ಮುಖಪುಟ /ಸುದ್ದಿ ಸಮಾಚಾರ 

ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರ ಪ್ರಾಕ್ಟೀಸ್
ನಿರ್ಲಕ್ಷ್ಯದಿಂದ ರೋಗಿ ಸಾವು ತನಿಖೆಗೆ ಆದೇಶ

Vidya Prasad, died due to negligence of a Doctor, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟ ವಿದ್ಯಾ ಪ್ರಸಾದ್ಬೆಂಗಳೂರು, ಜೂ.3- ನಗರದ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ರೋಗಿಯೊಬ್ಬರಿಗೆ ಬೇಜವಾಬ್ದಾರಿತನದಿಂದ ಶಸ್ತ್ರ ಚಿಕಿತ್ಸೆ ನಡೆಸಿ ಅವರ ಸಾವಿಗೆ ಕಾರಣರಾಗಿರುವ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಪಿ.ಕೆ. ರಾಜು ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ನಗರದ ವಿಕ್ಟೋರಿಯಾ ಆಸ್ಪತ್ರೆಯ ಬೋಧಕವರ್ಗದ ವೈದ್ಯರಾದ ಡಾ. ಪಿ.ಕೆ.ರಾಜು ಅವರು ಬೆಂಗಳೂರು ಶೇಷಾದ್ರಿಪುರದಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಸ್ಲಿಪ್ ಡಿಸ್ಕ್ (ಜಾರಿದ ಮೂಳೆ) ಸಮಸ್ಯೆಯಿಂದ ಬಳಲುತ್ತಿದ್ದ ವಿದ್ಯಾರಣ್ಯಪುರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದ ವಿದ್ಯಾ ಪ್ರಸಾದ್ ಅವರಿಗೆ ವೈದ್ಯಕೀಯ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ನಡೆಸಿ ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಮೃತರ ಪತಿ ಹಾಗೂ ನಗರದ  ವಕೀಲ ಎಚ್.ಎನ್.ಎಂ. ಪ್ರಸಾದ್ ಅವರು ವೈದ್ಯಕೀಯ ಶಿಕ್ಷಣ ಸಚಿವರಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ.

ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಹಾಗೂ ಸಂಸ್ಥೆಯ ಕಾರ್ಯ ನಿರ್ವಾಹಕ  ಅಧಿಕಾರಿ ರಾಮಣ್ಣ ಅವರನ್ನು ವಿಚಾರಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಬಿಎಂಸಿಆರ್ಐನ ಡೀನ್ ಸಿದ್ದಪ್ಪ  ತಿಳಿಸಿದ್ದಾರೆ.

ಘಟನೆ ವಿವರ - ಸ್ಲಿಪ್ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ಪತ್ನಿಯನ್ನು ಮಲ್ಲೇಶ್ವರದ ಸುಶ್ರುತ ಅರ್ಥೋಪೆಡಿಕ್ ಅಂಡ್ ಐ ಕೇರ್ ಕೇಂದ್ರದಲ್ಲಿ ಪರೀಕ್ಷೆಗೆ ಕರೆದುಕೊಂಡು ಹೋದಾಗ ಮೂಳೆತಜ್ಞರಾದ ಡಾ. ಪಿ.ಕೆ. ರಾಜು ಅವರು ಇಶಾ ಡಯಾಗ್ನಿಸ್ಟಿಕ್ ಸೆಂಟರ್ನಲ್ಲಿ ಕೆಲವು ತಪಾಸಣೆ ಮಾಡಿಸಿ ನಂತರ ಪೋರ್ಟಿಸ್ ಆಸ್ಪತ್ರೆಗೆ ಸೇರಿಸುವಂತೆ ಸಲಹೆ ನೀಡಿ, ತಾವೇ ಶಸ್ತ್ರಚಿಕಿತ್ಸೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದರು, 2010ರ ಫೆಬ್ರವರಿ 11ರಂದು ಬೆಳಗ್ಗೆ ಶಸ್ತ್ರಚಿಕಿತ್ಸೆ ಮಾಡಿದ ಡಾ. ರಾಜು, ಆಪರೇಷನ್ ಯಶಸ್ವಿಯಾಗಿದೆ ಎಂದು ತಿಳಿಸಿದ ಕೆಲವೇ ಗಂಟೆಗಳಲ್ಲಿ  ರೋಗಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು ಇಲ್ಲಿ ಹೃದ್ರೋಗಕ್ಕೆ ಚಿಕಿತ್ಸೆ ನೀಡುವ ವ್ಯವಸ್ಥೆ ಮತ್ತು ತುರ್ತು ಚಿಕಿತ್ಸಾ ಸಾಧನ (ಪೇಸ್ ಮೇಕರ್) ಇಲ್ಲದ ಕಾರಣ ಅವರನ್ನು ದೇವರೇ ಕಾಪಾಡಬೇಕು ಎಂದು ಕೈಚೆಲ್ಲಿದರು. ತಕ್ಷಣವೇ ವೊಕಾರ್ಡ್ ಗೆ ಸ್ಥಳಾಂತರಿಸಿ ಎಂದು ಪ್ರಾರ್ಥಿಸಿದರೂ ಆ ಕಾರ್ಯ ಮಾಡಲಿಲ್ಲ. ಇದು ವೈದ್ಯಕೀಯ ನಿರ್ಲಕ್ಷ್ಯದಿಂದ ಆದ ಸಾವು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇತ್ತೀಚೆಗೆ ತಮಗೆ ಡಾ. ಪಿ.ಕೆ.ರಾಜು ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೋಧಕವರ್ಗದ ವೈದ್ಯರು ಎಂಬುದು ತಮಗೆ ತಿಳಿದು ಬಂದಿದೆ. ಸರ್ಕಾರಿ ವೈದ್ಯರಾದ ಅವರು ಹಣದಾಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ  ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಹೀಗೆ ವಿಶ್ರಾಂತಿರಹಿತ ದುಡಿಮೆಯಿಂದ ಸರ್ಕಾರದ ಕೆಲಸಕ್ಕೂ ನ್ಯಾಯ ಒದಗಿಸಲಾಗದೆ, ತಮ್ಮನ್ನು ನಂಬಿ ಬರುವ ಮುಗ್ದ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.

