ಮುಖಪುಟ /ಸುದ್ದಿ ಸಮಾಚಾರ 

ಅಡ್ವಾಣಿ ರಾಜೀನಾಮೆ- ಬಿಜೆಪಿಯಲ್ಲಿ ಭೂಕಂಪ

ಏಕೆ ಹೀಗಾಯ್ತೋ - ಎಲ್.ಕೆ. ಅಡ್ವಾಣಿಬೆಂಗಳೂರು, ಜೂ.೧೦: ನರೇಂದ್ರ ಮೋದಿ ವರ್ಚಸ್ಸಿನ ಲಾಭ ಪಡೆಯಲು ಹವಣಿಸಿ ಅವರಿಗೆ ಪ್ರಚಾರ ಸಮಿತಿಯ ಪಟ್ಟ ಕಟ್ಟಿದ ಬಿಜೆಪಿಯಲ್ಲಿ ಈಗ ಭೂಕಂಪವೇ ಆಗಿದೆ. ಪಕ್ಷದ ಭೀಷ್ಮ ಪಿತಾಮಹ  ಎಲ್.ಕೆ.ಆಡ್ವಾಣಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಒಂದನ್ನು ಬಿಟ್ಟು ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಿ ಸಮಿತಿ, ಸಂಸದೀಯ ಮಂಡಳಿ ಹಾಗೂ ಚುನಾವಣಾ ಪ್ರಚಾರ ಸಮಿತಿಯ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದಾಗಿ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಅಡ್ವಾಣಿ ತಿಳಿಸಿದ್ದಾರೆ.

ಜೀವನಪೂರ್ತಿ ಜನ ಸಂಘ ಹಾಗೂ ಭಾರತೀಯ ಜನತಾ ಪಕ್ಷಕ್ಕಾಗಿ ದುಡಿಯುವುದು ತಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿತ್ತು ಮತ್ತು ಅದು ಅನಂತವಾದ ಸಂತೃಪ್ತಿಯನ್ನೂ ತಂದುಕೊಟ್ಟಿತ್ತು ಆದರೆ ಪಕ್ಷದ ಪ್ರಸ್ತುತ ಕಾರ್ಯ ಚಟುವಟಿಕೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಡಾ.ಮುಖರ್ಜಿ, ದೀನ್ ದಯಾಳ್‌ಜೀ, ನಾನಾಜಿ ಮತ್ತು ವಾಜಪೇಯಿಜೀ ಹುಟ್ಟುಹಾಕಿದ, ತತ್ವ-ಸಿದ್ಧಾಂತಗಳಿಗೆ ಬದ್ಧವಾದ ಪಕ್ಷ ಎಂಬ ಭಾವನೆ ಈಗ ನನ್ನಲ್ಲಿ ಉಳಿದಿಲ್ಲ. ಅವರ ಏಕೈಕ ಕಳಕಳಿ ದೇಶ ಮತ್ತು ಅದರ ಜನರ ಬಗೆಗಾಗಿತ್ತು. ಆದರೆ ಈಗಿನ ಹೆಚ್ಚಿನ ನಾಯಕರೀಗ ಕೇವಲ ತಮ್ಮ ವೈಯಕ್ತಿಕ ಕಾರ್ಯನೀತಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮೂರೂ ಪ್ರಮುಖ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರವನ್ನು ಪತ್ರದಲ್ಲಿ ಉಲ್ಲೇಖಿಸಿದ್ದು, ಅದನ್ನೇ ತಮ್ಮ ರಾಜೀನಾಮೆ ಪತ್ರವೆಂದು ತಿಳಿದುಕೊಳ್ಳುವಂತೆ ಕೋರಿದ್ದಾರೆ.

ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಗೈರು ಹಾಜರಾಗಿ ತಮ್ಮ ಅಸಮಾಧಾನ ತೋರ್ಪಡಿಸಿದಾಗ್ಯೂ ಪಕ್ಷ ತಮ್ಮನ್ನು ಕಡೆಗಣಿಸಿ ನರೇಂದ್ರ ಮೋದಿಗೆ ಮುಂದಿನ ಚುನಾವಣೆಯ ಮುಂದಾಳುತ್ವ ನೀಡುವುದು ಅಡ್ವಾಣಿ ಅವರಿಗೆ ನೋವು ತಂದಿತ್ತು.

ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆಗೆ ಮುಂದಾಗಿದ್ದರು ಎನ್ನಲಾಗಿದೆ. ಆದರೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಸೇರಿದಂತೆ ಹಲವರು ರಾಜೀನಾಮೆ ನಿರ್ಧಾರ ಕೈಗೊಳ್ಳದಂತೆ. ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸದಂತೆ ಮನವಿ ಮಾಡಿದ್ದರು. ಇದಾವುದನ್ನೂ ಲೆಕ್ಕಿಸದೆ ಅಡ್ವಾಣಿ ಈ ನಿರ್ಧಾರ ಪ್ರಕಟಿಸಿದ್ದಾರೆ.

ಈ ಮಧ್ಯೆ ಇಂದು ಬೆಳಗ್ಗೆ ಅಡ್ವಾಣಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಯತ್ನಸಿದ ತಮ್ಮ ಶಿಷ್ಯ ನರೇಂದ್ರ ಮೋದಿ ಕರೆಯನ್ನೂ ಮೊದಲಿಗೆ ಅವರು ಸ್ವೀಕರಿಸಲಿಲ್ಲ ಎಂದು ತಿಳಿದುಬಂದಿದೆ. ಆದರೆ ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿರುವ ಮೋದಿ ತಾವು ಅಡ್ವಾಣಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಮುಂಬರುವ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯಲ್ಲಾಗಿರುವ ಈ ಬೆಳವಣಿಗೆ ಯುಪಿಎಗೆ ವರವಾಗುವ ಸಾಧ್ಯತೆ ಹೆಚ್ಚಾಗಿದೆ.

ಮನವೊಲಿಕೆ: ಅಡ್ವಾಣಿ ಅವರನ್ನು ಮನವೊಲಿಸಲು ಬಿಜೆಪಿ ಮುಂದಾಗಿದ್ದು, ರಾಜಿನಾಮೆ ಬಗ್ಗೆ ಮರು ಪರಿಶೀಲಿಸುವಂತೆ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.

ಅಡ್ವಾಣಿ ರಾಜಿನಾಮೆ ನಿರ್ಧಾರ ಹೊರ ಬೀಳುತ್ತಿದ್ದಂತೆ ಅವರ ನಿವಾಸಕ್ಕೆ ದೌಡಾಯಿಸಿದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಸಂಸತ್‌ನ ಪ್ರತಿಪಕ್ಷ ನಾಯಕರಾದ ಸುಷ್ಮಾ ಸ್ವರಾಜ್, ಅರುಣ್ ಜೈಟ್ಲಿ, ನಾಯಕರಾದ ವೆಂಕಯ್ಯ ನಾಯ್ಡು, ಅನಂತ್ ಕುಮಾರ್, ಬಲ್‌ಬಿರ್ ಪುಂಜ್ ಮತ್ತು ವಿ.ಕೆ.ಮಲ್ಹೋತ್ರ ಮೊದಲಾದವರು ಅಡ್ವಾಣಿ ಮನವೊಲಿಕೆಗೆ ಪ್ರಯತ್ನ ನಡೆಸಿದರು. ಆದರೆ ಯಾವುದಕ್ಕೂ ಅಡ್ವಾಣಿ ಮಣಿದಿಲ್ಲ.

ಈ ಮಧ್ಯೆ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ತಾವು ಆಡ್ವಾಣಿ ಅವರ ರಾಜಿನಾಮೆ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಡ್ವಾಣಿ ಅವರು ತಮ್ಮ ರಾಜಿನಾಮೆಯನ್ನು ಹಿಂಪಡೆಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