ಮುಖಪುಟ /ಸುದ್ದಿ ಸಮಾಚಾರ 

ಭ್ರಷ್ಟಾಚಾರದಿಂದ ರಾಜ್ಯ ತಲೆತಗ್ಗಿಸುವಂತಾಗಿದೆ - ರಾಜ್ಯಪಾಲರು

ಎಚ್.ಆರ್ ಭಾರದ್ವಾಜ್ಬೆಂಗಳೂರು, ಜೂ.೩: ಸ್ವಚ್ಛ, ಸ್ಥಿರ, ಪಾರದರ್ಶಕ, ಜನಪರ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ, ಸಾಮಾಜಿಕ ನ್ಯಾಯ ಪಾಲನೆಯಲ್ಲಿ ಯಾವುದೇ ರಾಜಿ ಇಲ್ಲದೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡುವುದಕ್ಕೆ ಸರ್ಕಾರ ಬದ್ಧ ಎಂದು ರಾಜ್ಯಪಾಲ ಎಚ್.ಆರ್ ಭಾರದ್ವಾಜ್ ಹೇಳಿದ್ದಾರೆ.

ಹೊಸ ಸರ್ಕಾರದ ಅವಧಿಯಲ್ಲಿ ವಿಧಾನ ಮಂಡಲದ ಮೊದಲ ಜಂಟಿ ಅಧಿವೇಶನ ಉದ್ದೇಶಿಸಿ ೨೪ ಪುಟಗಳ ಚಿಕ್ಕ ಚೊಕ್ಕ ಭಾಷಣ ಮಾಡಿದ ರಾಜ್ಯಪಾಲರು, ಭರವಸೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಕೈಗೆಟಕುವ ದರದಲ್ಲಿ ಬಡವರಿಗೆ ವಸತಿ, ಜುಲೈನಿಂದ  ಎಲ್ಲ ಬಿಪಿಎಲ್ ಕುಟುಂಬಗಳಿಗೆ ಕೆ.ಜಿ.ಗೆ ಒಂದು ರೂ.ನಂತೆ ೩೦ ಕೆಜಿ ಅಕ್ಕಿ ವಿತರಣೆ, ಒಂದು ಸಾವಿರ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು, ಕೊಳಗೇರಿ ಹಾಗೂ ಗುಡಿಸಿಲು ಮುಕ್ತ ರಾಜ್ಯ ನಿರ್ಮಾಣ, ೭೮ ನೀರಾವರಿ ಯೋಜನೆಗಳ ಅನುಷ್ಠಾನ, ಹೈದ್ರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ೩೭೧ ಜೆ ತಿದ್ದುಡಿಯನ್ವಯ ಕಾರ್ಯ ಯೋಜನೆ, ಸರ್ಕಾರಿ ಶಾಲೆ ಮುಚ್ಚುವುದಿಲ್ಲ, ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಆದ್ಯತೆ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ತಮ್ಮ ಸರ್ಕಾರ ಜಾರಿ ಮೊದಲಾದ ಹತ್ತು ಹಲವು ಆಶ್ವಾಸನೆಗಳನ್ನು ನೀಡಿದರು.

ವಿಧಾನ ಸಭೆ ಚುನಾವಣೆಯಲ್ಲಿ ಸ್ಪಷ್ಟ ಆದೇಶ ನೀಡಿರುವ ರಾಜ್ಯದ ಎಲ್ಲ ಜಾತಿ, ಧರ್ಮ, ಪ್ರದೇಶಗಳಿಗೆ ಸೇರಿದ ಮತದಾರರು ಹೊಸ ಕನಸಿನೊಂದಿಗೆ ಹೊಸ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿದ್ದಾರೆ. ಅವರು ಕಟ್ಟಿಕೊಂಡಿರುವ ಕನಸು ಮತ್ತು ಇಟ್ಟುಕೊಂಡಿರುವ ನಿರೀಕ್ಷೆ ಹುಸಿಯಾಗಲು ಬಿಡುವುದಿಲ್ಲ ಎಂದು ಘೋಷಿಸಿದರು.

ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಭೂ ಹಗರಣ, ಗಣಿ ಹಗರಣ ಹಾಗೂ ಭ್ರಷ್ಟಾಚಾರದಿಂದಾಗಿ ಕರ್ನಾಟಕದ ಜನತೆ ದೇಶದ ಜನರ ಮುಂದೆ ತಲೆತಗ್ಗಿಸುವಂತಾಗಿದೆ. ಇಂತಹ ಹಗರಣಗಳ ಮೂಲಕ ಸಾರ್ವಜನಿಕರ ಹಣ ಪೋಲಾಗಿ ಅಭಿವೃದ್ಧಿ ಕುಂಠಿತಗೊಂಡಿವೆ. ಇದರಿಂದಾಗಿ ಜನ ರಾಜಕೀಯ ಪಕ್ಷಗಳ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಜನರ ತಿರಸ್ಕಾರ ಭಾವ ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

ಸಮೃದ್ಧ ಕರ್ನಾಟಕ ನಿರ್ಮಾಣಕ್ಕಾಗಿ ಸ್ವಚ್ಚ ಹಾಗೂ ಉತ್ತರದಾಯಿತ್ವ ಇರುವ ಆಡಳಿತವನ್ನು ನೀಡಿ ತಮ್ಮ ಸರ್ಕಾರ ಜನರ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲಿದೆ ಎಂಬ ಭರವಸೆ ನೀಡಿದರು.

ಹೈ.ಕ.ಅಭಿವೃದ್ಧಿ ಮಂಡಳಿ: ಕೇಂದ್ರ ಸರ್ಕಾರ ತೀವ್ರ ಹಿಂದುಳಿದಿರುವ ಹೈದ್ರಾಬಾದ್ ಕರ್ನಾಟಕ ವಲಯದ ಅಭಿವೃದ್ಧಿಗಾಗಿ ೩೭೧ಜೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಈ ಭಾಗದ ಆರು ಜಿಲ್ಲೆಗಳಾದ ಬೀದರ್, ಗುಲ್ಬರ್ಗಾ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿಯ  ಸರ್ವಾಂಗೀಣ ಅಭಿವೃದ್ಧಿಗಾಗಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಮೂರು ತಿಂಗಳಲ್ಲಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದಾಗಿ ಘೋಷಿಸಿದರು.

ಸಮಾಜದಲ್ಲಿನ ಬಡವರ ಪೋಷಣೆ, ನಿರ್ಗತಿಕರಿಗೆ ಆಸರೆ, ಅಶಕ್ತರಿಗೆ ರಕ್ಷಣೆ ತಾರತಮ್ಯವಿಲ್ಲದ ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರದ ಬದ್ಧವಾಗಿದೆ. ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದ ಜಾತಿ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ಮೀಸಲಿಟ್ಟಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಇ-ಆಡಳಿತ ದಕ್ಷತೆ: ಆಡಳಿತದಲ್ಲಿ ದಕ್ಷತೆಯನ್ನು ಸಾಧಿಸುವ ಉದ್ದೇಶದಿಂದ ಸಂಚಾರಿ ಆಡಳಿತ, ಇ-ಜಿಲ್ಲೆ, ಇ-ಖರೀದಿ ಮತ್ತು ಇ-ನಾಗರಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹೇಳಿದರು.

ಅರಣ್ಯ ನಿವಾಸಿಗಳ ಸಾಗುವಳಿ ಹಕ್ಕು ನೀಡುವ ಎಲ್ಲ ಅರ್ಜಿಗಳನ್ನು ಒಂದು ವರ್ಷದೊಳಗಾಗಿ ನೀಡಲು ಸರ್ಕಾರ ಬದ್ಧವಾಗಿದೆ. ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ವ್ಯಕ್ತಿಗತ ಫಲಾನುಭವಿಗಳ ಸಾಲದ ಅಸಲು ಮತ್ತು ಬಡ್ಡಿ ಮನ್ನಾ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿರುವುದು ಸಂತೋಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೈಗಾರಿಕೆ ಮತ್ತು ಮೂಲಸೌಕರ್ಯ ಒದಗಿಸುವ ಸಂದರ್ಭದಲ್ಲಿ ಭೂಮಿ ಸ್ವಾಧೀನ ಪಡೆಯುವಾಗ ರೈತರ ಹಿತ ಕಾಪಾಡಲಾಗುವುದು. ಈ ಉದ್ದೇಶದಿಂದ ೨೦೦೭ ರ ಮೂಲಸೌಕರ್ಯ ನೀತಿಯನ್ನು ಪರಿಷ್ಕರಿಸಲಾಗುವುದು. ರಾಜ್ಯದಲ್ಲಿ ಬಂಡವಾಳ ಹೂಡುವವರಿಗೆ ಅನುಕೂಲವಾಗುವಂತೆ ಬಂಡವಾಳ ಸ್ನೇಹಿ ವಾತಾವರಣ ನಿರ್ಮಿಸಿ ಏಕ ಗವಾಕ್ಷಿ ಮೂಲಕ ಅನುಮೋದನೆ ನೀಡುವ ವ್ಯವಸ್ಥೆ ಬಲಪಡಿಸಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆ ಹೊಸ ರೂಪ ನೀಡುವುದಲ್ಲದೆ, ಸಮಗ್ರ ಮರಳು ಗಣಿಗಾರಿಕೆ ನೀತಿ ಜಾರಿಗೆ ತರಲಾಗುತ್ತದೆ.

