶಾಸಕರು ಅಲ್ಲಿನ ಉಸಿರುಕಟ್ಟುವ ವಾತಾವರಣದಿಂದ ಬೇಸತ್ತು, ತಮ್ಮ ಪಕ್ಷ ಸೇರುತ್ತಿದ್ದಾರೆ. ಇದು ತಮ್ಮ ಮೇಲೆ ಕುಮಾರಸ್ವಾಮಿ ಆರೋಪ ಮಾಡಲು ಮುಖ್ಯ ಕಾರಣವಾಗಿದೆ ಎಂದು ಮುಖ್ಯಮಂತ್ರಿ ವರಿಷ್ಠರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

 

ಮುಖಪುಟ /ಸುದ್ದಿ ಸಮಾಚಾರ