ಮುಖಪುಟ /ಸುದ್ದಿ ಸಮಾಚಾರ 

ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥಗಳ ವಿಧೇಯಕ ಅಂಗೀಕಾರ

ಬೆಂಗಳೂರುಜೂನ್ ೧೦:  ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ೨೦೧೩ ನೇ ಸಾಲಿನ ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಸರ್ವಾನುಮತದಿಂದ ಅಂಗೀಕರಿಸಿ ಅನುಮೋದಿಸಲಾಯಿತು.

ಸಭೆಯಲ್ಲಿ ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ  ಆರ್. ವಿ. ದೇಶಪಾಂಡೆ ಅವರು ಮಂಡಿಸಿದ ಈ ವಿಧೇಯಕ್ಕೆ ವಿರೋಧ ಪಕ್ಷದ ಸದಸ್ಯರುಗಳಾದ  ಎಂ.ಸಿ. ನಾಣಯ್ಯ, ಗೋಮಧುಸೂಧನ್ ಪುಟ್ಟಸ್ವಾಮಿ, ಸಿದ್ದರಾಜು, ನಾರಾಯಣಸ್ವಾಮಿ ಅವರುಗಳು ಸರ್ಕಾರದ ಸೀಟು ಸೇರಿದಂತೆ ಆಯಾ ವರ್ಗದವರಿಗೆ ಹಂಚಿಕೆಯಾದ ಸೀಟುಗಳು ಆಯಾ ವರ್ಗದವರಿಗೇ ಸಿಗುವಂತೆ ಮಾಡುವ ಜೊತೆಗೆ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿಗೆ ರಚಿಸಲಾಗಿರುವ ಏಕ ಸದಸ್ಯ ನಿಯಂತ್ರಕ ಸಮಿತಿಗೆ ವಿಶ್ವ ವಿದ್ಯಾಲಯದ ಮಾಜಿ ಕುಲಪತಿಯವರನ್ನು ಸದಸ್ಯರನ್ನಾಗಿ ಮಾಡುವ ಬದಲು, ಉನ್ನತ ಶಿಕ್ಷಣ ಅಥವಾ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯವರನ್ನು ನೇಮಿಸುವಂತೆ ಪಟ್ಟು ಹಿಡಿದರು.

ಇದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವರಾದ ಆರ್. ವಿ. ದೇಶಪಾಂಡೆ ಅವರು ಸರ್ಕಾರ ವಿದ್ಯಾರ್ಥಿಗಳು ಮತ್ತು ಪಾಲಕರ ಹಿತಕಾಪಾಡುವಲ್ಲಿ ಬದ್ಧವಾಗಿದ್ದು ಈ ವಿಚಾರದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ವೆಂಕಟರಮಣರೆಡ್ಡಿ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.  ಸಮಿತಿಗೆ ಕಾರ್ಯದಶಿಗಳನ್ನು ನೇಮಿಸಿಕೊಳ್ಳಲು ಕೆಲವು ಅಡೆತಡೆಗಳಿರುವುದರಿಂದ ವಿರೋಧ ಪಕ್ಷದವರು ಒಪ್ಪುವಂತಹ ಉತ್ತಮ ನಿವೃತ್ತ ಕುಲಪತಿಯವರನ್ನು ನೇಮಿಸುವುದಾಗಿ ಭರವಸೆ ನೀಡಿದರಲ್ಲದೆ ವೃತ್ತಿ ಶಿಕ್ಷಣಕ್ಕೆ ನಿಗಧಿಪಡಿಸಲಾಗಿರುವ ಶುಲ್ಕವನ್ನು ೨೦೧೩-೧೪ ನೇ ಸಾಲಿಗೂ ಮುಂದುವರೆಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

 ಮುಖಪುಟ /ಸುದ್ದಿ ಸಮಾಚಾರ