ನೀರಾವರಿ: ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಹೊಸ ಕಿರು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ವಿದ್ಯುತ್ ಸುಧಾರಣೆ ಸಲುವಾಗಿ ಸೋಲಾರ್ ಪಂಪ್‌ಗಳು ಮತ್ತು ಉಪಕರಣಗಳಿಗಾಗಿ ನವೀಕರಿಸಬಹುದಾದ ಇಂಧನ ನೀತಿಯ ಮೂಲಕ ಶುದ್ಧ ಮತ್ತು ಹಸಿರು ಇಂಧನಕ್ಕೆ ಉತ್ತೇಜನ ನೀಡುತ್ತೇವೆ ಎಂದರು. ನಗರ ಪ್ರದೇಶಗಳಲ್ಲಿ ಒಳಚರಂಡಿ, ಘನ ತ್ಯಾಜ್ಯ ನಿರ್ವಹಣೆ, ವಸತಿ ಮತ್ತು ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಮಾಸ್ಟರ್ ಪ್ಲಾನ್ ರೂಪಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು. ಬೆಂಗಳೂರಿನ ಮೆಟ್ರೋ ರೈಲಿನ ಮೊದಲ ಹಂತ ಪೂರ್ಣಗೊಳಿಸಿ ಎರಡನೇ ಹಂತ ತ್ವರಿತವಾಗಿ ಪ್ರಾರಂಭಿಸಲಾಗುವುದು ಎಂದು ಪ್ರಕಟಿಸಿದರು.

ಕೈಗಾರಿಕೆ ಸ್ಥಾಪನೆ: ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆದ್ಯತೆ ನೀಡುವುದಲ್ಲದೆ, ೨೦೧೪ರಲ್ಲಿ ಮೂರನೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಆ ಮೂಲಕ ರಾಜ್ಯದ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಬೆಳವಣಿಗೆಗೆ ತಮ್ಮ ಸರ್ಕಾರ ಆದ್ಯತೆ ನೀಡಲಿದೆ. ಎರಡನೇ ಶ್ರೇಣಿ ನಗರಗಳಿಗೆ ಸಹ ಐಟಿ, ಬಿಟಿ ವಲಯ  ವಿಸ್ತರಿಸಲಾಗುವುದು. ಮಾಹಿತಿ ತಂತ್ರಜ್ಞಾನ ಬಂಡವಾಳ ಹೂಡಿಕೆ ಪ್ರದೇಶದ ಸ್ಥಾಪನೆ ತ್ವರಿತಗೊಳಿಸಲು ಕೇಂದ್ರ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ ಹೇಳಿದರು. ಜಾಗತಿಕ ಸ್ಪರ್ಧೆ ಎದುರಿಸಲು ಸನ್ನದ್ಧವಾಗುವಂತೆ ಹೊಸ ಜವಳಿ ನೀತಿ ರೂಪಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದರು.

