ಮುಖಪುಟ /ಸುದ್ದಿ ಸಮಾಚಾರ 

ಮಂತ್ರಿ ಆಗೋ ತನಕ ಸದನಕ್ಕೆ ಡಿ.ಕೆ.ಶಿ. ಗೈರು?

*ಟಿ.ಎಂ. ಸತೀಶ್

D.K. Shivakumarಬೆಂಗಳೂರು, ಜೂ.೨:: ಕಳಂಕಿತ ಎಂಬ ಹಣೆಪಟ್ಟಿ  ಕಟ್ಟಿ ತಮಗೆ ಸಚಿವ ಸ್ಥಾನ ಸಿಗದಂತೆ ತಡೆದಿರುವ ಪಕ್ಷದ ಕೆಲವು ನಾಯಕರ ಧೋರಣೆ ವಿರುದ್ಧ ಬೇಸರಗೊಂಡಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಮಂತ್ರಿ ಆಗುವ ತನಕ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸದಿರಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ತಮ್ಮ ಮೇಲೆ ರಾಜಕೀಯ ಪ್ರೇರಿತವಾಗಿ ಕೆಲವು ಪ್ರಕರಣ ದಾಖಲಿಸಲಾಗಿದ್ದು, ಅವುಗಳಲ್ಲಿ ಯಾವುದೇ ಹುರುಳಿಲ್ಲದಿದ್ದರೂ, ಕೆಲವು ಕಾಂಗ್ರೆಸ್ ನಾಯಕರು ಇದನ್ನೇ ದೊಡ್ಡದು ಮಾಡಿ ಹೈಕಮಾಂಡ್ ಕಿವಿ ಚುಚ್ಚಿ ತಾವು ಸಚಿವರಾಗುವುದನ್ನು ತಡೆದಿರುವ ಬಗ್ಗೆ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನಗೊಂಡಿದ್ದಾರೆ.

ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ತಾವು ಮಂತ್ರಿ ಆಗದಂತೆ ತಡೆಯಲಾಯಿತು. ಈಗ ತಮ್ಮದೇ ಪಕ್ಷ ಸ್ಪಷ್ಟ ಬಹುಮತ ಪಡೆದಿರುವಾಗಲೂ ತಮ್ಮ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಅಧಿವೇಶನಕ್ಕೆ ಆಗಮಿಸಿ ಸ್ಪೀಕರ್ ಸಮ್ಮುಖದಲ್ಲಿ ಶಾಸಕರಾಗಿ ಪ್ರಮಾಣ ವಚನ ಪಡೆಯದೆ ಶಿವಕುಮಾರ್ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.

ಒಕ್ಕಲಿಗ ಸಮುದಾಯದಲ್ಲಿ ಮತ್ತೊಬ್ಬ ಪ್ರಭಾವಿ ನಾಯಕ ಬೆಳೆಯುವುದನ್ನು ಸಹಿಸದ ಮಾಜಿ ಪ್ರಧಾನಿ ದೇವೇಗೌಡರು, ಕಾಂಗ್ರೆಸ್ -ಜೆಡಿಎಸ್ ಸರ್ಕಾರ ಇದ್ದಾಗ ಶಿವಕುಮಾರ್ ಸಚಿವರಾಗದಂತೆ ತಡೆದಿದ್ದರು. ಈಗ  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರಿಂದ  ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆಸಿ, ಕಳಂಕಿತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಂತೆ ಒತ್ತಡ ಹೇರಿದ್ದಾರೆ ಎಂಬುದು ಡಿ.ಕೆ. ಶಿವಕುಮಾರ್ ಆಪ್ತರ ಆರೋಪ.

ಈ ಮಧ್ಯೆ ಶಿವಕುಮಾರ್ ಅವರು ದೆಹಲಿಗೆ ತೆರಳಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ, ತಮ್ಮ ವಿರುದ್ಧ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಿದ್ದಾರೆ. ಅದರಲ್ಲಿ ಯಾವುದೇ ಹುರುಳಿಲ್ಲ, ಎಲ್ಲವೂ ರಾಜಕೀಯ ಪ್ರೇರಿತ ಎಂಬುದನ್ನು ಮನವರಿಕೆ ಮಾಡಿಸಿದ್ದಾರೆ. ಆದರೂ ಎಸ್.ಆರ್. ಪಾಟೀಲ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ನೀಡದ ಬಗ್ಗೆ ಶಿವಕುಮಾರ್ ತೀವ್ರ ಅತೃಪ್ತರಾಗಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕರು ಸ್ಪೀಕರ್ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಾಡುವ ಸೂಚನೆಗೆ ಡಿ.ಕೆ. ಶಿವಕುಮಾರ್ ಅವರಿಂದ ಅನುಮೋದನೆ ಮಾಡಿಸಲು ಮತ್ತು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೂ ಶಿವಕುಮಾರ್ ಅವರಿಂದ ಸೂಚನೆ ಮಂಡಿಸಲು ತೀರ್ಮಾನಿಸಿದ್ದರು. ಆದರೆ ಈ ಅಧಿವೇಶನದಲ್ಲಿ ಪಾಲ್ಗೊಳ್ಳದೆ ತಮ್ಮ ಪ್ರತಿಭಟನೆ ವ್ಯಕ್ತಪಡಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಚಿವ ದೇಶಪಾಂಡೆ ಪ್ರಸ್ತಾವನೆಯನ್ನು ಅನುಮೋದಿಸಿದ್ದರು.