ಈ ಮಧ್ಯೆ ಡಾ. ಪಿ.ಕೆ. ರಾಜು ಅವರು ಶಸ್ತ್ರಚಿಕಿತ್ಸೆ ನಡೆಸುವ ಹಿಂದಿನ ದಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಸಾಮಾನ್ಯ ತಾಪಾಸಣೆ ಮಾಡಿದ ವೈದ್ಯ ಡಾ. ಅರುಣ್ ಅವರು ರೋಗಿಗೆ ಕಾರ್ಡಿಯಾಕ್ ರಿಸ್ಕ್ ಇನ್ ವ್ಯೂ ಆಫ್ ಎಲ್ಬಿಬಿಬಿ ಎಂದು ಕೇಸ್ ಶೀಟ್ ನಲ್ಲಿ ನಮೂದಿಸಿದ್ದಾರೆ. ಅದೇ ದಿನ ಸಾಯಂಕಾಲ ಇಶಾ ಡಯಾಗ್ನಸ್ಟಿಕ್ ಸೆಂಟರ್ ನಲ್ಲಿ ನಡೆಸಿದ ಕೆಲವು ಟೆಸ್ಟ್ ಗೆ ಸಂಬಂಧಿಸಿದಂತೆ ನೀಡಿರುವ ವರದಿಯಲ್ಲಿ ಗ್ರೇಡ್ 1 ಡ್ಯಾಸ್ಟಲಿಕ್ ಡಿಸ್ ಫಂಕ್ಷನ್ ಎಂದು ಬರೆದಿರುತ್ತಾರೆ. ಅಂದರೆ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಈ ಎಲ್ಲ ಅಂಶವೂ ಡಾ. ಪಿ.ಕೆ. ರಾಜು ಅವರಿಗೆ ಗೊತ್ತಿದ್ದರೂ  ಹೃದಯ ಸಂಬಂಧಿ ತೊಂದರೆ ಆದರೆ ತುರ್ತು ಚಿಕಿತ್ಸೆ ನೀಡಲು ಯಾವುದೇ ಮುಂಜಾಗರೂಕತಾ ಕ್ರಮ ಕೈಗೊಳ್ಳದೆ, ಹೃದಯತಜ್ಞರ ಸಲಹೆಯನ್ನೂ ಪಡೆಯದೆ  ಕೇವಲ ಹಣದ ಆಸೆಗಾಗಿ ವೈದ್ಯಕೀಯ ನಿರ್ಲಕ್ಷ್ಯದಿಂದ ಶಸ್ತ್ರ ಚಿಕಿತ್ಸೆ ನಡೆಸಿ ರೋಗಿಯ ಸಾವಿಗೆ ನೇರವಾಗಿ ಕಾರಣರಾಗಿರುತ್ತಾರೆ ಎಂದು ದೂರಿದ್ದಾರೆ. ಅಲ್ಲದೆ ಶಸ್ತ್ರಚಿಕಿತ್ಸೆಯ ಬಳಿಕ ಆಸ್ಪತ್ರೆಯ ಕೆಲವು ದಾಖಲೆಗಳನ್ನು ತಿದ್ದಿರುವುದು, ಸಮಯವನ್ನು ಬದಲಾಯಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.

ವೈದ್ಯರ ಈ ನಿರ್ಲಕ್ಷ್ಯದಿಂದ ತಮ್ಮ ಎರಡು ಮಕ್ಕಳು ತಾಯಿ ಇಲ್ಲದ ತಬ್ಬಲಿಗಳಾಗಿದ್ದಾರೆ. ತಾವು ಜೀವಮಾನ ಪರ್ಯಂತ ಪತ್ನಿಯ ಅಗಲಿಕೆಯ ನೋವು ಅನುಭವಿಸುವಂತಾಗಿದೆ. ತಮಗಾದ ನೋವು ಇನ್ನಾರಿಗೂ ಬಾರದಿರಲಿ ಎಂಬ ಕಾರಣದಿಂದ ಡಾ. ರಾಜು ಅವರ ವಿರುದ್ಧ ಕರ್ನಾಟಕ ವೈದ್ಯಕೀಯ ಮಂಡಳಿ ಹಾಗೂ ರಾಜ್ಯ ಗ್ರಾಹಕ ವೇದಿಕೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಎಚ್.ಎನ್.ಎಂ. ಪ್ರಸಾದ್ ತಿಳಿಸಿದ್ದಾರೆ.

ಕ್ರಮ -ಈ ದೂರಿನಲ್ಲಿನ ಅಂಶಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಡಾ. ರಾಜು ಅವರಿಂದ ಸೇವಾ ಲೋಪ ಆಗಿರುವುದು ಕಂಡು ಬಂದಿದೆ, ಹೀಗಾಗಿ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.  

ಮುಖಪುಟ /ಸುದ್ದಿ ಸಮಾಚಾರ