ಮುಖಪುಟ /ಸುದ್ದಿ ಸಮಾಚಾರ 

ರಾಜ್ಯಪಾಲರ ಭಾಷಣಕ್ಕೆ ತೀವ್ರ ಟೀಕೆ

ಬೆಂಗಳೂರು, ಜೂ. ೩:- ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಇಂದು ವಿಧಾನಮಂಡಳದ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕಳೆದ ಫೆಬ್ರವರಿಯಲ್ಲಿ ನಡೆದ ವರ್ಷದ ಮೊದಲ ವಿಧಾನಮಂಡಳ ಅಧಿವೇಶನದಲ್ಲಿ ನನ್ನ ಸರ್ಕಾರ ಎಂದು ಸಾಧನೆಗಳನ್ನು ಪಟ್ಟಿ ಮಾಡಿ, ಹಾಡಿ ಹೊಗಳಿದ್ದ ರಾಜ್ಯಪಾಲರು ಇಂದು ಹಿಂದಿನ ಸರ್ಕಾರದ ಭ್ರಷ್ಟಾಚಾರದಿಂದ ಸಾರ್ವಜನಿಕ ಹಣ ಪೋಲಾಗಿ, ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದ ಜನತೆ ದೇಶದ ಜನರ ಮುಂದೆ ತಲೆ ತಗ್ಗಿಸುವಂತಾಗಿದೆ. ಜನ ರಾಜಕೀಯ ಪಕ್ಷಗಳ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದಲ್ಲದೆ ರಾಜ್ಯದ ಜನರಲ್ಲಿ ಬೆಳೆಯುತ್ತಿರುವ ತಿರಸ್ಕಾರ ಭಾವ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿರುವುದು ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ.

ಕಾನೂನು ಪಂಡಿತರೂ ಆದ ರಾಜ್ಯಪಾಲರು ಹೀಗೆ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ದಾಖಲಾರ್ಹವಾದ ಜಂಟಿ ಅಧಿವೇಶನದಲ್ಲಿ ಆಕ್ಷೇಪ ಮಾಡುವುದು ಎಷ್ಟುಸರಿ ಎಂಬ ಪ್ರಶ್ನೆ ಉದ್ಭವವಾಗಿದೆ. ಆಡಳಿತಾರೂಢ ಪಕ್ಷಗಳು ಏನೇ ಭಾಷಣ ಬರೆದುಕೊಟ್ಟರೂ ಅದನ್ನೇ ಓದುತ್ತೇನೆ ಎಂದು ಹೇಳುವುದು ಎಷ್ಟು ಸರಿ ಎಂಬುದು ಸಂಸದೀಯ ಪಟುಗಳ ಪ್ರಶ್ನೆಯಾಗಿದೆ.

ಒಂದೊಮ್ಮೆ ರಾಜ್ಯಪಾಲರಿಗೆ ರಾಜ್ಯದಲ್ಲಿ ತೀವ್ರ ಭ್ರಷ್ಟಾಚಾರ ಅರಿವಾಗಿದ್ದರೆ, ರಾಜ್ಯದಲ್ಲಿ ಜನ ತಲೆತಗ್ಗಿಸುವಂಥ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಮನವರಿಕೆ ಆಗಿದ್ದರೆ, ಅವರು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿ ರಾಷ್ಟ್ರಪತಿ ಆಡಳಿತವನ್ನೇ ತರಬಹುದಾಗಿತ್ತು. ಅದು ಬಿಟ್ಟು, ಆಗ ಸರ್ಕಾರವನ್ನು ಹಾಡಿ ಹೊಗಳಿ, ಈಗ ಹಿಂದಿನ ಸರ್ಕಾರ ತೆಗಳುವುದು ಸರಿಯಲ್ಲ ಎಂದು ಮಾಜಿ ಸಚಿವ, ಮಾಜಿ ಸಭಾಪತಿ ಡಿ.ಬಿ.ಚಂದ್ರೇಗೌಡ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಪಾಲರ ಭಾಷಣ ಶಾಶ್ವತವಾಗಿ ದಾಖಲೆಯಲ್ಲಿ ಉಳಿಯುವಂಥದ್ದು, ರಾಜ್ಯಪಾಲರೇ ಯಾವಾಗಲೂ ರಾಜ್ಯದ ಪ್ರಥಮ ಪ್ರಜೆ ಆಗಿರುತ್ತಾರೆ. ರಾಜ್ಯ ಮುಖ್ಯಸ್ಥರಾಗಿರುತ್ತಾರೆ. ಅವರು ರಾಜ್ಯದಲ್ಲಿ ಪ್ರಜಾಪ್ರಭುತ್ವ ಕುಸಿದಿದೆ ಎಂದು ದಾಖಲಿಸಿದರೆ ಅದರ ಜವಾಬ್ದಾರಿಯನ್ನು ಅವರೂ ಹೊರಬೇಕಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯಪಾಲರು ಹೀಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸುವುದಾದರೆ, ರಾಷ್ಟ್ರಪತಿಗಳು ಕೇಂದ್ರ ಸರ್ಕಾರದ ಭ್ರಷ್ಟಾಚಾರದಿಂದಾಗಿ ಭಾರತದ ಜನರು, ವಿಶ್ವದ ಜನರೆದುರು ತಲೆತಗ್ಗಿಸುವಂತಾಗಿದೆ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿಕೊಡುವ ಭಾಷಣವನ್ನೇ ಓದಬೇಕೆಂದಿಲ್ಲ. ಸಂವಿಧಾನಾತ್ಮಕವಾಗಿ ಅದನ್ನು ಸೂಕ್ತವಾಗಿ ಬದಲಾವಣೆ ಮಾಡಿಕೊಳ್ಳುವ ಇಲ್ಲವೇ ಇದನ್ನು ಓದುವುದಿಲ್ಲ ಎಂದು ಹೇಳುವ ಅಧಿಕಾರ ಅವರಿಗಿದೆ ಎಂದು ತಿಳಿಸಿದ್ದಾರೆ.

ಆದರೆ, ಮಾಜಿ ಸಭಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ರಮೇಶ್ ಕುಮಾರ್ ರಾಜ್ಯಪಾಲರ ಭಾಷಣವನ್ನು ಸಮರ್ಥಿಸಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಕೂಡ ರಾಜ್ಯಪಾಲರ ಭಾಷಣದಲ್ಲಿ ರಾಜ್ಯದ ಜನತೆ ತಲೆದಗ್ಗಿಸುವಂಥ ಸ್ಥಿತಿ ಇತ್ತು, ಅಸ್ಮಿತೆ ಇಲ್ಲವಾಗಿತ್ತು ಎಂಬ ಸಾಲುಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೂಡ ರಾಜ್ಯಪಾಲರ ಭಾಷಣದಲ್ಲಿ ಹಿಂದಿನ ಸರ್ಕಾರವನ್ನು ಟೀಕಿಸಿರುವ ಸಾಲುಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

 ಮುಖಪುಟ /ಸುದ್ದಿ ಸಮಾಚಾರ