ಮುಖಪುಟ /ಸುದ್ದಿ ಸಮಾಚಾರ 

ಕುಡಿಯುವ ನೀರಿಗಾಗಿ ಕೊಳವೆಬಾವಿ ನಿರ್ಮಿಸಲು ೩೮ ಕೋಟಿ

ಬೆಂಗಳೂರುಜೂನ್ ೧೦:  ರಾಜ್ಯದ ಅಭಾವಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೊಳವೆಬಾವಿ ಕೊರೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ವಿಧಾನಸಭೆಗೆ ಇಂದು ತಿಳಿಸಿದರು.

ರಾಜ್ಯದಲ್ಲಿ ಸತತ ಎರಡು ವರ್ಷಗಳಿಂದ ಇರುವ ಅಭಾವ ಪರಿಸ್ಥಿತಿಯಿಂದಾಗಿ ಉಂಟಾಗಿರುವ ಕುಡಿಯುವ ನೀರಿನ ಕೊರತೆ ಬಗ್ಗೆ ಸದನದಲ್ಲಿ ಪ್ರತಿ ಪಕ್ಷಗಳು ಸರ್ಕಾರದ ಗಮನ ಸೆಳೆದಾಗ ಅವರು ಕೊಳವೆಬಾವಿ ನಿರ್ಮಾಣಕ್ಕೆ ಹಣದ ಕೊರತೆಯಿಲ್ಲ; ಸರ್ಕಾರ ಇನ್ನು ಒಂದೆರಡು ದಿನಗಳಲ್ಲೇ ನಿಯಮ ಸಡಿಲಿಕೆಯ ಬಗ್ಗೆ ಆದೇಶ ಹೊರಡಿಸುವುದು ಎಂದು ಸ್ಪಷ್ಟಪಡಿಸಿದರು.

ಕೊಳವೆ ಬಾವಿ ಕೊರೆಸಲು ಅವಕಾಶವಾಗುವಂತೆ ಕೆಲಸ ಮತ್ತು ನಿರ್ವಹಣೆಯಡಿಯ ಹಣದ ಬಳಕೆ ಸಾಧ್ಯಮಾಡಲು ಸರ್ಕಾರ ನಿಯಮ ಸಡಿಲಿಸುವುದೆಂದು ಹೇಳಿದರು.

ಇದಕ್ಕೂ ಮುಂಚೆ ಶೂನ್ಯವೇಳೆಯಲ್ಲಿ ಪ್ರತಿ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸಿ ಸರ್ಕಾರ ಬರಪೀಡಿತವೆಂದು ಘೋಷಿಸಿರುವ ತಾಲೂಕುಗಳ ಪೈಕಿ ೧೫೪೫ರಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ತೀವ್ರವಾಗಿದೆ; ೧೫೫ರಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ತೀವ್ರವಾಗಿದೆ; ಸರ್ಕಾರ ಹಣದ ಕೊರತೆ ಇಲ್ಲ ಎಂದರೂ ಹಣ ಬಿಡುಗಡೆಯಾಗಿಲ್ಲ ಎಂದು ಆಪಾದಿಸಿದರು.

ಮಳೆ ಉತ್ತಮವಾಗಿರುವ ತಾಲೂಕುಗಳಲ್ಲಿ ಸಹಕಾರಿ ಸಂಘಗಳು ಸಾಲ ನೀಡದೆ ರೈತರು ಬೀಜ ಗೊಬ್ಬರ, ಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಸರ್ಕಾರ ನೀಡಬೇಕಾದ ೨ ಸಾವಿರದ ೮೦೦ ಕೋಟಿ ರೂಪಾಯಿ ಬಿಡುಗಡೆಗೆ ವಿಳಂಬವಾಗುತ್ತಿದೆ ಎಂಬ ಮತ್ತೊಂದು ಆಕ್ಷೇಪಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರಿ ಸಂಘಗಳ ಸಾಲಮನ್ನಾ ಹಣ ತುಂಬಿಕೊಡಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳುತ್ತದೆ ಎಂದು ಆಶ್ವಾಸನೆ ನೀಡಿದರು.

೩೮ ಕೋಟಿ ಬಿಡುಗಡೆ: ರಾಜ್ಯದಲ್ಲಿ ಬರಪರಿಸ್ಥಿತಿಯಿಂದಾಗಿ ಗ್ರಾಮೀಣ ಭಾಗಗಳಲ್ಲಿ ತಲೆದೋರಿಯುವ ಕುಡಿಯುವ ನೀರಿನ ಅಭಾವ ನಿವಾರಿಸಲು ಕೊಳವೆ ಬಾವಿಗಳನ್ನು ಕೊರೆಸಲು ೩೮ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವರಾದ  ಶ್ರೀನಿವಾಸ್ ಪ್ರಸಾದ್‌ರವರು ವಿಧಾನಸಭೆಗಿಂದು ತಿಳಿಸಿದರು.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರೊಗಳೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿ ಚರ್ಚಿಸಿ ಸೂಕ್ತ ನಿರ್ದೇಶನವನ್ನು ಈಗಾಗಲೇ ನೀಡಿದ್ದಾರೆಂದು ತಿಳಿಸಿದರು.

ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಬಾರದೆಂಬ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.  

 ಮುಖಪುಟ /ಸುದ್ದಿ ಸಮಾಚಾರ