ಅವಕಾಶ ವಂಚಿತ ಮುಸ್ಲಿಮರೂ ಸೇರಿದಂತೆ ಅಲ್ಪಸಂಖ್ಯಾತರ ಬದುಕನ್ನು ಉನ್ನತೀಕರಣಗೊಳಿಸಲು ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಆಯೋಗ ಮತ್ತು ನ್ಯಾಯಮೂರ್ತಿಸಾಚಾರ್ ಸಮಿತಿ ನೀಡಿರುವ ವರದಿಯ ಶಿಫಾರಸುಗಳ  ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವ ಹಿನ್ನೆಲೆಯಲ್ಲಿ ಶಾಸ್ತ್ರೀಯ ಭಾಷಾ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ. ಜತೆಗೆ ಕೊಡವ, ತುಳು, ಕೊಂಕಣಿ, ಬ್ಯಾರಿ, ಲಂಬಾಣಿ ಮುಂತಾದ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗಾಗಿ ತಮ್ಮ ಸರ್ಕಾರ ಅಗತ್ಯದ ಕ್ರಮ ಕೈಗೊಳ್ಳಲಿದೆ ಎಂದರು.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕ್ರಮ: ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸಾಚಾರ ಘಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು ಇವರಿಗೆ ಸುರಕ್ಷಿತ ವಾತಾವರಣ ಸೃಷ್ಟಿಸಲು, ಮಕ್ಕಳು ಹಾಗೂ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳವನ್ನು ತಪ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕಾನೂನನ್ನು ರಾಜ್ಯದಲ್ಲಿ ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದರು.

ಮಹಿಳಾ ಸ್ವಸಹಾಯ ಗುಂಪುಗಳ ಆವರ್ತ ನಿಧಿಯನ್ನು ಹೆಚ್ಚಿಸುವುದು, ಅವರು ಉತ್ಪಾದಿಸುವ ಉತ್ಪನ್ನಗಳಿಗೆ ಪ್ರತ್ಯೇಕ ಮಾರುಕಟ್ಟೆ ಒದಗಿಸುವುದು, ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅಗತ್ಯ ಕೊಠಡಿಗಳನ್ನು ಕಟ್ಟುವುದು, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗುವುದು  ಎಂದು ನುಡಿದರು.

ಪ್ರಾಥಮಿಕ ಶಾಲೆಗಳಲ್ಲಿ ನಿವೃತ್ತಿಯಿಂದ ತೆರವಾದ ಹುದ್ದೆಗಳಿಗೆ ಪ್ರತಿಯಾಗಿ ಕಾಲ ಕಾಲಕ್ಕೆ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ವಾರ್ಷಿಕವಾಗಿ ಶಿಕ್ಷಕರ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗುವುದು. ವಿಶ್ವವಿದ್ಯಾಲಯ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅಧಿಕ ಪ್ರಮಾಣದ ಬೋಧಕ ಹುದ್ದೆಗಳು ಖಾಲಿಯಿದ್ದು, ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನ ಮಾಡಲಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮತ್ತು ಹಿರಿಯ ನಾಗರಿಕರಿಗೆ ಆರೋಗ್ಯ ಸೇವಾ ನೀಡಿಕೆದಾರರ ಜಾಲದ ಮುಖಾಂತರ ಗುರುತಿಸಲಾದ ವಿಶೇಷ ಸೇವೆ ದೊರೆಯುವಂತೆ ತಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರಕಟಿಸಿದರು.

