ಮುಖಪುಟ /ಸುದ್ದಿ ಸಮಾಚಾರ 

ಉತ್ತಮ ಬೆಳವಣಿಗೆ ಅಲ್ಲ- ಗುತ್ತೇದಾರ್

ಬೆಂಗಳೂರು, ಜೂ.೧:- ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪಕ್ಷದ ಹಿತದೃಷ್ಟಿಯಿಂದ  ಉತ್ತಮ ಬೆಳವಣಿಗೆ ಅಲ್ಲ ಎಂದು ಶಾಸಕ ಮಾಲಿಕಯ್ಯ ಗುತ್ತೇದಾರ್ ಹೇಳಿದ್ದಾರೆ.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ದೆಹಲಿಯಲ್ಲಿರುವ ರಾಜ್ಯದ ಪ್ರಭಾವಿ ನಾಯಕರು ಸ್ವಾರ್ಥ ಸಾಧನೆಗಾಗಿ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ. ಇಂಥ ಘಟನೆಗಳಿಗೆ ಅವರೇ ಕಾರಣ ಎಂದು ಆರೋಪಿಸಿದರು.

ಪಕ್ಷದಲ್ಲಿ ಹಿಂದೆ ಇಂಥ ಘಟನೆಗಳು ನಡೆಯುತ್ತಿರಲಿಲ್ಲ. ಇಂದಿರಾಗಾಂಧಿ, ಜವಾಹರಲಾಲ್ ನೆಹರೂ ಅವರು ಶಾಸಕಾಂಗ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಧಾನಪರಿಷತ್ ಮತ್ತು ರಾಜ್ಯಸಭೆಯ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದರು. ಆದರೆ ಈಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪಕ್ಷ ಸಂಪೂರ್ಣ ಕಡೆಗಣಿಸಿರುವುದು ತಮಗೂ ತೀವ್ರ ನೋವು ತಂದಿದೆ ಎಂದರು.

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವಾಗ ಎಲ್ಲ ವರ್ಗದ, ಸಮುದಾಯಕ್ಕೆ ಮಾನ್ಯತೆ ದೊರಕಬೇಕು. ಹೀಗೆ ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಗಳಿಂದ ಪಕ್ಷಕ್ಕೆ ಆಗುವ ಲಾಭದ ಬಗ್ಗೆ ಕೂಡ ಚಿಂತಿಸಬೇಕಾಗುತ್ತದೆ. ನಾಯಕರ ಒತ್ತಡಕ್ಕೆ ಮಣಿದು, ವರಿಷ್ಠರೇ ಆಯ್ಕೆ ಮಾಡುವುದಾದರೆ ಪ್ರತಿಪಕ್ಷ ನಾಯಕರಿಗೆ ಅಗೌರವ ತೋರಿಸಿದಂತಾಗುತ್ತದೆ ಎಂದರು.

ಇದು ಹೀಗೇ ಮುಂದುವರಿದರೆ ಪಕ್ಷಕ್ಕೆ ದೊಡ್ಡ ನಷ್ಟ ಆಗುವುದರಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಕೆ ನೀಡಿದರು. ನಾನು ಹಿಂದಿನಿಂದಲೂ ಪಕ್ಷದಲ್ಲಿ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳುತ್ತಿದ್ದೆ. ಈಗ ಪಕ್ಷದ ವರ್ತನೆಯಿಂದ ಕಾಂಗ್ರೆಸ್‌ಗೇ ಹಾನಿ ಆಗುತ್ತಿದೆ ಎಂದರು.

ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಸಮುದಾಯವನ್ನು ಸೆಳೆಯಬಲ್ಲ ನಾಯಕರು, ಅವರು ಪಕ್ಷದ ಪ್ರಚಾರದಲ್ಲಿ ಪಾಲ್ಗೊಂಡು ಜನರನ್ನು ಆಕರ್ಷಿಸುತ್ತಿದ್ದರು. ಆದರೆ ಈಗ ಹೈದ್ರಾಬಾದ್ ಕರ್ನಾಟಕ ಭಾಗದಿಂದ ಆಯ್ಕೆ ಮಾಡಿರುವ ಅಭ್ಯರ್ಥಿ ಯಾವ ಸಭೆ, ಸಮಾರಂಭಕ್ಕೆ ಹೋಗಿ ಭಾಷಣ ಮಾಡಿದ್ದಾರೆ. ಅವರಿಂದ ಪಕ್ಷಕ್ಕೆ ಆಗುವ ಲಾಭ ಏನು ಎಂದು ಪರೋಕ್ಷವಾಗಿ ಸರಡಗಿ ಅವರ ಆಯ್ಕೆಯನ್ನು ಪ್ರಶ್ನಿಸಿದರು.

ಸಮರ್ಥನೆ:- ಸಿದ್ದರಾಮಯ್ಯ ಅವರು ಕೈಗೊಂಡಿರುವ ರಾಜೀನಾಮೆ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ನಾನೇ ಆ ಸ್ಥಾನದಲ್ಲಿದ್ದರೂ ಹೀಗೇ ವರ್ತಿಸುತ್ತಿದ್ದೆ. ಯಾವುದೇ ನಾಯಕನ ಸ್ವಾಭಿಮಾನಕ್ಕೆ ಚ್ಯುತಿ ಆದಾಗ ಹೀಗೆಯೇ ವರ್ತಿಸುತ್ತಾರೆ ಎಂದರು.

ಪಕ್ಷದ ಹಿತದೃಷ್ಟಿಯಿಂದ ನಾವೂ ಕೂಡ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸುತ್ತೇವೆ. ಆದರೆ, ದೆಹಲಿಯಲ್ಲಿ ಕುಳಿತು ಯಾರದೋ ಒತ್ತಡದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡುತ್ತಾ ಹೋದರೆ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತದೆ ಎಂದ ಅವರು, ಪಕ್ಷ ಬಲವಾಗಿ ಬೆಳೆಯಬೇಕಾದರೆ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಎಲ್ಲ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹಿರಿಯ ನಾಯಕರಿಗೆ ಮಾನ್ಯತೆ ನೀಡಬೇಕು ಎಂದರು.

ದೆಹಲಿಯಲ್ಲಿರುವ ಕೆಲವರು ಕಾಂಗ್ರೆಸ್ ಹೈಕಮಾಂಡ್ ಅನ್ನು ದಾರಿ ತಪ್ಪಿಸುತ್ತಿದ್ದಾರೆ. ವರಿಷ್ಠರು ಕೂಡ ಇವರ ಮಾತಿಗೆ ಬೆಲೆ ನೀಡುತ್ತಿದ್ದಾರೆ. ಎ.ಐ.ಸಿ.ಸಿ. ವರಿಷ್ಠೆ ಸೋನಿಯಾಗಾಂಧಿ ಅವರು ಇಂಥವರ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ನಾವೆಲ್ಲರೂ ಸಿದ್ದರಾಮಯ್ಯ ಅವರೊಂದಿಗೆ ಇದ್ದೇವೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ನಿಂದ ದೂರವಾದರೆ ಪಕ್ಷಕ್ಕೆ ರಾಜ್ಯದಲ್ಲಿ ಭವಿಷ್ಯವೇ ಇಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್‌ನಲ್ಲಿರುವ ಗುಂಪುಗಾರಿಕೆಯನ್ನು ಸರಿಪಡಿಸುವ ಕಾರ್ಯವನ್ನು ವರಿಷ್ಠರು ಮಾಡಬೇಕು ಎಂದರು.

ಮುಖಪುಟ /ಸುದ್ದಿ ಸಮಾಚಾರ