ಮುಖಪುಟ /ಸುದ್ದಿ ಸಮಾಚಾರ 

ಪ್ರತಿಪಕ್ಷ ನಾಯಕ ಸ್ಥಾನಕ್ಕೆ
ಸಿದ್ದರಾಮಯ್ಯ ರಾಜೀನಾಮೆ

siddaramaiahಬೆಂಗಳೂರು, ಜೂ.೧:- ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ನನ್ನ ಜೊತೆ ಯಾವುದೇ ಚರ್ಚೆ ನಡೆಸಿಲ್ಲ ಇದರಿಂದ ಪಕ್ಷದ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಕಳೆದುಕೊಂಡಿದೆ ಎಂಬ ಅನುಮಾನ ಮೂಡಿದ್ದು  ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಸಿದ್ದರಾಮಯ್ಯ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಸಂಪ್ರದಾಯಗಳನ್ನು ಮುರಿದಿದೆ. ಇದರಿಂದ ನಾನು ಅಲಂಕರಿಸಿದ್ದ ಸ್ಥಾನಕ್ಕೆ ಚ್ಯುತಿ ಬಂದಿದ್ದು, ಆ ಸ್ಥಾನದ ಗೌರವ ಕಾಪಾಡಲು ನಾನು ರಾಜೀನಾಮೆ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಹೈಕಮಾಂಡ್ ಶಾಸಕಾಂಗ ಪಕ್ಷದ ನಾಯಕನಾದ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ, ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ.  ಹೀಗಾಗಿ ವಿಧಾನಸಭೆಯ ಪ್ರತಿಪಕ್ಷ ಸ್ಥಾನದ ಗೌರವ ಕಾಪಾಡಲು ರಾಜೀನಾಮೆ ನೀಡುವುದು ಅನಿವಾರ್ಯವಾಯಿತು. ಯಾರೇ ಆ ಸ್ಥಾನದಲ್ಲಿದ್ದರೂ, ತಮ್ಮ ಸ್ಥಾನಕ್ಕೆ ಚ್ಯುತಿ ಬಂದಾಗ ಹೀಗೆಯೇ ವರ್ತಿಸಬೇಕು, ಹೀಗಾಗಿ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ, ಪಕ್ಷದ ಉಸ್ತುವಾರಿ ಹೊತ್ತಿರುವ ಮಧುಸೂದನ ಮಿಸ್ತ್ರೀ ಅವರಿಗೆ ಒಂದು ಸಾಲಿನ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದರು. 

ನೀವು ಹಿಂದೆಯೂ ರಾಜೀನಾಮೆ ನೀಡಿ ಮತ್ತೆ ವಾಪಸ್ ಪಡೆದಿದ್ದೀರಿ, ಈಗಲೂ ಹಾಗೇ ಮಾಡುತ್ತೀರಾ ಎಂದಾಗ, ಕಡೂರು ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲನುಭವಿಸಿದ ಸಂದರ್ಭದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದೆ, ಒತ್ತಡಕ್ಕೆ ಮಣಿದು ಹಿಂದಕ್ಕೆ ಪಡೆದೆ, ಆ ವಿಚಾರವೇ ಬೇರೆ, ಈ ಸನ್ನಿವೇಶವೇ ಬೇರೆ. ಇಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕನಾದ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ. ಖುರ್ಚಿಗಿಂತಲೂ ಸ್ವಾಭಿಮಾನ ಮುಖ್ಯ ಎಂದರು. ಯಾವುದೇ ಕಾರಣಕ್ಕೂ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ, ನಿರ್ಧಾರ ಬದಲಿಸುವುದಿಲ್ಲ ಎಂದರು.

ತಾವು ವಿಧಾನಸಭೆಯ ಪ್ರತಿಪಕ್ಷ ಸ್ಥಾನಕ್ಕೆ ಮಾತ್ರವೇ ರಾಜೀನಾಮೆ ನೀಡಿದ್ದರೂ, ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ ಅವರುಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ದಾವಣಗೆರೆಯಲ್ಲಿ  ಹಾಲುಮತಸ್ಥರು ನಡೆಸಿದ ಸಮಾವೇಶದಲ್ಲಿ ನಿಮ್ಮನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ನಿಮ್ಮನ್ನು ಪಕ್ಷ ಕಡೆಗಣಿಸಿದೆಯೇ ಎಂದು ಪ್ರಶ್ನಿಸಿದಾಗ, ಅದಕ್ಕೂ ಇದಕ್ಕೂ ಸಂಬಂಧವಿಲ್ಲ, ಆ ಸಮಾವೇಶ ನಡೆಸಿದ್ದು ಕುರುಬ ಸಮುದಾಯ, ಅದಕ್ಕೂ ಇದಕ್ಕೂ ತಾಳೆ ಹಾಕುವುದು ಸರಿಯಲ್ಲ ಎಂದರು.

ರಾಜ್ಯ ರಾಜಕಾರಣದಲ್ಲಿ ನನಗೆ ಯಾರೂ ವೈರಿಗಳು, ಶತ್ರುಗಳು ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾನು ಇಂದು ಪಕ್ಷದ ಅಭ್ಯರ್ಥಿಗಲು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಜರಿರುವುದಿಲ್ಲ. ಆದರೆ ಮತದಾನದ ದಿನ ನನ್ನ ಹಕ್ಕು ಚಲಾಯಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ ಇಷ್ಟು ದಿನ ಒಳಗೊಳಗೆ ನಡೆಯುತ್ತಿದ್ದ ಭಿನ್ನಮತ ಇಂದು ಜ್ವಾಲಾಮುಖಿಯಾಗಿ ಸ್ಫೋಟಿಸಿದ್ದು, ಕಾಂಗ್ರೆಸ್ ಭಿನ್ನಮತವೂ ಬಿಜೆಪಿ ಭಿನ್ನಮತದಂತೆ ಬಹಿರಂಗವಾಗಿದೆ. 

ಮುಖಪುಟ /ಸುದ್ದಿ ಸಮಾಚಾರ