ಎಲ್ಲ ಆರೋಗ್ಯ ವಿಮಾ ಯೋಜನೆಗಳನ್ನು ಒಂದು ಸಮಗ್ರ ಏಕೀಕೃತ ಯೋಜನೆಯಡಿ ತರಲಾಗುವುದು. ಜತೆಗೆ ರಾಷ್ಟ್ರೀಯ ನಗರ ಆರೋಗ್ಯ ಮಿಷನ್ ಅನ್ನು ರಾಜ್ಯ ಸರ್ಕಾರ ಸ್ವಾಗತಿಸಿದ್ದು ಈ ಕಾರ್ಯಕ್ರಮವನ್ನು ತ್ವರಿತವಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಕಡಿಮೆ ದರದಲ್ಲಿ ವಸತಿ: ಕೈಗೆಟುಕುವ ದರದಲ್ಲಿ ಸರ್ವರಿಗೂ ವಸತಿ ಕಲ್ಪಿಸಲು ಹಾಗೂ ಕಾಲಬದ್ಧ ಅವಧಿಯೊಳಗೆ ಅನುಷ್ಠಾನಗೊಳಿಸಲು ಕರ್ನಾಟಕ ಗೃಹ ಮತ್ತು ವಸತಿ-೨೦೦೯ನ್ನು ಜಾರಿಗೊಳಿಸಲು ಪುನರ್ ಪರಿಶೀಲಿಸಲಿದೆ. ಪ್ರತಿ ಮನೆಗೆ ಗ್ರಾಮೀಣ ಭಾಗದಲ್ಲಿ ಒಂದೂವರೆ ಲಕ್ಷ ರೂಪಾಯಿ ಹಾಗೂ ನಗರ ಪ್ರದೇಶದಲ್ಲಿ ಎರಡು ಲಕ್ಷ ರೂಪಾಯಿ ನಿಗದಿಪಡಿಸಿದ್ದು, ಸಹಾಯಧನದ ಮೊತ್ತ ೧.೨೦ ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಕೃಷಿ ಬೆಲೆ ಆಯೋಗ: ಕೃಷಿಕರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಕೃಷಿ ಬೆಲೆ ಆಯೋಗವನ್ನು ಸ್ಥಾಪಿಸಲಾಗುವುದು ಮತ್ತು ನಿರಂತರವಾಗಿ ಕೃಷಿ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಪರಿವರ್ತನೆಯಾಗುತ್ತಿರುವುದನ್ನು ಸಮತೋಲನಗೊಳಿಸಿ  ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಕಟಿಸಿದರು.

ಸಣ್ಣ ರೈತರ ಜೀವನವನ್ನು ಸುಭದ್ರಗೊಳಿಸಲು ಭೂ ಚೇತನ ಯೋಜನೆಯನ್ನು ವಿಸ್ತರಿಸಲಾಗುವುದು. ತೋಟಗಾರಿಕೆ ಉತ್ಪನ್ನದಿಂದಲೇ ಕೃಷಿ ಆದಾಯ ಶೇಕಡಾ ನಲವತ್ತರಷ್ಟಿದ್ದು ಈ ಹಿನ್ನೆಲೆಯಲ್ಲಿ ರಫ್ತು ಮತ್ತು ಮೌಲ್ಯವರ್ಧನೆಗೆ ಉತ್ತೇಜನ ನೀಡುವ ವಿಷಯದಲ್ಲಿ ಹೈಟೆಕ್ ಕ್ಲಸ್ಟರ್‌ಗಳನ್ನು ಸ್ಥಾಪಿಸುವ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ವ್ಯವಹಾರದ ಪರಿಧಿಗೆ ಈ ರೈತರನ್ನು ತರುವುದು ಸರ್ಕಾರದ ನಿರ್ಧಾರವಾಗಿದೆ. ಈಗಾಗಲೇ ಹಾಲು ಉತ್ಪಾದಕರಿಗೆ ಉತ್ತೇಜನ ನೀಡಲು ಪ್ರೋತ್ಸಾಹಧನವನ್ನು ಎರಡು ರೂ.ನಿಂದ ೪ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಗ್ರಾಮಸಭೆಗಳನ್ನು ಬಲಪಡಿಸಲು ಮತ್ತು ಅವುಗಳಿಗೆ ಹೆಚ್ಚಿನ ಅಧಿಕಾರ ನೀಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಫಲಾನುಭವಿಗಳ ಆಯ್ಕೆ ಸೇರಿದಂತೆ ಗ್ರಾಮಸಭೆಗಳು ಕೈಗೊಳ್ಳುವ ತೀರ್ಮಾನಗಳಿಗೆ ಅನುಷ್ಠಾನದ ಎಲ್ಲ ಹಂತಗಳಲ್ಲಿ ಮಾನ್ಯತೆ ದೊರೆಯಲಿದೆ ಎಂದು ಹೇಳಿದರು.