ಕಪಿಲ್ ಸಿಬಲ್ ಅಭಿಪ್ರಾಯ - ಈ ಮಧ್ಯೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು ಡಿ.ಕೆ. ಶಿವಕುಮಾರ್ ವಿರುದ್ಧ ಇದೆ ಎನ್ನಲಾದ ಆರೋಪಗಳ ತೀವ್ರತೆ ಹಾಗೂ ರಾಜ್ಯದ ಕೆಲವು ನಾಯಕರು ಮಾಡಿರುವ ಆರೋಪದಲ್ಲಿ ಹುರುಳಿದೆಯೇ ಎಂಬುದನ್ನು ಅರಿಯಲು ಇಡೀ ಕಡತವನ್ನು ಕಾನೂನು ತಜ್ಞರೂ ಕೇಂದ್ರ ಸಚಿವರೂ ಆದ ಕಪಿಲ್ ಸಿಬಲ್ ಅವರಿಗೆ ಕಳುಹಿಸಿದ್ದು, ಸಿಬಲ್ ಅವರು, ಈ ಯಾವ ಪ್ರಕರಣದಲ್ಲೂ ಶಿವಕುಮಾರ್ ಅವರಿಗೆ ಶಿಕ್ಷೆ ಆಗುವ ಸಾಧ್ಯತೆ ಇಲ್ಲ ಎಂಬುದನ್ನು ಸೋನಿಯಾಗಾಂಧಿ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ತಮಗೆ ಸಚಿವ ಸ್ಥಾನ ನೀಡಲೇಬೇಕು ಎಂಬುದು ಡಿ.ಕೆ. ಶಿವಕುಮಾರ್ ವಾದವಾಗಿದೆ. ಯಾರೋ ಮಾಡುತ್ತಿರುವ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇನೆ ಎಂಬ ನೋವು ಅವರಲ್ಲಿದೆ. ಹೀಗಾಗಿ ಸಚಿವರಾಗುವ ತನಕ ಸದನ ಪ್ರವೇಶಿಸುವುದಿಲ್ಲ ಎಂಬ ನಿಲುವಿಗೆ ಅವರು ಬಂದಿದ್ದಾರೆ ಎನ್ನಲಾಗಿದೆ.

೬ತಿಂಗಳು ಅವಕಾಶ - ಶಾಸಕರಾಗಿ ಕೆಲಸ ಮಾಡಲು, ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸಲೇಬೇಕಾಗಿಲ್ಲ. ಆದರೆ ಸದನದ ಕಲಾಪದಲ್ಲಿ ಪಾಲ್ಗೊಳ್ಳಲು, ಸಚಿವರಿಗೆ ಪ್ರಶ್ನೆ ಕೇಳಲು, ಅಧಿವೇಶನದ ಕಲಾಪದಲ್ಲಿ ಎದ್ದು ನಿಂತು ಸಭಾಧ್ಯಕ್ಷರನ್ನುದ್ದೇಶಿಸಿ ಮಾತನಾಡಲು ಸಂವಿಧಾನಾತ್ಮಕವಾಗಿ ಯಾವುದೇ ಚುನಾಯಿತ ಶಾಸಕ, ತಾನು ಆಯ್ಕೆಯಾದ ೬ ತಿಂಗಳ ಅವಧಿಯಲ್ಲಿ ಸಭಾಧ್ಯಕ್ಷರ ಮುಂದೆ ಪ್ರಮಾಣ ವಚನ  ಸ್ವೀಕರಿಸಬೇಕಾಗುತ್ತದೆ.

ಅನಿವಾರ್ಯ ಸಂದರ್ಭಗಳಲ್ಲಿ, ಸಭಾಧ್ಯಕ್ಷರ ಅನುಮತಿ ಪಡೆದು ೬ ತಿಂಗಳ ಬಳಿಕವೂ ಪ್ರಮಾಣ ವಚನ ಸ್ವೀಕರಿಸದಿದ್ದರೂ ಅವರ ಶಾಸಕ ಸ್ಥಾನಕ್ಕೆ ಚ್ಯುತಿ ಬರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

ಈ ಹಿಂದೆ ಖ್ಯಾತ ಗಾಯಕಿ ಲತಾ ಮಂಗೇಷ್ಕರ್ ಅವರು ರಾಜ್ಯಸಭೆಗೆ ನಾಮಕರಣಗೊಂಡಾಗ ಅವರು ೧ ವರ್ಷದ ಬಳಿಕ ಪ್ರಮಾಣ ವಚನ ಸ್ವೀಕರಿಸಿದ್ದರು. ವಿದೇಶದಲ್ಲಿದ್ದ ಕಾರಣ ಅವರು ಸಭಾಪತಿಗಳ ಅನುಮತಿ ಪಡೆದುಕೊಂಡಿದ್ದರು ಎಂಬ ಉದಾಹರಣೆಯನ್ನೂ ನೀಡುತ್ತಾರೆ.

ಒಟ್ಟಿನಲ್ಲಿ ಸಚಿವ ಸ್ಥಾನರಾಗಲು ಹರ ಸಾಹಸ ಮಾಡುತ್ತಿರುವ ಡಿ.ಕೆ. ಶಿವಕುಮಾರ್, ತಮ್ಮ ಸಾತ್ವಿಕ ಮುನಿಸನ್ನು ಸದನಕ್ಕೆ ಬಾರದೆ ಕಾಂಗ್ರೆಸ್ ನಾಯಕರಿಗೆ ಮುಟ್ಟಿಸುತ್ತಿದ್ದಾರೆ.    

 ಮುಖಪುಟ /ಸುದ್ದಿ ಸಮಾಚಾರ