ಮುಖಪುಟ /ಸುದ್ದಿ ಸಮಾಚಾರ 

ಕೊನೆ ದಾಳ ಉರುಳಿಸಿದ - ಉಕ್ಕಿನ ಮನುಷ್ಯ

Advaniಬೆಂಗಳೂರು, ಜೂ.೧೦: ನರೇಂದ್ರ ಮೋದಿ ಅವರನ್ನು ಪ್ರಧಾನಿ ಎಂದು ಬಿಂಬಿಸಿದರೆ ಬಿಜೆಪಿ ಒಡೆದು ಹೋಳಾಗುವುದು ಖಚಿತ ಎಂದು ಮಾಧ್ಯಮಗಳು ಹಲವು ಬಾರಿ ವಿಶ್ಲೇಷಿಸಿದ್ದವು. ಆದರೆ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಬಿಜೆಪಿ ನಿರಾಕರಿಸಿತ್ತು.

ಆದರೆ, ನರೇಂದ್ರ ಮೋದಿ ಅವರನ್ನು ಲೋಕಸಭಾ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸಿದ ೨೪ ಗಂಟೆಗಳಲ್ಲಿ ಬಿಜೆಪಿಯ ಭೀಷ್ಮ ಪಿತಾಮಹ ಎಲ್.ಕೆ. ಅಡ್ವಾಣಿ ರಾಜೀನಾಮೆ ನೀಡಿರುವುದು ಮಾಧ್ಯಮಗಳ ಊಹೆಯನ್ನು ನಿಜವಾಗಿಸಿದೆ.

ಇಲ್ಲಿ ಮಾಧ್ಯಮಗಳ ವರದಿ ನಿಜವಾಯಿತು ಎನ್ನುವುದಕ್ಕಿಂತ ಇಂಥ ಒಂದು ಸ್ಥಿತಿ ಬಂದೇ ಬರುತ್ತದೆ ಎಂದು ಮಾಧ್ಯಮಗಳು ಲೆಕ್ಕಹಾಕಲು ಸಕಾರಣಗಳೂ ಇದ್ದವು. ೫ ದಶಕಗಳಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿ, ತಾವು  ಪ್ರಧಾನಿ ಆಗಲೇಬೇಕು ಎಂದು ಕನಸು ಕಂಡಿದ್ದ ಅಡ್ವಾಣಿ ಅವರ ಕನಸು ನಿನ್ನೆ ಬಹುತೇಕ ನುಚ್ಚು ನೂರಾಗಿತ್ತು.

ಆರ್.ಎಸ್.ಎಸ್. ಸೇರಿದಂತೆ ಬಿಜೆಪಿಯ ಹಲವು ನಾಯಕರು ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಒಂದು ದಿಟ್ಟ ಹೆಜ್ಜೆ ಇಟ್ಟಿದ್ದರು. ಮೋದಿಯವರನ್ನು ಪ್ರಚಾರ ಸಮಿತಿ ಅಧ್ಯಕ್ಷರೆಂದು ಘೋಷಿಸಿದ ಉದ್ದೇಶವೇ ಮುಂಬರುವ ಚುನಾವಣೆಯಲ್ಲಿ ಎನ್.ಡಿ.ಎ. ಆಡಳಿತಕ್ಕೆ ಬರುವ ಸ್ಥಿತಿ ಬಂದರೆ ೮೫ ವರ್ಷ ವಯಸ್ಸಿನ ಅಡ್ವಾಣಿ ಅವರನ್ನು ಮೂಲೆ ಗುಂಪು ಮಾಡಿ, ಮೋದಿ ಅವರನ್ನೇ ಪ್ರಧಾನಿ ಮಾಡುವುದೇ ಆಗಿತ್ತು.

ಈ ಮರ್ಮವನ್ನು ಅರ್ಥಮಾಡಿಕೊಂಡೇ ಅಡ್ವಾಣಿ ತಮ್ಮ ಹಲವು ದಶಕಗಳ ಪ್ರಧಾನಿ ಆಸೆಯನ್ನು ಕೈಗೂಡಿಸಿಕೊಳ್ಳಲು ಕೊನೆಯ ದಾಳ ಉರುಳಿಸಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹೊರತು ಪಡಿಸಿ ಮೂರು ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಅಡ್ವಾಣಿ ಪಕ್ಷ ತೊರೆದರೆ, ರಾಜಕೀಯದಿಂದ ದೂರ ಉಳಿದರೆ ಬಿಜೆಪಿಗಷ್ಟೇ ಅಲ್ಲ ಎನ್.ಡಿ.ಎ.ಗೂ ದೊಡ್ಡ ನಷ್ಟ ಆಗುವುದರಲ್ಲಿ ಸಂದೇಹವೇ ಇಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಗೊತ್ತುಪಡಿಸುವ ಯತ್ನವನ್ನು ಆಡ್ವಾಣಿ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ. ಅವರ ಕೊನೆಯ  ದಾಳ ಜಯ ತಂದುಕೊಡುತ್ತದೆಯೇ. ಇಲ್ಲ ಅವರೇ ಮಣಿಯುತ್ತಾರೆಯೋ ಎಂಬುದನ್ನು ಕಾದು ನೋಡಬೇಕು.

 ಮುಖಪುಟ /ಸುದ್ದಿ ಸಮಾಚಾರ