ಕರ್ತವ್ಯಲೋಪವೆಸಗಿದ ಪಂಚಾಯತ್ ರಾಜ್ ಸಂಸ್ಥೆಯ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರನ್ನು ಅನರ್ಹಗೊಳಿಸಲು ಕಾನೂನಿಗೆ ಸೂಕ್ತ ತಿದ್ದುಪಡಿ ತರಲಾಗುವುದು. ಬಡವರಿಗೆ ಪ್ರಯೋಜನಗಳನ್ನು ವಿಸ್ತರಿಸಲು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸ್ಥಾಪಿಸಲಾಗುವುದು. ರಾಜ್ಯದಲ್ಲಿ ೬೦ ಲಕ್ಷ ವೈಯಕ್ತಿಕ ಶೌಚಾಲಯ ನಿರ್ಮಿಸಲಾಗುವುದು ಎಂದು ಘೋಷಿಸಿದರು.

ಶುದ್ಧ ನೀರು: ನಗರ ಪ್ರದೇಶಗಳಿಗೆ ನೀಡುವಂತೆ ಗ್ರಾಮೀಣ ಪ್ರದೇಶಗಳಿಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ೫೮೭೫ ಗ್ರಾಮಗಳಲ್ಲಿ ಫ್ಲೋರೈಡ್‌ನಂಥ ವಿಷಕಾರಕ ಅಂಶಗಳಿದ್ದು, ಗದಗ್ ಜಿಲ್ಲೆ ರೀತಿಯಲ್ಲೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.

೨೦೧೪ ರ ಜನವರಿಯಿಂದ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು ಒಂದು ವರ್ಷದಲ್ಲಿ ಇಂತಹ ೧೦೦೦ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ ೧೪೦೦ ಕೋಟಿ ರೂಗಳನ್ನು ಒದಗಿಸಿದೆ.  ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಕಾವೇರಿ ನದಿ ಪಾತ್ರದಲ್ಲಿ ಬಾಕಿ ಇರುವ ವಿಸ್ತರಣ, ನವೀಕರಣ ಮತ್ತು ಆಧುನೀಕರಣ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮೋದನೆ ಕೋರಲಾಗುವುದು ಎಂದು ತಿಳಿಸಿದರು.

ಒತ್ತುವರಿ ತೆರವು: ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಎ.ಟಿ.ರಾಮಸ್ವಾಮಿ ಮತ್ತು ಬಾಲಸುಬ್ರಮಣ್ಯಂ ಸಮಿತಿಗಳು ನೀಡಿರುವ ವರದಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರದ ಸಮಿತಿ ರಚಿಸಲಾಗುವುದು. ಆಡಳಿತಾತ್ಮಕ ಸುಧಾರಣೆ ಉತ್ತಮಗೊಳಿಸಲು ಆಡಳಿತ ಮತ್ತು ಕೌಶಲ ಸುಧಾರಣಾ ಕೇಂದ್ರ ಸ್ಥಾಪಿಸಲಾಗುವುದು. ಆಡಳಿತ ವೆಚ್ಚ ಸುಧಾರಣಾ ಆಯೋಗದ ಶಿಫಾರಸ್ಸು ಅನುಷ್ಠಾನಗೊಳಿಸಲಾಗುವುದು. ಜತೆಗೆ ಯಾವುದೇ ಬಗೆಯ ತೆರಿಗೆಗಳ್ಳತನವನ್ನು ಸಹಿಸುವುದಿಲ್ಲ ಎಂದು ಪ್ರಕಟಿಸಿದರು.

ಹೊಸ ಸರ್ಕಾರದ ಮೇಲೆ ರಾಜ್ಯದ ಜನರು ಇಟ್ಟಿರುವ ನಿರೀಕ್ಷೆಗಳನ್ನು ಈಡೇರಿಸಲು ಪ್ರಗತಿಪರ ಶಾಸನಗಳನ್ನು ಅಂಗೀಕರಿಸುವುದಕ್ಕಾಗಿ ಎರಡೂ ಸದನಗಳು ಅರ್ಥಪೂರ್ಣ ಮತ್ತು ರಚನಾತ್ಮಕ ಚರ್ಚೆಗೆ ಸಾಕ್ಷಿಯಾಗುತ್ತವೆ ಎಂದು ನಾನು ನಂಬಿದ್ದೇನೆ ಎಂದು ರಾಜ್ಯಪಾಲರು ವಿಶ್ವಾಸ ವ್ಯಕ್ತಪಡಿಸಿದರು.

 ಮುಖಪುಟ /ಸುದ್ದಿ ಸಮಾಚಾರ